ಕನ್ನಡಪ್ರಭ ವಾರ್ತೆ ಅರಸೀಕೆರೆ
ಹಬ್ಬ, ಜಾತ್ರೆ ಮತ್ತು ಉತ್ಸವಗಳು ಗ್ರಾಮೀಣ ಬದುಕಿನಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಬೆಲೆಗಳನ್ನು ಹೊತ್ತಿವೆ. ಇವುಗಳು ಸೌಹಾರ್ದತೆ ಮತ್ತು ಸಹಕಾರದಿಂದ ನಡೆದರೆ ಗ್ರಾಮೀಣ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.ತಾಲೂಕಿನ ಇತಿಹಾಸ ಪ್ರಸಿದ್ಧ ಮಾಡಾಳು ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ಪೂರ್ವಜರು ಅನುಸರಿಸಿದ ಸಂಪ್ರದಾಯಗಳು ಕೇವಲ ಆಚರಣೆಗಳಲ್ಲ, ಅವು ಜೀವನದ ಮೌಲ್ಯಗಳ ಪ್ರತಿಬಿಂಬ. ಇಂತಹ ಧಾರ್ಮಿಕ ಆಚರಣೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಶಾಸಕರು ಹೇಳಿದರು.
ಯಾವುದೇ ಕ್ಷುಲ್ಲಕ ಕಾರಣಕ್ಕೂ ಗ್ರಾಮಸ್ಥರಲ್ಲಿ ಭಿನ್ನಾಭಿಪ್ರಾಯ ಉಂಟಾಗಬಾರದು. ಎಲ್ಲರೂ ಒಗ್ಗೂಡಿದಾಗ ಮಾತ್ರ ಗ್ರಾಮೀಣ ಪ್ರಗತಿ ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು.ಹಾರನಹಳ್ಳಿ ಸುಕ್ಷೇತ್ರ ಕೊಡಿ ಮಠದ ಪರಮ ತಪಸ್ವಿ ಶಿವಲಿಂಗ ಮಹಾಸ್ವಾಮೀಜಿ ಅವರ ಆಶೀರ್ವಾದದಿಂದ ಹಾಗೂ ಜಗದ್ಗುರು ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಮಾರ್ಗದರ್ಶನದಿಂದ, ಈ ಕ್ಷೇತ್ರವು ಸಾವಿರಾರು ಭಕ್ತರ ನಂಬಿಕೆಯ ಸ್ಥಳವಾಗಿದೆ. ಸ್ವಾಮೀಜಿಯವರ ಧಾರ್ಮಿಕ ಸೇವೆ ಮೂಲಕ ಲಕ್ಷಾಂತರ ಭಕ್ತರು ಈ ಕ್ಷೇತ್ರಕ್ಕೆ ಆಕರ್ಷಿತರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಹೆಚ್ಚಿನ ಅಭಿವೃದ್ಧಿ ಸಾಧಿಸಲಿದೆ ಎಂದು ಶಾಸಕರು ಭರವಸೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎಸ್. ನಟರಾಜ್, ಮಾಲೂರು ಮುಖಂಡ ಮಲ್ಲಿಕಾರ್ಜುನಪ್ಪ, ಎಂ.ಸಿ. ನಟರಾಜ್, ಮಾಡಾಳು ಶಿವಲಿಂಗಪ್ಪ, ರಾಂಪುರ ಸುರೇಶ್, ಬೊಮ್ಮಸಮುದ್ರ ಮಹೇಶ್ ಭಾಗವಹಿಸಿದ್ದರು.ಎಂ.ಎಸ್. ಮುರಳೇಗೌಡ, ಎನ್.ಜಿ. ಶಿವಣ್ಣ, ಸ್ವಾಮಿ, ಚಂದ್ರಪ್ಪ,ಎಂ.ಡಿ. ಸೋಮಶೇಖರ್, ದಾಸಪ್ಪ, ಕಟ್ನಿ ತಿಮಯ್ಯ ಮತ್ತು ಇತರರು ಉಪಸ್ಥಿತರಿದ್ದರು.