ಈದ್ ಮಿಲಾದ್ ಸಮಿತಿಯಿಂದ ಸಾಮೂಹಿಕ ವಿವಾಹ ಮಹೋತ್ಸವ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿಮುಸ್ಲಿಂ ಜನಾಂಗವು ಎಲ್ಲ ಜಾತಿ, ಧರ್ಮದವರೊಂದಿಗೆ ಸೌಹಾರ್ದಯುತವಾಗಿ ಜೀವನ ಸಾಗಿಸುವ ಮೂಲಕ ಧಾರ್ಮಿಕ ಸಾಮರಸ್ಯ ಗಟ್ಟಿಗೊಳಿಸಬೇಕಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಖ್ ಹೇಳಿದರು.
ಇಲ್ಲಿನ ಹಜರತ್ ರಾಜಬಾಗ್ ಸವಾರ್ (ಯಮನೂರುಸ್ವಾಮಿ) ದರ್ಗಾದಲ್ಲಿ ಮುಹಮ್ಮದ್ ಪೈಗಂಬರ್ ಅವರ 1500ನೇ ಜನ್ಮ ದಿನಾಚರಣೆ ಅಂಗವಾಗಿ ಈದ್ ಮಿಲಾದ್ ಸಮಿತಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಲ್ಲಿನ ಮಿಲಾದ್ ಸಮಿತಿಯವರು ಬಡ ಮುಸ್ಲಿಮರಿಗೆ ಸಾಮೂಹಿಕ ವಿವಾಹ ಆಯೋಜನೆ ಮಾಡಿರುವುದು ಶ್ಲಾಘನೀಯ. ರಾಜ್ಯ ಸರ್ಕಾರ ಶಾದಿ ಭಾಗ್ಯ ಯೋಜನೆಗೆ ಮರು ಚಾಲನೆ ನೀಡಿದೆ. ವಿಜಯನಗರ ಜಿಲ್ಲೆಯಲ್ಲಿ ಸಾಮೂಹಿಕ ವಿವಾಹ ಮಾಡಿಕೊಳ್ಳುವ 100 ಜೋಡಿಗಳಿಗೆ ತಲಾ 50 ಸಾವಿರ ಪ್ರೋತ್ಸಾಹ ಧನ ಸಿಗಲಿದೆ. ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸರ್ಕಾರ ₹ನಾಲ್ಕು ಸಾವಿರ ಕೋಟಿ ಮೀಸಲಿಟ್ಟಿದೆ ಎಂದರು.
ಪ್ರತಿ ತಾಲೂಕು ಕೇಂದ್ರದಲ್ಲಿ ಮೌಲಾನಾ ಅಜಾದ್ ಆಂಗ್ಲ ಮಾಧ್ಯಮ ಶಾಲೆ ತೆರೆಯಲಾಗಿದೆ. ಈ ಸೌಲಭ್ಯ ಸದ್ಭಳಕೆ ಮಾಡಿಕೊಳ್ಳಿ ಎಂದರು.ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಮಾತನಾಡಿ, ಭಾವೈಕ್ಯ ಸಾರುವ ದರ್ಗಾದಲ್ಲಿ ಮುಸ್ಲಿಂ ಯುವಕರು ಸಮಾಜಮುಖಿ ಕೆಲಸದೊಂದಿಗೆ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸಾಮರಸ್ಯ ಬೆಸೆಯುವ ಒಳ್ಳೆಯ ಕೆಲಸಕ್ಕೆ ಎದೆಗುಂದದೇ ಧೈರ್ಯವಾಗಿರಿ ಎಂದರು.
ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಮಾತನಾಡಿ, ಸರ್ಕಾರ ಜನಸಂಖ್ಯೆ ಆಧರಿಸಿ ಬಜೆಟ್‌ನಲ್ಲಿ ಹಣ ಮೀಸಲಿಡಲಿದೆ. ಜಾತಿ ಗಣತಿ ಸಂದರ್ಭದಲ್ಲಿ ಕುಟುಂಬದ ವಿವರವನ್ನು ಕಡ್ಡಾಯವಾಗಿ ನಮೂದಿಸಬೇಕಿದೆ, ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ ಎಂದರು.ಮುಖಂಡರಾದ ಡಿ.ಜಾವೀದ್ ಬಾಷಾ, ಕೆ.ಗೌಸ್ ಮೊಹಿದ್ದೀನ್, ಎನ್.ಎಂ. ನೂರ್ ಅಹ್ಮದ್, ಬಿಚ್ಚುಗತ್ತಿ ಖಾಜಾ ಹುಸೇನ್ ಮಾತನಾಡಿದರು. ಮಿಲಾದ್ ಸಮಿತಿ ಅಧ್ಯಕ್ಷ ಬಿ.ಸದ್ದಾಂ ಅಧ್ಯಕ್ಷತೆ ವಹಿಸಿದ್ದರು. ಎನ್.ಇರ್ಫಾನ್, ಬಡೇಸಾಬ್, ಮುಕ್ತುಂಸಾಬ್, ಹುಸೇನ್ ಸಾಬ್, ಅಜರುದ್ದೀನ್ ಇತರರಿದ್ದರು.
ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 9 ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು.