ಪ್ರಕೃತಿ ಸಮತೋಲನಕ್ಕೆ ಧರ್ಮಾಚರಣೆಯೊಂದೇ ಮಾರ್ಗ: ಸ್ವರ್ಣವಲ್ಲೀ ಶ್ರೀ

KannadaprabhaNewsNetwork |  
Published : Feb 25, 2026, 02:45 AM IST
ಯಲ್ಲಾಪು ತಾಲೂಕಿನ ಚಂದಗುಳಿಯ ವರ್ಧಂತಿ ಉತ್ಸವದಲ್ಲಿ ಸ್ವರ್ಣವಲ್ಲೀ ಶ್ರೀಗಳು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಸಮಾಜದಲ್ಲಿಂದು ಅಧರ್ಮಗಳು ಹೆಚ್ಚುತ್ತಿರುವುದಕ್ಕೆ ಹೊಸ ಹೊಸ ರೋಗ ರುಜಿನಗಳು, ಪ್ರಕೃತಿ ವಿಕೋಪಗಳು ಅಲ್ಲದೇ, ಪ್ರಕೃತಿಯ ಮೇಲೂ ರೋಗವುಂಟಾಗಲು ಕಾರಣವಾಗುತ್ತಿವೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಸಮಾಜದಲ್ಲಿಂದು ಅಧರ್ಮಗಳು ಹೆಚ್ಚುತ್ತಿರುವುದಕ್ಕೆ ಹೊಸ ಹೊಸ ರೋಗ ರುಜಿನಗಳು, ಪ್ರಕೃತಿ ವಿಕೋಪಗಳು ಅಲ್ಲದೇ, ಪ್ರಕೃತಿಯ ಮೇಲೂ ರೋಗವುಂಟಾಗಲು ಕಾರಣವಾಗುತ್ತಿವೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಧರ್ಮಾಚರಣೆಯೊಂದೇ ಮಾರ್ಗ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.

ತಾಲೂಕಿನ ಚಂದಗುಳಿಯ ಶ್ರೀ ಸಿದ್ಧಿವಿನಾಯಕ (ಘಂಟೆ ಗಣಪತಿ) ದೇವಸ್ಥಾನದಲ್ಲಿ ನಡೆದ ವರ್ಧಂತಿ ಉತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದೇವಸ್ಥಾನಗಳಲ್ಲಿ ಮಡಿ, ಶುದ್ಧತೆಯ ಮಹತ್ವದ ಕುರಿತು ವಿವರಿಸಿದ ಶ್ರೀಗಳು, ದೇವಸ್ಥಾನಗಳಲ್ಲಿ ನಡೆಯುವ ನಿತ್ಯಪೂಜೆ, ಹಬ್ಬ-ಹರಿದಿನಗಳಲ್ಲಿ ವಿಶೇಷ ಪೂಜೆ, ಆಚರಣೆಗಳು ಶಾಸ್ತ್ರೋಕ್ತವಾಗಿ ನಡೆಯಬೇಕು. ಆಗ ಮಾತ್ರ ದೇವತಾ ಸಾನ್ನಿಧ್ಯ ಬಲಗೊಂಡು ಭಕ್ತರಿಗೆ ದೇವರ ಅನುಗ್ರಹ ಮತ್ತು ಬೇಡಿಕೆಯೂ ಲಭಿಸಬಹುದು ಎಂದರು.

ಶ್ರೀಗಳು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿಯಿಂದ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು.

ದೇವಸ್ಥಾನದ ಮೊಕ್ತೇಸರ ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ, ವೇ. ನಾಗರಾಜ ಭಟ್ಟ ಕೋಣೆಮನೆ, ಆಡಳಿತ ಮಂಡಳಿಯ ಸದಸ್ಯರು, ಅರ್ಚಕರು ಇದ್ದರು.

ವರ್ಧಂತಿ ಉತ್ಸವ, ಭಕ್ತಿ ಸಂಗೀತ ಕಾರ್ಯಕ್ರಮ

ಚಂದಗುಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವರ್ಧಂತಿ ಉತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಬೆಳಗ್ಗೆ ೯ರಿಂದ ಮಹಾ ಸಂಕಲ್ಪ, ಗಣಪತಿ ಪುಣ್ಯಾಹ, ಮಹಾಗಣಪತಿ ಅಥರ್ವಶೀರ್ಷ ಪಾರಾಯಣ ಹಾಗೂ ಹವನ, ಪೂರ್ಣಾಹುತಿ ನಡೆಯಿತು. ಪುರೋಹಿತ ವೆಂಕಟರಮಣ ಭಟ್ಟ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.ಉತ್ಸವದ ಪ್ರಯುಕ್ತ ಮಧ್ಯಾಹ್ನ ನಡೆದ ಭಕ್ತಿ ಸಂಗೀತ ಕಾರ್ಯಕ್ರಮ ಕಲಾಸಕ್ತರ ಮೆಚ್ಚುಗೆ ಗಳಿಸಿತು. ಪ್ರಸನ್ನ ಭಟ್ಟ ಹುಲಿಮನೆ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಪ್ರದೀಪ ಕೋಟೆಮನೆ, ನಾಗೇಂದ್ರ ಭಟ್ಟ ಹುಲಿಮನೆ ತಬಲಾದಲ್ಲಿ, ಸುದೇಶ ಭಟ್ಟ ಮಣ್ಮನೆ ಸಂವಾದಿನಿಯಲ್ಲಿ ಹಾಗೂ ಅನಂತ ಯಲ್ಲಾಪುರಕರ್ ತಾಳದಲ್ಲಿ ಸಹಕರಿಸಿದರು.

ದೇವಸ್ಥಾನದ ಮೊಕ್ತೇಸರ ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ ಕಲಾವಿದರನ್ನು ಗೌರವಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯವಸಾಯದಲ್ಲಿ ತಂತ್ರಜ್ಞಾನದ ಅಳವಡಿಕೆ ಅವಶ್ಯ: ಚೇತನಾ ಪಾಟೀಲ
ಸಿಎಂ ಜೊತೆ ಚರ್ಚಿಸಿ ವಿವಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ: ಸಚಿವ ಡಾ. ಎಂ.ಸಿ. ಸುಧಾಕರ್