ಬಾಳಿಗೆ ಬೆಳಕಾಗುವ ಗುರುವಿನ ಸ್ಮರಣೆ ಮಾಡಿ

KannadaprabhaNewsNetwork |  
Published : Jul 12, 2025, 12:32 AM IST
(ಫೋಟೋ 11ಬಿಕೆಟಿ1, ಗುರುಪೂರ್ಣಿಮೆಕಾರ್ಯಕ್ರಮದಲ್ಲಿ ಪ್ರಾಚಾರ್ಯ ಶ್ರೀನಿವಾಸ ನರಗುಂದ  ಮಾತನಾಡಿದರು. | Kannada Prabha

ಸಾರಾಂಶ

ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಗುರುವಿನ ಪಾತ್ರ ದೊಡ್ಡದು. ಅವರ ಆ ಕೊಡುಗೆಯನ್ನು ಕೃತಜ್ಞತೆಯಿಂದ ಸ್ಮರಿಸಿ ವಂದನೆ ಸಮರ್ಪಿಸುವುದಕ್ಕಾಗಿ ಗುರು ಪೂರ್ಣಿಮೆ ಆಚರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜ್ಞಾನವೆಂಬ ದೀಪದಿಂದ ಅಜ್ಞಾನದ ಕತ್ತಲೆ ನಿವಾರಿಸಿ, ಬಾಳಿಗೆ ಬೆಳಕಾಗುವ ಗುರುವಿನ ಸ್ಮರಣೆ ಮಾಡುವುದು ಎಲ್ಲರ ಕರ್ತವ್ಯ ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.

ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್.ನರಸಾಪೂರ ಕಲಾ ಹಾಗೂ ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಸಾಂಸ್ಕೃತಿಕ ಚಟುವಟಿಕೆ ವಿಭಾಗ ಆಯೋಜಿಸಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಗುರುವಿನ ಪಾತ್ರ ದೊಡ್ಡದು. ಅವರ ಆ ಕೊಡುಗೆಯನ್ನು ಕೃತಜ್ಞತೆಯಿಂದ ಸ್ಮರಿಸಿ ವಂದನೆ ಸಮರ್ಪಿಸುವುದಕ್ಕಾಗಿ ಗುರು ಪೂರ್ಣಿಮೆ ಆಚರಿಸಲಾಗುತ್ತಿದೆ. ಗುರುವಿನ ನಡೆ-ನುಡಿ, ಆಚಾರ- ವಿಚಾರ ವ್ಯಕ್ತಿಗಳ ಮೇಲೆ ಪೂರಕ ಪ್ರಭಾವ ಬೀರುತ್ತದೆ. ತನ್ನಜ್ಞಾನ ತೇಜಸ್ಸಿನಿಂದ ಶಿಷ್ಯನ ಅಜ್ಞಾನ ಕಳೆದು ಒಳ್ಳೆಯ ದಾರಿ ತೋರುವವನೇ ಗುರು ಆಗಿದ್ದಾನೆ ಎಂದರು.

ಉದಾತ್ತವಾದ ಮೌಲ್ಯಗಳನ್ನು ನೀಡುವುದರ ಮೂಲಕ ಮಾರ್ಗದರ್ಶನ ಮಾಡುವ ಶಕ್ತಿ ಹೊಂದಿರುವ ಪ್ರಕೃತಿಯೂ ಗುರು. ಅದು ಜ್ಞಾನದ ಆಗರವೂ ಹೌದು. ಅದನ್ನು ಯುವ ಸಮುದಾಯ ಅರಿಯಬೇಕು. ಜೀವನದಲ್ಲಿ ಮಹತ್ವದ ತಿರುವು ನೀಡಿ, ಬಾಳಲ್ಲಿ ಬೆಳಕು ಮೂಡಿಸಿ ಅರಿವಿನ ದಾರಿ ತೋರುವ ಗುರುವಿಗೆ ನಮಿಸುವುದು ಎಲ್ಲರ ಕರ್ತವ್ಯ ಎಂದರು.

ಮಹಾಭಾರತ ಬರೆದ ವೇದ ವ್ಯಾಸರ ಜಯಂತಿ ಕಾರಣಕ್ಕೆ ಗುರು ಪೂರ್ಣಿಮೆಗೆ ವ್ಯಾಸ ಪೂರ್ಣಿಮೆ ಎಂದೂ ಕರೆಯಲಾಗುತ್ತಿದೆ. ಸಾಹಿತ್ಯ ಮತ್ತು ಸಂಸ್ಕೃತಿಗೆ ಅವರು ನೀಡಿದ ಕೊಡುಗೆಯನ್ನು ನಾಡಿನ ಜ್ಞಾನ ಸಂಪತ್ತಾಗಿರುವ ಅವರ ಹಲವು ರಚನೆಗಳನ್ನು ಯುವಕರು ಅಧ್ಯಯನ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಇಂತಹ ದಿನಾಚರಣೆಗಳು ಸಹಕಾರಿಯಾಗಲಿವೆ ಎಂದರು. ಉಪನ್ಯಾಸಕಿ ಶ್ವೇತಾ ಕುಲಕರ್ಣಿ ಪ್ರಾರ್ಥಿಸಿ, ಸಂಯೋಜಕ ಡಾ.ಎಸ್.ಎಸ್.ಹಂಗರಗಿ ಸ್ವಾಗತಿಸಿ, ಎಚ್.ಎಸ್.ಗಿಡಗಂಟಿ ವಂದಿಸಿ, ಉಪನ್ಯಾಸಕಿ ಕೀರ್ತಿದಾಸರ ನಿರೂಪಿಸಿದರು.

PREV