ವಿಮೋಚನೆಗೆ ಹೋರಾಡಿದವರ ತ್ಯಾಗ ಬಲಿದಾನ ಸ್ಮರಿಸಿ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork |  
Published : Sep 18, 2026, 01:30 AM IST
ಚಿತ್ರ 17ಬಿಡಿಆರ್‌2ಬೀದರ್‌ನ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ‘ಕಲ್ಯಾಣ ಕರ್ನಾಟಕ ಉತ್ಸವ’ದಲ್ಲಿ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಗೌರವ ವಂದನೆ ಸ್ವೀಕರಿಸಿದರು. | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಹೋರಾಡಿದ ಅಮರ ದೇಶಭಕ್ತರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿ, ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಹೋರಾಡಿದ ಅಮರ ದೇಶಭಕ್ತರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿ, ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಅವರು ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ‘ಕಲ್ಯಾಣ ಕರ್ನಾಟಕ ಉತ್ಸವ’ದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 1947ರಲ್ಲಿ ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ, ಹೈದ್ರಾಬಾದ್‌ ನಿಜಾಮರು ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿದ್ದರಿಂದ ಈ ಭಾಗಕ್ಕೆ ಸ್ವಾತಂತ್ರ್ಯ ಸಿಗಲಿಲ್ಲ. ಪರಿಣಾಮವಾಗಿ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳು ರಜಾಕಾರರ ಕ್ರೂರ ದಬ್ಬಾಳಿಕೆಗೆ ತುತ್ತಾದವು ಎಂದರು.

ನೆಹರು ಮಾರ್ಗದರ್ಶನ, ಪಟೇಲ್‌ ಗಟ್ಟಿ ನಿರ್ಧಾರದಿಂದ ಸಿಕ್ಕ ಸ್ವಾತಂತ್ರ್ಯ :

ಪೂಜ್ಯ ಚನ್ನಬಸವ ಪಟ್ಟದ್ದೇವರು, ರಮಾನಂದ ತೀರ್ಥರು, ಶರಣಗೌಡ ಇನಾಮದಾರರು, ಭೀಮಣ್ಣ ಖಂಡ್ರೆ ಸೇರಿದಂತೆ ಸಾವಿರಾರು ಹೋರಾಟಗಾರರು ನಿರಂತರ ಹೋರಾಟ ನಡೆಸಿದರು. ಅಂತಿಮವಾಗಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ಮಾರ್ಗದರ್ಶನ ಹಾಗೂ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಗಟ್ಟಿ ನಿರ್ಧಾರದಿಂದ ನಡೆದ ಸೇನಾ ಕಾರ್ಯಾಚರಣೆಯ ಫಲವಾಗಿ 1948ರ ಸೆಪ್ಟೆಂಬರ್ 17ರಂದು ಈ ಭಾಗವು ನಿಜಾಮ್‌ ಆಡಳಿತದಿಂದ ವಿಮೋಚನೆಗೊಂಡಿತು ಎಂದರು.

ಉದ್ಯೋಗ, ಶಿಕ್ಷಣ ಕ್ಷೇತ್ರಕ್ಕೆ ಕಲಂ 371ಜೆ ವರದಾನವಾಗಿದೆ:

ಶತಮಾನಗಳ ಶಾಪ ಮತ್ತು ಹಿಂದುಳಿದರಿಕೆಯನ್ನು ನಿವಾರಿಸಲು ಜಾರಿಗೆ ಬಂದ ಸಂವಿಧಾನದ 371(ಜೆ) ತಿದ್ದುಪಡಿಯು ಈ ಭಾಗದ ಪಾಲಿಗೆ ವರವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ನೀಡಲಾದ ಈ ವಿಶೇಷ ಸ್ಥಾನಮಾನದಿಂದಾಗಿ ನೇಮಕಾತಿಯಲ್ಲಿ ಶೇ.75ರಿಂದ85 ರಷ್ಟು ಹಾಗೂ ರಾಜ್ಯಮಟ್ಟದಲ್ಲಿ ಶೇ. 8ರಷ್ಟು ಮೀಸಲಾತಿ, ಹಾಗೆಯೇ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 70ರಷ್ಟು ಸೀಟುಗಳು ಈ ಭಾಗದ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿದ್ದು, ಈ ಹಿಂದೆ ವರ್ಷಕ್ಕೆ ಕೇವಲ 60 ವೈದ್ಯ ಸೀಟು ಪಡೆಯುತ್ತಿದ್ದ ಜಾಗದಲ್ಲಿ ಇಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.

ಇದರ ಜೊತೆಗೆ ಬಸವಕಲ್ಯಾಣದಲ್ಲಿ 750 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪವನ್ನು ಬಸವ ಜಯಂತಿಯ ವೇಳೆ ಲೋಕಾರ್ಪಣೆಯಾಗಲಿದೆ. ಬೀದರ್‌ ಮಹಾನಗರ ಪಾಲಿಕೆಗೆ 200 ಕೋಟಿ, ಕಾರಂಜಾಕ್ಕೆ 180 ಕೋಟಿ ರು., ಪಾಪನಾಶ ದೇವಾಲಯಕ್ಕೆ ₹22 ಕೋಟಿ ಹಾಗೂ ಕೋಟೆಯ ಅಭಿವೃದ್ಧಿಗೆ 25 ಕೋಟಿ ಅನುದಾನ ತರಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಸಾಗರ ಖಂಡ್ರೆ, ಶಾಸಕರಾದ ರಹೀಮ್‌ ಖಾನ್‌, ಡಾ. ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನುಗ್ಗೇಹಳ್ಳಿ ಸೊಸೈಟಿಗೆ ಅಧ್ಯಕ್ಷರಾಗಿ ಕಾರೇಕೆರೆ ಪ್ರಕಾಶ್‌ ಆಯ್ಕೆ
ಪ್ರವಾಸೋದ್ಯಮ ಅಭಿವೃದ್ಧಿಯಿಂದ ಜಿಲ್ಲೆಯ ಸೌಕರ್ಯ ಮೇಲ್ದರ್ಜೆಗೆ: ಸಾಗರ ಖಂಡ್ರೆ