ಅನ್ನದಾನೀಶ್ವರ ಶಾಖಾ ಮಠದ ಮಹಾದೇವ ಸ್ವಾಮೀಜಿ । ತಳಕಲ್ಲ ಗ್ರಾಮದಲ್ಲಿ ಶಿವಾನುಭವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕುಕನೂರುಕಾಯಕವೇ ಕೈಲಾಸ ಎಂಬ ತತ್ವ ಅಳವಡಿಸಿಕೊಂಡು, ಕಾಯಕದೊಂದಿಗೆ ದೇವರ ಸ್ಮರಣೆ ಮಾಡಬೇಕು ಎಂದು ಅನ್ನದಾನೀಶ್ವರ ಶಾಖಾ ಮಠದ ಮಹಾದೇವ ಸ್ವಾಮೀಜಿ ಹೇಳಿದರು.
ತಾಲೂಕಿನ ತಳಕಲ್ಲ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಜರುಗಿದ 7ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಉತ್ತಮ ಬದುಕಿಗೆ ಕಾಯಕ ಅವಶ್ಯ. ಕಾಯಕದಿಂದಲೇ ಮಾತ್ರ ಬಡತನ ದೂರ ಮಾಡಲು ಸಾಧ್ಯ, ಈ ನಾಡಿನ ಶರಣರು ಕಾಯಕವೇ ಕೈಲಾಸ ಎಂಬ ಸತ್ಯವನ್ನು ಸಾರಿ ಅದರಂತೆಯೇ ನಡೆದು ತೊರಿಸಿಕೊಟ್ಟವರು ಎಂದರು.ಮಕ್ಕಳ್ಳಿಯ ಶಿವಾನಂದ ಸ್ವಾಮೀಜಿ ಮಾತನಾಡಿ, ಅತಿಯಾದ ಆಸೆ ಮನುಷ್ಯನನ್ನು ಹಾಳು ಮಾಡುತ್ತದೆ. ಇರುವುದರಲ್ಲಿಯೇ ಬದುಕು ನಡೆಸುವ ಕಲೆಯನ್ನು ನಾವುಗಳು ಕಲಿಯಬೇಕು. ಶರಣರು ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಾಣ ಮಾಡಲಿಲ್ಲ. ಅವರಿಂದ ಸಣ್ಣ ಸಣ್ಣ ಮನೆಗಳಲ್ಲಿಯೇ ದೊಡ್ಡ ದೊಡ್ಡ ಧರ್ಮದ ಕಾರ್ಯಗಳನ್ನು ಮಾಡಿ ತೋರಿಸಿದವರು. ಆದರೆ ನಾವುಗಳು ದೊಡ್ಡ ದೊಡ್ಡ ಮನೆಗಳಲ್ಲಿ ಇದ್ದೇವೆ. ಆದರೆ ಧರ್ಮದ ಕಾರ್ಯಗಳಿಗೆ ತನು ಮನ ಧನದಿಂದ ಸೇವೆ ಮಾಡುವುದನ್ನು ಮರೆತು ಬಿಟ್ಟಿದ್ದೇವೆ. ಮನೆ ದೊಡ್ಡದಿದ್ದರೆ ಸಾಲದು ಮನಸ್ಸು ದೊಡ್ಡದಿರಬೇಕು. ಧರ್ಮದ ಕಾರ್ಯಗಳಿಗೆ ಸದಾಕಾಲವೂ ದುಡಿಯುವುದನ್ನು ಕಲಿತಾಗ ಮಾತ್ರ ಈ ಜೀವನ ಪಾವನವಾಗಲೂ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಕಲಾವಿದರಾದ ಮಲ್ಲಣ್ಣ ಕರ್ಜಗಿ, ತಿಪ್ಪಣ್ಣ ತಳಬಾಳ ಸಂಗೀತ ಸೇವೆ ಮಾಡಿದರು. ಪ್ರಮುಖರಾದ ಮುದಿಯಪ್ಪ ಎ., ಮಲ್ಲಪ ಬಂಗಾರಿ, ಮಲ್ಲಯ್ಯ ಮಠದ, ಶರಣಪ್ಪ, ಶಿವಪ್ಪ, ಬಸವರಾಜ ಬ್ಯಾಳಿ, ಆನಂದ ಕುಕನೂರು, ಪ್ರಕಾಶ ಹತ್ತಿಕಟಿಗಿ ಮತ್ತು ಇತರರು ಇದ್ದರು.