ದಸರಾ ಬೊಂಬೆಗಳ ಪ್ರದರ್ಶನದಿಂದ ಗತವೈಭವದ ನೆನಪು

KannadaprabhaNewsNetwork |  
Published : Oct 03, 2024, 01:26 AM IST
0 ವರ್ಷದಿಂದ ದಸರಾ ಬೊಂಬೆಗಳ ಪ್ರದರ್ಶನ | Kannada Prabha

ಸಾರಾಂಶ

ಹೈಟೆಕ್ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವ ಇಂದಿನ ಪೀಳಿಗೆಯ ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯವನ್ನು ಪರಿಚಯಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ದಸರಾ ಬಂದಿತೆಂದರೆ ಕರ್ನಾಟಕದ ಜನತೆಗೆ ಸಂಭ್ರಮ, ಅಂದಿನ ಮೈಸೂರು ಮಹಾರಾಜರ ಆಳ್ವಿಕೆಯ ವೈಭವವನ್ನು ನೆನಪಿಗೆ ತರುವ ಅನೇಕ ದೃಶ್ಯಾವಳಿಗಳನ್ನು ಬೊಂಬೆಗಳ ಜೋಡಣೆಯ ಮೂಲಕ ಮನೆ ಮನೆಯಲ್ಲಿಯೂ ನೆನೆಸಿಕೊಳ್ಳುತ್ತೇವೆ ಎಂದು ಸೀತಾ ಮಹಿಳಾ ಸಂಘದ ಅಧ್ಯಕ್ಷೆ ಹಾಗೂ ಹಬ್ಬಗಳ ಸಾಂಪ್ರದಾಯಿಕ ವಿಚಾರವಂತೆ ಶಕುಂತಲಾ ಆನಂದ್ ಹೇಳಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಹಿಂದೂ ಸಮುದಾಯವು ಅನೇಕ ಹಬ್ಬಗಳನ್ನು ಆಚರಿಸುತ್ತದೆ. ಆದರೆ, ಐತಿಹಾಸಿಕ ಘಟನಾವಳಿಗಳು ಮತ್ತು ಮಹಾರಾಜರ ಆಳ್ವಿಕೆಯ ಕಾಲದಲ್ಲಿನ ಸಂಸ್ಕೃತಿಯನ್ನು ನೋಡಲು ಶರನ್ನವರಾತ್ರಿಯಿಂದ ಮಾತ್ರ ಸಾಧ್ಯ. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಮುಂದಿನ ಪೀಳಿಗೆಗೂ ಇದು ಮುಂದುವರೆಯಬೇಕು, ಕಳೆದ 40 ವರ್ಷಗಳಿಂದ ಪಟ್ಟಣದ ಮಾರುತಿ ನಗರದಲ್ಲಿರುವ ನಮ್ಮ ಮನೆಯಲ್ಲಿ ದಸರಾ ಬೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿ ಪ್ರದರ್ಶಿಸುತ್ತಾ ಬಂದಿದ್ದೇವೆ ಎಂದರು.

ಈ ಬಾರಿಯೂ ಸಹ ರಾಜ ಪ್ರತ್ಯಕ್ಷ ದೇವತಾ ಎಂಬ ಮಾತಿನಂತೆ ಚಂದನದ ಪಟ್ಟದ ಬೊಂಬೆಗೆ ರಾಜ ರಾಣಿಯರಂತೆ ಅಲಂಕರಿಸಿ ಅಗ್ರಸ್ಥಾನದಲ್ಲಿ ಮಂಟಪ ನಿರ್ಮಿಸಿ ಅದರಲ್ಲಿ ಪ್ರತಿಷ್ಠಾಪಿಸಿದ್ದೇವೆ, ನಂತರದ ಸಾಲುಗಳಲ್ಲಿ, ದಶಾವತಾರ, ನವದುರ್ಗೆಯರು, ಅಷ್ಟಲಕ್ಷ್ಮೀಯರು, ಶ್ರೀಕೃಷ್ಣಾವತಾರ, ಕಾಳಿಂಗ ಮರ್ದನ, ಶ್ರೀರಾಮ ಪಟ್ಟಾಭಿಷೇಕ, ದಸರೆಯ ಪ್ರಮುಖ ದೇವತೆಗಳಾದ ದುರ್ಗಿ ಹಾಗೂ ಶಾರದೆಯ ವಿಗ್ರಹ, ಪುಸ್ತಕಗಳು, ವಿವಿಧ ದೇವತೆಗಳ ವಿಗ್ರಹಗಳು, ವಿವಾಹ ಮಹೋತ್ಸವ, ವಿವಿಧ ವಾದ್ಯಗಳು, ಪ್ರಾಣಿ ಪಕ್ಷಿಗಳು ಮೊದಲಾದ ಬೊಂಬೆಗಳನ್ನು ಒಪ್ಪವಾಗಿ ಜೋಡಿಸಲಾಗಿದೆ . ಥರ್ಮೋಕೋಲ್ ನಿಂದ ನಿರ್ಮಿಸಿರುವ ಗಣೇಶನ ವಿಗ್ರಹ, ಈಶ್ವರ, ಅಂಬಾರಿ ಹೊತ್ತ ಆನೆ, ಅರ್ಜುನನಿಗೆ ಗೀತೋಪದೇಶ ಮಾಡುತ್ತಿರುವ ಕೃಷ್ಣ ಮೊದಲಾದ ಕಲಾಕೃತಿಗಳು ಆಕರ್ಷಕವಾಗಿವೆ. ಕಳೆದ ನಾಲ್ಕು ದಶಕಗಳಿಂದ ಪ್ರತಿವರ್ಷ ನವರಾತ್ರಿಯ ಪಾಡ್ಯದ ದಿನದಿಂದಲೇ ಗೊಂಬೆಗಳನ್ನು ಪ್ರತಿಷ್ಠಾಪಿಸಿ, ಪ್ರತಿ ದಿನ ಸಂಜೆ ಗೊಂಬೆಗಳಿಗೆ ಸಾಂಪ್ರದಾಯಕ ಶೈಲಿಯಲ್ಲಿ ಆರತಿ ಬೆಳಗಿ ಪೂಜಿಸುತ್ತ ಬರಲಾಗಿದೆ ಎಂದರು.

ಹೈಟೆಕ್ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವ ಇಂದಿನ ಪೀಳಿಗೆಯ ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯವನ್ನು ಪರಿಚಯಿಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದ ಅವರು, ಪ್ರತಿ ಮನೆಗಳಲ್ಲಿ ಈ ರೀತಿಯ ಆಚರಣೆಗಳನ್ನು ನಡೆಸುವುದರಿಂದ, ಸನಾತನ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ತಿಳಿಸಬಹುದು ಎಂದು ಶಕುಂತಳ ಆನಂದ್ ತಿಳಿಸಿದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ