ರಮ್ಜಾನ್ ಬಾವುಟ ತೆರವು, ಭಟ್ಕಳ ಮುಸ್ಲಿಮರ ಆಕ್ರೋಶ

KannadaprabhaNewsNetwork |  
Published : Mar 29, 2026, 02:15 AM IST
ಭಟ್ಕಳ ಬಂದರ ರಸ್ತೆಯಲ್ಲಿ ಮುಸ್ಲಿಮರು ರಮ್ಜಾನ್ ಪ್ರಯುಕ್ತ ಹಾಕಿದ್ದ ಬಾವುಟ ತೆರವುಗೊಳಿಸಿದ್ದಕ್ಕೆ ಆಕ್ರೋಶ ವ್ಯಕ್ತಪಪಡಿಸಿ, ಸ್ಥಳದಲ್ಲಿ ತಾತ್ಕಾಲಿಕವಾಗಿ ಬಾವುಟ ಹಾರಿಸಲಾಯಿತು. | Kannada Prabha

ಸಾರಾಂಶ

ರಂಜಾನ್ ಹಬ್ಬದ ಪ್ರಯುಕ್ತ ಭಟ್ಕಳದ ಪಟ್ಟಣದ ಬಂದರ್ ರಸ್ತೆ ಎರಡನೇ ಕ್ರಾಸ್ ಬಳಿ ಹಾಕಲಾಗಿದ್ದ ಇಸ್ಲಾಮಿಕ್ ಬಾವುಟವನ್ನು ನಗರಸಭೆ ತೆರವುಗೊಳಿಸಿದ್ದರಿಂದ ಸ್ಥಳೀಯ ಮುಸ್ಲಿಂ ಸಮುದಾಯದವರು ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.

ಭಟ್ಕಳ: ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದ ಬಂದರ್ ರಸ್ತೆ ಎರಡನೇ ಕ್ರಾಸ್ ಬಳಿ ಹಾಕಲಾಗಿದ್ದ ಇಸ್ಲಾಮಿಕ್ ಬಾವುಟವನ್ನು ನಗರಸಭೆ ತೆರವುಗೊಳಿಸಿದ್ದರಿಂದ ಸ್ಥಳೀಯ ಮುಸ್ಲಿಂ ಸಮುದಾಯದವರು ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.

ಮಾ. 19ರಂದು ಸಂಜೆ ಬಂದರ್ ರಸ್ತೆ 2ನೇ ಕ್ರಾಸ್ ಯು-ಟರ್ನ್ ಬಳಿ ಡಿವೈಡರ್ ಮಧ್ಯದಲ್ಲಿ ಸುಮಾರು 20ರಿಂದ 25 ಅಡಿ ಉದ್ದದ ಕಬ್ಬಿಣದ ಪೈಪ್ ಅಳವಡಿಸಿ, ಹಸಿರು ಬಣ್ಣದ ಉರ್ದು ಲಿಪಿಯ ಬರಹ ಹಾಗೂ ಖಡ್ಗದ ಚಿಹ್ನೆ ಹೊಂದಿದ್ದ ಬಾವುಟ ಹಾರಿಸಲಾಗಿತ್ತು. ರಂಜಾನ್ ಹಬ್ಬದ ಅಂಗವಾಗಿ ಈ ವ್ಯವಸ್ಥೆ ಮಾಡಲಾಗಿತ್ತು.

ಶನಿವಾರ ನಗರಸಭೆ ಕಮಿಷನರ್ ಬಾಬಾಸಾಹೇಬ್ ಮಾಣೆ ಅವರ ನೇತೃತ್ವದಲ್ಲಿ, ಪೊಲೀಸ್ ಬಂದೋಬಸ್ತ್‌ನೊಂದಿಗೆ ಬಾವುಟ ತೆರವುಗೊಳಿಸಲಾಯಿತು. ತೆರವುಗೊಳಿಸುವ ಸಂದರ್ಭದಲ್ಲಿ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಆದರೆ ಅದರ ನಂತರ ಸುಮಾರು 50 ಮಂದಿ ಮುಸ್ಲಿಂ ಸಮುದಾಯದವರು, ಪುರಸಭೆಯ ಮಾಜಿ ಸದಸ್ಯ ಅಲ್ತಾಫ್ ಕರೂರಿ ನೇತೃತ್ವದಲ್ಲಿ ಸ್ಥಳಕ್ಕೆ ಆಗಮಿಸಿ, ಸ್ಥಳದಲ್ಲಿ ಮತ್ತೆ ಬಾವುಟ ಹಾರಿಸಲು ಯತ್ನಿಸಿದರು. ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ಅದನ್ನು ತಡೆದು, ಬಾವುಟವನ್ನು ಮತ್ತೆ ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಪ್ರತಿಭಟನಾರ್ಥವಾಗಿ ಬಂದರ್ ರಸ್ತೆ ಬಂದ್ ಮಾಡಲು ಯತ್ನಿಸಲಾಯಿತು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡದೆ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಡಿವೈಎಸ್‌ಪಿ ಗಿರೀಶ್ ಬಿ., ಸಿಪಿಐ ದಿವಾಕರ್ ಪಿ.ಎಂ. ಹಾಗೂ ಪಿ.ಎಸ್.ಐ. ನವೀನ್ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಅಧಿಕಾರಿಗಳು ಜನರೊಂದಿಗೆ ಮಾತುಕತೆ ನಡೆಸಿ, ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ಘಟನೆ ಕುರಿತು ಚರ್ಚಿಸಲು ಸಮುದಾಯದ ಮುಖಂಡರನ್ನು ಡಿವೈಎಸ್ಪಿ ಕಚೇರಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಸಭೆ ನಡೆಸಲಾಯಿತು. ಸಭೆಯ ಬಳಿಕ, ಬಾವುಟ ತೆರವುಗೊಳಿಸಿದ ಸ್ಥಳಕ್ಕೆ ಆಗಮಿಸಿದ ಸಮುದಾಯದವರು ತಾತ್ಕಾಲಿಕವಾಗಿ ಬಾವುಟ ಹಾಕಿ, ಸ್ವಲ್ಪ ಸಮಯದ ಬಳಿಕ ತಾವೇ ತೆರವುಗೊಳಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ನೌಕರರ ಆರೋಗ್ಯ ಆಡಳಿತದ ಅಡಿಪಾಯ: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ
ಮೇ 9,10ರಂದು ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ: ಶ್ರೀನಿವಾಸ ಕಂಟ್ಲಿ