ಶಿರಹಟ್ಟಿ: ಮಾನವ ಜನ್ಮಕ್ಕೆ ಜಯವಾಗಲಿ ಎಂಬ ಸಂದೇಶದ ಮೂಲಕ ವಿಶ್ವದಲ್ಲಿ ಶಾಂತಿ, ನೆಮ್ಮದಿ ಬಯಸಿದ್ದ ರೇಣುಕಾಚಾರ್ಯರು ವಿಶ್ವಕಂಡ ಮೇರು ವ್ಯಕ್ತಿತ್ವದ ದಾರ್ಶನಿಕರು ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಅಭಿಪ್ರಾಯಪಟ್ಟರು.ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಧರ್ಮದ ಸಂಸ್ಥಾಪಕ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಮುಖಂಡರಾದ ವೀರಯ್ಯ ಮಠಪತಿ, ವಿನೋದ ಪಾಟೀಲ, ಬಾಬಾಜಾನ ಕೋಳಿವಾಡ ಇತರರು ಇದ್ದರು.
ನರಗುಂದ: ಜಂಗಮರು ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ. ಅವರು ಸರ್ವ ಜನಾಂಗದವರಿಗೆ ಸಂಸ್ಕಾರ ನೀಡಿ ಸುಧಾರಣೆ ಬಯಸುವವರಾಗಿದ್ದಾರೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.ಭಾನುವಾರ ಆರೂಢ ಕಲ್ಯಾಣಮಂಟಪದಲ್ಲಿ ತಾಲೂಕಾಡಳಿತ ಹಾಗೂ ಜಂಗಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗುರು ಪರಂಪರೆ ಮುಖ್ಯವಾಗಿದೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಜಂಗಮ ಸಮಾಜದ ಕೊಡುಗೆ ಅಪಾರ ಎಂದರು.ಪಂಚಗೃಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ, ಜಂಗಮರು ಮೊದಲು ಲಿಂಗಧಾರಣೆ ಮಾಡಬೇಕು. ಮಕ್ಕಳಿಗೆ ಅದನ್ನು ಧರಿಸಲು ಹೇಳಬೇಕು. ನಮ್ಮನ್ನು ಭಕ್ತರು ಅಪ್ಪಿಕೊಳ್ಳುವಂತೆ, ನಾವು ಭಕ್ತರನ್ನು ಅಪ್ಪಿಕೊಳ್ಳಬೇಕು ಎಂದರು.
ಪತ್ರಿವನಮಠದ ಗುರು ಸಿದ್ದವೀರ ಶಿವಯೋಗಿ ಶಿವಾಚಾರ್ಯರು ಶ್ರೀಗಳು ಮಾತನಾಡಿ, ಆದಿ ರೇಣುಕರು ಮನುಕುಲಕ್ಕೆ ಸಂಸ್ಕಾರ, ಧರ್ಮವನ್ನು ರೂಢಿಸಿದರು. ಸಮಾಜಸೇವೆ, ಧರ್ಮ ಬೋಧನೆಯನ್ನು ಜಂಗಮರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದರು.ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಕೇವಲ ಮಹಾನ್ ಪುರುಷರ ಜಯಂತಿ ಆಚರಣೆ ಮಾಡದೇ ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದರು.ದೀಪಾ ಗವಿಮಠ ಸಿದ್ಧಾಂತ ಶಿಖಾಮಣಿ, ಪಂಚಾಚಾರ, ಅಷ್ಟಾವರಣಗಳ ಕುರಿತು ಉಪನ್ಯಾಸ ನೀಡಿದರು. ರೇಣುಕಾಚಾರ್ಯರ ಭಾವಚಿತ್ರದ ಭವ್ಯವಾದ ಮೆರವಣಿಗೆಯು ಬಾಬಾಸಾಹೇಬ ಭಾವೆ ಅರಮನೆ ಆವರಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳದೊಂದಿಗೆ ಹೊರಟು ಆರೂಢ ಜ್ಯೋತಿ ಭವನದ ವರೆಗೆ ಸಾಗಿ ಬಂದಿತು.ಈ ಸಂದರ್ಭದಲ್ಲಿ ಕೊಣ್ಣೂರ ವಿರಕ್ತಮಠದ ಡಾ. ಚನ್ನವೀರ ಶಿವಾಚಾರ್ಯ ಶ್ರೀಗಳು, ಬನಹಟ್ಟಿ ರುದ್ರಸ್ವಾಮಿ ಮಠದ ಸೊಲಬಯ್ಯ ಸ್ವಾಮೀಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಕಂಬಳಿ, ತಾಲೂಕು ಜಂಗಮ ಸಮಾಜದ ಅಧ್ಯಕ್ಷ ನಂದೀಶ ಮಠದ, ದೈಹಿಕ ಶಿಕ್ಷಣಾಧಿಕಾರಿ ಎನ್.ಆರ್. ನೀಡಗುಂದಿ, ಆನಂದ ಬನಪ್ಪನವರ ಇತರರು ಇದ್ದರು. ಗಿರೀಶ ದಾಸರ ನಿರೂಪಿಸಿ, ವಂದಿಸಿದರು.