ಕೆಐಎಡಿಬಿಗೆ ರಾಗಿಮುದ್ದನಹಳ್ಳಿ, ಸಿದ್ದಾಪುರ ಸರ್ಕಾರಿ ಗೋಮಾಳ ಜಮೀನು ಹಸ್ತಾಂತರಕ್ಕೆ ಕೋರಿಕೆ

KannadaprabhaNewsNetwork |  
Published : Jan 10, 2026, 01:30 AM IST
೯ಕೆಎಂಎನ್‌ಡಿ-೧ಮಂಡ್ಯ ತಾಲೂಕು ರಾಗಿಮುದ್ದನಹಳ್ಳಿ ಸರ್ವೆ ನಂ.೮೧ ಹಾಗೂ ಶ್ರೀರಂಗಪಟ್ಟಣ ತಾಲೂಕು ಸಿದ್ದಾಪುರ ಗ್ರಾಮದ ಸರ್ವೆ ನಂ.೯೩ರಲ್ಲಿರುವ ಸರ್ಕಾರಿ ಜಮೀನುಗಳನ್ನು ಹಸ್ತಾಂತರಿಸುವಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಿಇಓ ಮಂಡ್ಯ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರ. | Kannada Prabha

ಸಾರಾಂಶ

೨೦೨೫ರ ಅಕ್ಟೋಬರ್ ೩೧ರಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಅಮೆರಿಕಾ ಮೂಲದ ಸ್ಯಾನ್ಸನ್ ಕಂಪನಿಯ ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್‌ಗೆ ಮಂಡ್ಯ ಜಿಲ್ಲೆಯಲ್ಲಿ ೧೦೦ ಎಕರೆ ಜಾಗ ಗುರುತಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಕೂಲ ಮಾಡಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೋರಿದ್ದಾರೆ ಎಂಬುದನ್ನೂ ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಮೆರಿಕ ಮೂಲದ ಸ್ಯಾನ್ಸನ್ ಗ್ರೂಪ್ ಕಂಪನಿ ಸ್ಥಾಪಿಸಲುದ್ದೇಶಿಸಿರುವ ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಫಾರ್ ಸಿಲಿಕಾನ್ ಆ್ಯಂಡ್ ಸಿಲಿಕಾನ್ ಕಾರ್ಬೈಡ್ ಪ್ರೊಡಕ್ಷನ್ ಫೆಸಿಲಿಟಿ ಯೋಜನೆಗೆ ಮಂಡ್ಯ ಜಿಲ್ಲೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಸಿದ್ದಾಪುರದಲ್ಲಿರುವ ಸರ್ಕಾರಿ ಗೋಮಾಳ ಜಮೀನನ್ನು ಹಸ್ತಾಂತರಿಸುವಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮನವಿ ಮಾಡಿದೆ.

ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್ ಯೋಜನೆಗೆ ಮಂಡ್ಯ ತಾಲೂಕು ರಾಗಿಮುದ್ದನಹಳ್ಳಿ ಗ್ರಾಮದ ಸರ್ವೇ ನಂ.೮೧ರಲ್ಲಿ ೧೧೦.೦೯ ಎಕರೆ ಬಿ- ಖರಾಬು ಜಮೀನಿದ್ದು, ಆರ್‌ಟಿಸಿಯಂತೆ ೧೧೪.೨೧ ಎಕರೆ ಜಮೀನಿದೆ. ಈ ಜಮೀನಿನಲ್ಲಿ ೫ ಹೆಕ್ಟೇರ್ ನೆಡುತೋಪು ಬೆಳೆಸಲಾಗಿದೆ. ಈ ಜಮೀನಿಗೆ ಹೊಂದಿಕೊಂಡಂತೆ ಶ್ರೀರಂಗಪಟ್ಟಣ ತಾಲೂಕು ಸಿದ್ದಾಪುರ ಗ್ರಾಮದ ಸರ್ವೇ ನಂ.೯೩ರಲ್ಲಿ ೨೮ ಎಕರೆಗಿಂತಲೂ ಹೆಚ್ಚಿನ ಸರ್ಕಾರಿ ಹುಲ್ಲುಬನಿ ಜಮೀನಿದ್ದು ಅದರಲ್ಲಿ ೧೯.೨೪ ಎಕರೆ ಜಮೀನು ಲಭ್ಯವಿರುವುದಾಗಿ ಮಾಹಿತಿ ನೀಡಿರುವುದನ್ನು ಉಲ್ಲೇಖಿಸಿದ್ದಾರೆ.

ಹೊಸದಾಗಿ ಭೂಮಿ ಗುರುತಿಸಿ ಅದನ್ನು ಸ್ವಾಧೀನಪಡಿಸಿಕೊಂಡು ರೈತರಿಗೆ ಪರಿಹಾರ ನೀಡುವ ಬದಲು ನೇರವಾಗಿ ಸರ್ಕಾರಿ ಜಮೀನನ್ನು ಹಸ್ತಾಂತರ ಮಾಡಿಕೊಳ್ಳಲು ಅವಕಾಶವಿರುವುದರಿಂದ ಜಮೀನುಗಳನ್ನು ಕೆಐಎಡಿಬಿಗೆ ಹಸ್ತಾಂತರ ಮಾಡುವಂತೆ ಮಂಡಳಿಯ ಸಿಇಒ ಪತ್ರ ಮುಖೇನ ಮನವಿ ಮಾಡಿದ್ದಾರೆ.

೨೦೨೫ರ ಅಕ್ಟೋಬರ್ ೩೧ರಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಅಮೆರಿಕಾ ಮೂಲದ ಸ್ಯಾನ್ಸನ್ ಕಂಪನಿಯ ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್‌ಗೆ ಮಂಡ್ಯ ಜಿಲ್ಲೆಯಲ್ಲಿ ೧೦೦ ಎಕರೆ ಜಾಗ ಗುರುತಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಕೂಲ ಮಾಡಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೋರಿದ್ದಾರೆ ಎಂಬುದನ್ನೂ ದಾಖಲಿಸಿದ್ದಾರೆ.

ಈ ಎರಡೂ ಸರ್ವೇ ನಂಬರ್‌ಗಳ ಸರ್ಕಾರಿ ಜಮೀನು ಬಿ- ಖರಾಬಿನಲ್ಲಿ ದಾಖಲಿದ್ದು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿದೆ. ಶ್ರೀರಂಗಪಟ್ಟಣ ಸಮೀಪದ ಗಣಂಗೂರು ಟೋಲ್‌ಗೆ ಹತ್ತಿರವಿದ್ದು, ಮೈಸೂರು ವಿಮಾನ ನಿಲ್ದಾಣಕ್ಕೂ ಸಮೀಪವಿದೆ. ಈ ಜಮೀನಿನಲ್ಲಿ ಸೆಮಿ ಕಂಡಕ್ಟರ್ ಘಟಕ ಸ್ಥಾಪನೆಗೆ ಬೇಕಿರುವ ವಿದ್ಯುಚ್ಛಕ್ತಿ ಹಾಗೂ ನೀರಿನ ವ್ಯವಸ್ಥೆಯೂ ಇರುವುದರಿಂದ ಯೋಜನೆಗೆ ಹೊಸದಾಗಿ ಭೂಮಿ ಗುರುತಿಸಿ ರೈತರಿಗೆ ಪರಿಹಾರ ಕೊಟ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಬದಲು ಸರ್ಕಾರಿ ಗೋಮಾಳ ಜಾಗವನ್ನೇ ಘಟಕ ಸ್ಥಾಪನೆಗೆ ಮಂಜೂರಾತಿ ನೀಡಿ ಹಸ್ತಾಂತರಿಸಬಹುದೆಂದು ಕೆ.ಆರ್.ರವೀಂದ್ರ ವಿವರಿಸಿದ್ದಾರೆ.

ಆ ಹಿನ್ನೆಲೆಯಲ್ಲಿ ಸೆಮಿಕಂಡಕ್ಟರ್ ಯೋಜನೆಗೆ ಈ ಸರ್ಕಾರಿ ಜಮೀನನ್ನು ಕೆಐಎಡಿಬಿಗೆ ಹಸ್ತಾಂತರಿಸುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಸದಸ್ಯರು ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.

ಕೆ.ಆರ್.ರವೀಂದ್ರ ನೀಡಿದ ಮಾಹಿತಿಯನ್ನಾಧರಿಸಿ ಮಂಡ್ಯ ಹಾಗೂ ಶ್ರೀರಂಗಪಟ್ಟಣ ತಾಲೂಕುಗಳು ಇದೇ ಸರ್ವೇ ನಂಬರ್‌ಗಳ ಸರ್ಕಾರಿ ಜಮೀನುಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಸೆಮಿಕಂಡಕ್ಟರ್ ಯೋಜನೆಗೆ ಈ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡುವ ಕುರಿತಂತೆ ಮಂಡ್ಯ ಹಾಗೂ ಶ್ರೀರಂಗಪಟ್ಟಣ ತಹಸೀಲ್ದಾರ್ ಅವರು ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ ಡಿ.೩೦ರಂದು ಪತ್ರದ ಮೂಲಕ ಶಿಫಾರಸು ಮಾಡಿದ್ದರು.

ಇದೀಗ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಿಇಒ ಕೂಡ ಪತ್ರ ಬರೆದು ಮನವಿ ಮಾಡಿರುವುದರಿಂದ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆಗೆ ವೇಗ ದೊರಕಿದಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್ ಕೂಡ ಸೆಮಿಕಂಡಕ್ಟರ್ ಯೋಜನೆ ಬರುವುದಾದರೆ ಭೂಮಿ ಕೊಡುವುದಕ್ಕೆ ಸಿದ್ಧ ಎಂದು ದೃಢವಾಗಿ ಹೇಳಿದ್ದಾರೆ. ಆದರೆ, ರಾಗಿಮುದ್ದನಹಳ್ಳಿ ಸರ್ವೇ ನಂ.೮೧ ಹಾಗೂ ಶ್ರೀರಂಗಪಟ್ಟಣ ತಾಲೂಕು ಸಿದ್ದಾಪುರ ಸರ್ವೇ ನಂ.೯೩ರಲ್ಲಿರುವ ಸರ್ಕಾರಿ ಜಮೀನುಗಳನ್ನು ನೀಡುವ ಕುರಿತಂತೆ ಸಚಿವರು, ಶಾಸಕರು ಸಮ್ಮತಿ ಸೂಚಿಸುವರೇ ಎನ್ನುವುದು ಈಗ ಪ್ರಶ್ನಾರ್ಹವಾಗಿದೆ.

ಸಚಿವ ಎನ್.ಚಲುವರಾಯಸ್ವಾಮಿ ಅವರು ಸೆಮಿಕಂಡಕ್ಟರ್ ಯೋಜನೆ ಬರುವುದಾದರೆ ಅದನ್ನು ತಮ್ಮ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಬೇಕೆಂಬ ಬಯಕೆ ಹೊಂದಿದ್ದಾರೆ ಎನ್ನಲಾಗಿದೆ. ಯೋಜನೆಯನ್ನು ಮಂಡ್ಯದಲ್ಲೇ ಉಳಿಸಿಕೊಳ್ಳಬೇಕೆಂಬ ಅಭಿಲಾಷೆಯೊಂದಿಗೆ ಶಾಸಕ ಪಿ.ರವಿಕುಮಾರ್ ಅವರು ಸಾತನೂರು ಫಾರಂ ಬಳಿ ಇರುವ ಕಾಡಾಗೆ ಸೇರಿದ ೯೦ ಎಕರೆ ಜಾಗವನ್ನು ಜಿಲ್ಲಾಧಿಕಾರಿ, ಮಂಡ್ಯ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಜೊತೆ ತೆರಳಿ ಸ್ಥಳ ಪರಿಶೀಲನೆ ನಡೆಸಿಕೊಂಡು ಬಂದಿದ್ದಾರೆ.

ಆದರೆ, ಸೆಮಿಕಂಡಕ್ಟರ್ ಯೋಜನೆ ಸ್ಥಾಪನೆಗೆ ಸಂಬಂಧಿಸಿದಂತೆ ರಾಗಿಮುದ್ದನಹಳ್ಳಿ ಮತ್ತು ಸಿದ್ದಾಪುರ ಸರ್ವೇ ನಂಬರ್‌ಗಳಲ್ಲಿರುವ ಸರ್ಕಾರಿ ಜಮೀನುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರಕುತ್ತಿರುವಂತೆ ಕಂಡುಬರುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳು ಉದ್ದೇಶಿತ ಜಮೀನುಗಳನ್ನೇ ಯೋಜನೆಗೆ ಶಿಫಾರಸು ಮಾಡಿರುವುದರ ಜೊತೆಗೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಿಇಒ ಕೂಡ ಅದೇ ಸರ್ಕಾರಿ ಜಮೀನುಗಳನ್ನೇ ಮಂಡಳಿಗೆ ಹಸ್ತಾಂತರ ಮಾಡುವಂತೆ ಕೋರಿಕೆಯನ್ನೂ ಇಟ್ಟಿರುವುದು ಇನ್ನಷ್ಟು ಪುಷ್ಠಿ ದೊರಕಿದಂತಾಗಿದೆ.

-----------------------------------------

ರಾಜ್ಯ ಸರ್ಕಾರದಿಂದಲೂ ಒತ್ತಡ

ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ, ಕೈಗಾರಿಕೆಗಳನ್ನು ಸ್ಥಾಪಿಸುವುದು ಅವರಿಗೆ ಬೇಕಿಲ್ಲ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಟೀಕೆಗಳಿಂದ ಬೇಸತ್ತಿರುವ ರಾಜ್ಯ ಸರ್ಕಾರ ಭೂಮಿ ಗುರುತಿಸಿ ಕೊಡುವಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೇಲೆ ಒತ್ತಡ ಹೇರಿರುವಂತೆ ಕಂಡುಬರುತ್ತಿದೆ.

ಅದೇ ಕಾರಣಕ್ಕೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯೂ ಕೂಡ ಆದಷ್ಟು ಬೇಗ ಭೂಮಿಯನ್ನು ದೊರಕಿಸಿಕೊಡುವ ಕಾರ್ಯದಲ್ಲಿ ಮಗ್ನವಾಗಿದೆ. ಅದಕ್ಕಾಗಿ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಗುರುತಿಸಿರುವ ಜಾಗ ಸೆಮಿಕಂಡಕ್ಟರ್ ಯೋಜನೆಗೆ ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಂತಿದೆ. ಆ ಹಿನ್ನೆಲೆಯಲ್ಲಿ ಮಂಡಳಿಯ ಸಿಇಒ ಅವರು ಮಂಡ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದಿರಬಹುದೆಂದು ಹೇಳಲಾಗುತ್ತಿದೆ.

------------------------------------------

ಮುಂದೆ ಏನಾಗಬಹುದು?

ಇದುವರೆಗೂ ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪನೆಗೆ ರಾಜ್ಯಸರ್ಕಾರ ಜಾಗ ಕೊಡುತ್ತಿಲ್ಲ ಎಂಬ ಆರೋಪ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ಕೇಳಿಬರುತ್ತಿತ್ತು. ಕಂಪನಿ ಮೊದಲು ಅರ್ಜಿ ಸಲ್ಲಿಸಿದರೆ ನಂತರದಲ್ಲಿ ಜಾಗ ಕೊಡುತ್ತೇವೆ ಎಂದು ಆಡಳಿತಪಕ್ಷದ ನಾಯಕರು ಉದ್ಗರಿಸಿದ್ದರು. ಇದೀಗ ಯೋಜನೆಗೆ ಬೇಕಾದ ೧೦೦ ಎಕರೆ ಸರ್ಕಾರಿ ಜಮೀನು ಖಾಲಿ ಇರುವುದರಿಂದ ಅದನ್ನು ಹಸ್ತಾಂತರಿಸುವುದಷ್ಟೇ ಬಾಕಿ ಇದೆ. ಸಚಿವರು, ಶಾಸಕರು, ಜಿಲ್ಲಾಧಿಕಾರಿ ಸೇರಿ ಚರ್ಚಿಸಿ ಜಮೀನು ಹಸ್ತಾಂತರಕ್ಕೆ ಸಮ್ಮತಿ ಸೂಚಿಸಿದರೆ ಜಮೀನು ಹಸ್ತಾಂತರ ಪ್ರಕ್ರಿಯೆ ಸುಲಭವಾಗಿ ನಡೆಯಲಿದೆ.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಅಮೆರಿಕಾ ಮೂಲದ ಸ್ಯಾನ್ಸನ್ ಕಂಪನಿಯ ಪರಿಚಯ, ಉದ್ದೇಶಿತ ಕಂಪನಿ ಎಷ್ಟು ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ಸ್ಥಳೀಯರಿಗೆ ನೀಡಬಹುದಾದ ಉದ್ಯೋಗಗಳೆಷ್ಟು, ಯಾವ ವಿದ್ಯಾಭ್ಯಾಸ ಮಾಡಿರುವವರಿಗೆ ಹೆಚ್ಚಿನ ಅನುಕೂಲವಾಗಲಿದೆ, ಕೇವಲ ಕೆಳಹಂತದ ಉದ್ಯೋಗಗಳನ್ನಷ್ಟೇ ಸ್ಥಳೀಯರಿಗೆ ಮೀಸಲಿಡುವುದೇ ಎಂಬೆಲ್ಲಾ ವಿಷಯಗಳನ್ನು ಜನರಿಗೆ ತಿಳಿಸುವುದು ಅವಶ್ಯಕವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ