ಬೇಡಿಕೆಗಳ ಈಡೇರಿಕೆಗೆ ಪ್ರಯೋಗಶಾಲಾ ತಂತ್ರಜ್ಞರ ಮನವಿ

KannadaprabhaNewsNetwork | Published : Feb 21, 2025 12:50 AM

ಸಾರಾಂಶ

ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಫೆ. 24ರಂದು ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿಯವರೆಗೆ ಅಹೋರಾತ್ರಿ ಧರಣಿ ನಡೆಯಲಿದೆ.

ಸವಣೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ(ಎನ್‌ಎಚ್‌ಎಂ) ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪ್ರಯೋಗಶಾಲಾ ತಂತ್ರಜ್ಞರು ಮತ್ತು ಶುಶ್ರೂಷಾಧಿಕಾರಿಗಳ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಮುಂಬರುವ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲು ಒತ್ತಾಯಿಸಿ ಕರ್ನಾಟಕ ರಾಜ್ಯ ಎನ್‌ಎಚ್‌ಎಂ ನೌಕರರು ಶಾಸಕ ಯಾಸೀರಅಹ್ಮದಖಾನ್ ಪಠಾಣ ಅವರಿಗೆ ಇತ್ತೀಚೆಗೆ ಪಟ್ಟಣದಲ್ಲಿ ಮನವಿ ಸಲ್ಲಿಸಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನದ(ಎನ್‌ಎಚ್‌ಎಂ) ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪ್ರಯೋಗಶಾಲಾ ತಂತ್ರಜ್ಞರು ಮತ್ತು ಶುಶ್ರೂಷಾಧಿಕಾರಿಗಳು ಸುಮಾರು 15ರಿಂದ 20 ವರ್ಷಗಳಿಂದ ಗುತ್ತಿಗೆ ಆದರದಲ್ಲಿ ಅತಿ ಕಡಿಮೆ ವೇತನದಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಇಲಾಖೆಯು ವಹಿಸಿದ ಕೆಲಸಗಳನ್ನು ಚಾಚು ತಪ್ಪದೇ ನಿರ್ವಹಿಸುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿ ನಮ್ಮ ಕುಟುಂಬವನ್ನು ಬಿಟ್ಟು ಜೀವದ ಹಂಗು ತೊರೆದು ಹಗಲಿರುಳು ಎನ್ನದೇ ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ನೀಡಿದ್ದೇವೆ. ಅಲ್ಪ ವೇತನದಲ್ಲಿ ಇನ್ನಿತರ ಯಾವುದೇ ಸೌಲಭ್ಯಗಳಿಲ್ಲದೆ ಕೌಟುಂಬಿಕ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಈಗಾಗಲೇ ಹಲವಾರು ಬಾರಿ ಕುಂದುಕೊರತೆಗಳು ಹಾಗೂ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಮನವರಿಕೆ ಮಾಡಿ ಮನವಿ ಅಹವಾಲುಗಳನ್ನು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದರು.ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಫೆ. 24ರಂದು ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿಯವರೆಗೆ ಅಹೋರಾತ್ರಿ ಧರಣಿಯಲ್ಲಿ ಜಿಲ್ಲೆಯ ಎಲ್ಲ ಎನ್‌ಎಚ್‌ಎಂ ಶುಶ್ರೂಷಾಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಎನ್‌ಎಚ್‌ಎಂ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಸಂಘದ ಸಂಘಟನಾ ಕಾರ್ಯದರ್ಶಿ ಮಹಾಂತೇಶ ಹೊಳೆಮ್ಮನವರ, ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಗುಣಶ್ರೀ ಪಾಟೀಲ, ಮಲ್ಲಿಕಾ ಎಸ್.ಎಂ., ಶೃತಿ ಚಕ್ರಸಾಲಿ, ಪೂಜಾ ಅರಟಾಳ, ಸಮೀನಾ ಮಾಲಿ, ಲಕ್ಷ್ಮವ್ವ, ಯಲ್ಲಮ್ಮ ನವಲೆ ಹಾಗೂ ಇತರರು ಇದ್ದರು.ಶಿವರಾತ್ರಿ ಪ್ರಯುಕ್ತ ಹೆಚ್ಚುವರಿ 160 ಸಾರಿಗೆ ಸೌಲಭ್ಯ

ಹಾವೇರಿ: ಶಿವರಾತ್ರಿ ಹಬ್ಬದ ಪ್ರಯುಕ್ತ ಸಾರ್ವಜನಿಕರ ಅನುಕೂಲಕ್ಕಾಗಿ ವಾ.ಕ.ರ.ಸಾ. ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು 160 ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

ಫೆ. 22 ಹಾಗೂ 23ರಂದು ವಾರಾಂತ್ಯ ದಿನಗಳಿದ್ದು, ಫೆ. 26ರಂದು ಶಿವರಾತ್ರಿ ಹಬ್ಬವಿರುವುದರಿಂದ ಬೆಂಗಳೂರು ಮತ್ತು ಇತರೆ ಪ್ರಮುಖ ಸ್ಥಳಗಳಿಂದ ಹೆಚ್ಚಿನ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.ಬೆಂಗಳೂರಿನಿಂದ ರಾಜ್ಯ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಗೆ ತೆರಳಲು ಫೆ. 21, 22 ಹಾಗೂ ಫೆ. 25ರಂದು ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ವಿಶೇಷ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

Share this article