ತಾಲೂಕಿನ ಐಗೂರು ಗ್ರಾ.ಪಂ. ವ್ಯಾಪ್ತಿಗೊಳಪಡುವ ಯಡವನಾಡು ಗ್ರಾಮ ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಬೇಕೆಂಬ ಗ್ರಾಮಸ್ಥರ ಅಹವಾಲನ್ನು ಶಾಸಕ ಡಾ. ಮಂತರ್ ಗೌಡ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.
ಸೋಮವಾರಪೇಟೆ: ತಾಲೂಕಿನ ಐಗೂರು ಗ್ರಾ.ಪಂ. ವ್ಯಾಪ್ತಿಗೊಳಪಡುವ ಯಡವನಾಡು ಗ್ರಾಮ ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಬೇಕೆಂಬ ಗ್ರಾಮಸ್ಥರ ಅಹವಾಲನ್ನು ಶಾಸಕ ಡಾ. ಮಂತರ್ ಗೌಡ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಈಚೆಗೆ ಭೇಟಿ ಮಾಡಿದ ಶಾಸಕ ಮಂತರ್ ಗೌಡ ನೇತೃತ್ವದ ಗ್ರಾಮಸ್ಥರ ನಿಯೋಗವು, ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿತು.ಜಿಲ್ಲೆಯ ಪ್ರಮುಖ ಅಣೆಕಟ್ಟಾಗಿರುವ ಹಾರಂಗಿ ಜಲಾಶಯ ನಿರ್ಮಾಣ ಸಂದರ್ಭ ಸ್ಥಳೀಯ ಪ್ರದೇಶದ ಗ್ರಾಮಸ್ಥರು ತಮ್ಮ ಕೃಷಿ ಭೂಮಿ ಮುಳುಗಡೆ ಪ್ರದೇಶಕ್ಕೆ ನೀಡಿದ್ದು, ಅಂತಹವರಿಗೆ ಯಡವನಾಡು ಭಾಗದಲ್ಲಿ ಭೂಮಿ ಹಂಚಿಕೆಯಾಗಿದೆ. ಯಡವನಾಡು ಅರಣ್ಯದಿಂದ ಡಿನೋಟಿಫಿಕೇಷನ್ ಮಾಡಿ ೨೦೧೬ರಲ್ಲಿ ಆದೇಶ ಬಂದಿದೆ. ೨೦೧೭ರಲ್ಲಿ ಸರ್ಕಾರ ಕಂದಾಯ ಗ್ರಾಮವಾಗಿ ಅಧಿಸೂಚನೆ ಹೊರಡಿಸಿದೆ. ಈ ಮಧ್ಯೆ ಡಿನೋಟಿಫಿಕೇಷನ್‌ಗೆ ೨೦೨೧ರಲ್ಲಿ ರಿಟ್ ಪಿಟಿಷನ್ ದಾಖಲಾಗಿದ್ದು, ಉಚ್ಚ ನ್ಯಾಯಾಲಯ ಈ ಹಿಂದಿನ ಸರ್ಕಾರದ ಡಿನೋಟಿಫಿಕೇಷನ್‌ನ್ನು ವಜಾಗೊಳಿಸಿದೆ. ಇದರಿಂದಾಗಿ ಹಾರಂಗಿ ಹಿನ್ನೀರು ಪ್ರದೇಶದ ನೀರು ಶೇಖರಣೆಗಾಗಿ ರೈತರು ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಂಡಿದ್ದು, ಸರ್ಕಾರ ಪುನರ್ವಸತಿ ಯೋಜನೆಯಡಿ ಬರಪೀಡಿತ ಯಡವನಾಡು ಭಾಗದಲ್ಲಿ ಭೂಮಿ ನೀಡಿದೆ.
ಇದಾಗಿ ೫೪ ವರ್ಷಗಳು ಕಳೆದರೂ ನಾವು ನೆಲೆಸಿರುವ, ಕೃಷಿ ಮಾಡಿಕೊಂಡಿರುವ ಭೂಮಿಯನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಿಲ್ಲ. ೨೦೧೭ರಲ್ಲಿ ಸರ್ಕಾರ ಘೋಷಣೆ ಮಾಡಿದ್ದರೂ ೨೦೨೧ರಲ್ಲಿ ಡಿನೋಟಿಫಿಕೇಷನ್‌ನ್ನು ಉಚ್ಚ ನ್ಯಾಯಾಲಯ ರದ್ದು ಮಾಡಿರುವುದರಿಂದ ಮತ್ತೆ ಕಂದಾಯ ಗ್ರಾಮದ ಘೋಷಣೆ ರದ್ದಾಗಿದೆ. ಇದರಿಂದ ಈ ಭಾಗದ ನೂರಾರು ಕುಟುಂಬಗಳಿಗೆ ಸಮಸ್ಯೆಯಾಗಿದ್ದು, ಸರ್ಕಾರ ತಕ್ಷಣ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಗ್ರಾಮಸ್ಥರು ಶಾಸಕ ಡಾ. ಮಂತರ್ ಗೌಡ ಮುಖಾಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಗಣೇಶ್, ರಮೇಶ್ ಮತ್ತು ಗ್ರಾಮಸ್ಥರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.