ಗುತ್ತಲ: ಗುತ್ತಲ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಸ್ಥಳೀಯ ನಾಗರಿಕರು ಶಾಸಕ ರುದ್ರಪ್ಪ ಲಮಾಣಿಗೆ ಮನವಿ ಸಲ್ಲಿಸಿದರು.
ಮುಖಂಡ ಸಿ.ಬಿ. ಕುರವತ್ತಿಗೌಡ್ರ ಮಾತನಾಡಿ, ಗುತ್ತಲ ಪಟ್ಟಣ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಸುಗಮ ಆಡಳಿತಕ್ಕೆ ಅನುಕೂಲ ಕಲ್ಪಿಸಲು ತಾಲೂಕು ಕೇಂದ್ರವನ್ನಾಗಿಸಿದರೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಕೈಗೊಳ್ಳಬಹುದು. ಈ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರ ಎಂದು ಘೋಷಿಸಲು ಸರ್ಕಾರಕ್ಕೆ ಒತ್ತಡ ತರಬೇಕೆಂದು ಮನವಿ ಮಾಡಿದರು.ಮನವಿ ಸ್ವೀಕರಿಸಿದ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಸ್ಥಳೀಯರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಮುಂದಿನ ದಿನಗಳಲ್ಲಿ ನಿಮ್ಮ ಆಗ್ರಹ ಈಡೇರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ, ಮುಖಂಡ ಎಸ್.ಜಿ. ಹೊನ್ನಪ್ಪನವರ, ಹನುಮಂತ ಅಗಸಿಬಾಗಿಲದ, ಪ್ರದೀಪ ಸಾಲಗೇರಿ, ಅಜಯ್ ಬಂಡಿವಡ್ಡರ, ವಿಜಯ ಛಲವಾದಿ, ಸಂತೋಷ ಲಮಾಣಿ, ಷಹಜಾನಸಾಬ್ ಅಗಡಿ, ಹಾಲೇಶ ಹಾಲಣ್ಣವರ, ಗುಡ್ಡಜ್ಜ ಗೊರವರ, ಚನ್ನಪ್ಪ ಹೊನ್ನಪ್ಪನವರ, ಮಹ್ಮದಸಾಬ್ ರಿತ್ತಿ, ಪ್ರಕಾಶ ಬರಡಿ, ಷಹಜಾನಸಾಬ್ ಜಡದಿ ಇದ್ದರು.ಜಾಕ್ವೆಲ್, ಬಾಂದಾರ ನಿರ್ಮಾಣ ಸ್ಥಳ ಪರಿಶೀಲನೆಗುತ್ತಲ: ಹಾವೇರಿ ಹಾಗೂ ಗುತ್ತಲ ಪಟ್ಟಣಕ್ಕೆ ನಿರಂತರ ಕುಡಿಯುವ ನೀರಿನ ಪೂರೈಕೆ ಯೋಜನೆಗೆ ಜಾಕ್ವೆಲ್ ಹಾಗೂ ಬಾಂದಾರ ನಿರ್ಮಾಣ ಸ್ಥಳವನ್ನು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸೋಮವಾರ ಸಂಜೆ ಪರಿಶೀಲಿಸಿದರು.ಹಾವೇರಿ ಹಾಗೂ ಗುತ್ತಲ ಪಟ್ಟಣಕ್ಕೆ ನಿರಂತರ ಕುಡಿಯುವ ನೀರಿನ ಪೂರೈಕೆ ಯೋಜನೆಗೆ ಈಗಾಗಲೇ ₹50 ಕೋಟಿ ಬಿಡುಗಡೆಯಾಗಿದ್ದು, ಬಾಕಿ ₹100 ಕೋಟಿ ಬಿಡುಗಡೆ ಆಗಬೇಕಿದೆ. ನದಿಯಲ್ಲಿ ನಿರಂತರ ಸಂಗ್ರಹಿಸುವ ನಿಟ್ಟಿನಲ್ಲಿ ಬಾಂದಾರ ಸಹ ನಿರ್ಮಿಸಬೇಕಿದೆ. ಇದರಿಂದ ಕೇವಲ ಹಾವೇರಿ- ಗುತ್ತಲ ಪಟ್ಟಣಕ್ಕಲ್ಲದೆ ಹಾವೇರಿ- ಬ್ಯಾಡಗಿ- ರಾಣಿಬೆನ್ನೂರು ತಾಲೂಕಿನ ಅನೇಕ ಬಹು ಗ್ರಾಮಗಳ ನಿರಂತರ ನೀರು ಪೋರೈಕೆ ಯೋಜನೆಗಳಿಗೆ(ಜೆಜೆಎಂ) ನೀರು ದೊರೆಯುವುದು. ಅಲ್ಲದೆ ರೈತರಿಗೂ ಸಹಾಯವಾಗಲಿದೆ ಎಂದರು.ಇದೇ ವೇಳೆ ಸೇತುವೆ ಶಿಥಿಲಗೊಂಡಿರುವ ಸೇತುವೆ ದುರಸ್ತಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವರು, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದೆಂದರು.ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ಚಂದ್ರಪ್ಪ ಸಿ., ಹಾವೇರಿ ನಗರಸಭೆ ಆಯುಕ್ತ ಕಾಂತರಾಜ, ನಗರ ನೀರು ಸರಬರಾಜು ಹಾಗೂ ಒಳಚಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಎಸ್. ಸಿಂಗೋಟಿ, ತುಂಗಾ ಮೇಲ್ದಂಡೆಯ ಕಾರ್ಯಪಾಲಕ ಎಂಜಿನಿಯರ್ ಬಿ. ಬಸವರಾಜ ಸೇರಿದಂತೆ ಅನೇಕರಿದ್ದರು.