ಕನ್ನಡದಲ್ಲಿ ಫೇಲ್‌ಗೆ ಕಾರಣಗಳ ಸಂಶೋಧನೆ

KannadaprabhaNewsNetwork |  
Published : May 01, 2026, 01:45 AM IST
ಪರೀಕ್ಷೆ | Kannada Prabha

ಸಾರಾಂಶ

ಎಸ್‌ಎಸ್‌ಎಲ್‌ಸಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದಕ್ಕೆ ಶಿಕ್ಷಣದಲ್ಲಿ ಏಕರೂಪತೆ ಕೊರತೆ ಸೇರಿ ವಿವಿಧ ದೋಷಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗುರುತಿಸಿದೆ. ಅಲ್ಲದೆ ಕನ್ನಡದತ್ತ ಆಸಕ್ತಿ ಮೂಡಿಸಲು 22 ಶಿಫಾರಸುಗಳನ್ನು ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಸ್‌ಎಸ್‌ಎಲ್‌ಸಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದಕ್ಕೆ ಶಿಕ್ಷಣದಲ್ಲಿ ಏಕರೂಪತೆ ಕೊರತೆ ಸೇರಿ ವಿವಿಧ ದೋಷಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗುರುತಿಸಿದೆ. ಅಲ್ಲದೆ ಕನ್ನಡದತ್ತ ಆಸಕ್ತಿ ಮೂಡಿಸಲು 22 ಶಿಫಾರಸುಗಳನ್ನು ಮಾಡಿದೆ.

ಗುರುವಾರ ‘ಕನ್ನಡ ನಾಡಿನ ಮಕ್ಕಳು ಕನ್ನಡದಲ್ಲೇಕೆ ನಪಾಸಾಗುತ್ತಾರೆ?’ ಶೀರ್ಷಿಕೆ ಅಡಿ ಸಿದ್ಧಪಡಿಸಿದ ಸಂಶೋಧನಾ ವರದಿಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ। ಪುರುಷೋತ್ತಮ ಬಿಳಿಮಲೆ ಸಲ್ಲಿಸಿದರು. ಪ್ರಾಧಿಕಾರದ ಸದಸ್ಯರೂ ಆಗಿರುವ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಅವರ ಮಾರ್ಗದರ್ಶನದಲ್ಲಿ 8 ಮಂದಿ ಶಿಕ್ಷಕರನ್ನೊಳಗೊಂಡ ಸಮಿತಿ ಈ ಸಂಶೋಧನಾ ವರದಿ ಸಿದ್ಧಪಡಿಸಿದೆ.

ರಾಜ್ಯದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಒಂದು ಭಾಷೆಯಾಗಿ ಯಾವ ಸ್ಥಾನದಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಂಖ್ಯಾತ್ಮಕ, ದತ್ತಾಂಶ ಆಧಾರಿತ ಅಧ್ಯಯನ ನಡೆಯಬೇಕು. ಈ ಅಧ್ಯಯನವು ಎಸ್‌ಎಸ್‌ಎಲ್‌ಸಿ ಫಲಿತಾಂಶಗಳ ದತ್ತಾಂಶವನ್ನು ಆಧರಿಸಿದೆ. ಕನ್ನಡ ಭಾಷಾ ಶಿಕ್ಷಣದ ಸ್ಥಿತಿಯನ್ನು ಸಂಖ್ಯಾತ್ಮಕ ಮತ್ತು ವ್ಯಾಖ್ಯಾನಾತ್ಮಕ ದೃಷ್ಟಿಕೋನದಿಂದ ವಿಶ್ಲೇಷಿಸುವುದಾಗಿದೆ. ಕನ್ನಡ ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಗಳಲ್ಲಿನ ಸಾಧನೆಯನ್ನು ಇತರ ಭಾಷೆಗಳೊಂದಿಗೆ ಹೋಲಿಕೆ ಮಾಡುವ ಮೂಲಕ ಭಾಷಾ ಆಯ್ಕೆಯು ಶೈಕ್ಷಣಿಕ ಫಲಿತಾಂಶದ ಮೇಲೆ ಬೀರುವ ಪರಿಣಾಮವೇನು ಎಂಬುದು ಈ ಅಧ್ಯಯನದ ಉದ್ದೇಶ ಎಂದು ತಿಳಿಸಲಾಗಿದೆ.

ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 2016ರಲ್ಲಿ ಶೇ. 83.3ರಷ್ಟಿದ್ದ ಕನ್ನಡ ಪ್ರಥಮ ಭಾಷಾ ಪ್ರಾಬಲ್ಯ, 2025ರಲ್ಲಿ ಶೇಕಡ 81.03ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಆಂಗ್ಲ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಪ್ರಮಾಣ ಶೇ.10.61ರಿಂದ ಶೇ 14.62ಕ್ಕೆ ಏರಿಕೆಯಾಗಿದೆ.

2025ರಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ಅನುತ್ತೀರ್ಣರಾದ 80,373 ವಿದ್ಯಾರ್ಥಿಗಳು ಕೇವಲ ಸಂಖ್ಯೆ ಮಾತ್ರವಲ್ಲ, ಕನ್ನಡಕ್ಕೆ ಭವಿಷ್ಯದಲ್ಲಿ ಒದಗಿರುವ ಅಪಾಯದ ಸೂಚಕ. ಇದು ಎಚ್ಚರಿಕೆ ಗಂಟೆ. ಈ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಲು ಮತ್ತು ಕರ್ನಾಟಕದಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ಗುಣಮಟ್ಟದ ಶಿಕ್ಷಣ ಖಾತ್ರಿಪಡಿಸಲು ಸರ್ಕಾರವು ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಶಾಲಾ ಮಟ್ಟದಲ್ಲಿನ ತುರ್ತು ಹಾಗೂ ಸಮಗ್ರ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಉಲ್ಲೇಖಿಸಿದೆ.

ಶಿಫಾರಸುಗಳೇನು?:

2025 ಮತ್ತು 2026ರಲ್ಲಿ ಅನುತ್ತೀರ್ಣರಾದ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿ ವರದಿ ತಯಾರಿಸಲು ಪರಿಮಾಣಾತ್ಮಕ ಹಾಗೂ ಗುಣಾತ್ಮಕ ಸಂಶೋಧನೆ ಕೈಗೊಳ್ಳಬೇಕು. ಅಂಗನವಾಡಿಯಿಂದ ಪದವಿ, ವೃತ್ತಿಪರ ಕೋರ್ಸ್‌ ಯಾವುದೇ ಇರಲಿ, ಮಾಧ್ಯಮ ಯಾವುದೇ ಇದ್ದರೂ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯಗೊಳಿಸಬೇಕು. ಎಲ್ಲಾ ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸುವ ಕನ್ನಡ ಭಾಷಾ ಕಲಿಕಾ ವಿಧೇಯಕ 2015 ಜಾರಿಗೊಳಿಸಬೇಕು. ತ್ರಿಭಾಷಾ ಸೂತ್ರ ಕೈಬಿಟ್ಟು ದ್ವಿಭಾಷಾ ನೀತಿ ಅಳವಡಿಸಿಕೊಳ್ಳಬೇಕು.

ಕನ್ನಡದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ಮುಂದಿನ ವಿದ್ಯಾಭ್ಯಾಸದಲ್ಲಿ ಆದ್ಯತೆ ಕೊಡಬೇಕು. ದೇಶದ ಯಾವುದೇ ಭಾಗದಲ್ಲಿ ಕನಿಷ್ಠ 10ನೇ ತರಗತಿವರೆಗೆ ಕನ್ನಡದಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ ಕರ್ನಾಟಕದ ಸರ್ಕಾರಿ ಉದ್ಯೋಗದಲ್ಲಿ ಶೇ.25ರಷ್ಟು ಉದ್ಯೋಗ ಮೀಸಲಿಡಬೇಕು. ಭಾಷಾ ಪಠ್ಯಪುಸ್ತಕಗಳು ಭಾಷಾ ಶಿಕ್ಷಕರಿಂದ ರಚನೆಯಾಗಬೆಕು. ಸರ್ಕಾರ ಬದಲಾದಂತೆ ಪಠ್ಯಪುಸ್ತಕಗಳನ್ನು ಬದಲಾಯಿಸುವ ರಾಜಕೀಯ ಪ್ರೇರಿತ ಅವೈಜ್ಞಾನಿಕ ಕ್ರಮಗಳನ್ನು ಬಿಡಬೇಕು. ಈ ಎಲ್ಲಾ ಶಿಫಾರಸುಗಳನ್ನು ಕೂಡಲೇ ಅನುಷ್ಠಾನಕ್ಕೆ ತರಲು ಭಾಷಾ ತಜ್ಞರನ್ನು ಒಳಗೊಂಡಂತ ಅಧಿಕಾರಯುಕ್ತ ಸಮಿತಿ ರಚಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಜನಾಕ್ರೋಶ ಪಾದಯಾತ್ರೆ, ಪ್ರತಿಭಟನಾ ಸಭೆ
ಮಳೆ ನಿಂತರೂ ನಿಲ್ಲದ ಬೆಂಗಳೂರು ಜನರ ಗೋಳು