ಶಿರಸಿ: ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಸಸ್ಯರೋಗ ಸಂಶೋಧನಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವವರು ಕೇವಲ ಸಂಬಳಕ್ಕೆ ಕೆಲಸ ಮಾಡದೆ ರೈತರ ಹಿತವನ್ನು ಕಾಪಾಡುವ ಸಂಶೋಧನೆ ಮಾಡುವ ಅಗತ್ಯವಿದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು. ತಾಲೂಕಿನ ಯಡಳ್ಳಿಯಲ್ಲಿ ತೋಟಗಾರಿಕಾ ಇಲಾಖೆ ಆಶ್ರಯದಲ್ಲಿ ನಡೆದ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಸ್ಯ ಸಂರಕ್ಷಣಾ ಔಷಧಿ ವಿತರಿಸಿ ಮಾತನಾಡಿ, ಅಡಕೆಗೆ ವಿವಿಧ ರೋಗಬಾಧೆ ಎದುರಾಗುತ್ತಿದೆ. ಹಲವು ಕಂಪನಿಗಳ ಔಷಧಿಗಳನ್ನು ರೈತರು ಸಿಂಪಡಿಸಿದರೂ ಸೂಕ್ತ ಪ್ರಯೋಜನ ಆಗಿಲ್ಲ. ಕೇವಲ ಔಷಧಿ ಅಂಗಡಿಗಳಿಗೆ ಹಣವಾಗಿದೆ ಹೊರತು ಬೇರೇನೂ ಆಗಿಲ್ಲ. ಇದರ ಹತೋಟಿಗೆ ಇಲಾಖೆ ಸೂಕ್ತ ಕ್ರಮವಹಿಸಬೇಕಿದೆ ಎಂದರು. ಶಿರಸಿ ತಾಲೂಕಿಗೆ ₹೯ ಲಕ್ಷ ಸಸ್ಯ ಸಂರಕ್ಷಣೆ ಔಷಧಿಗಾಗಿ ಅನುದಾನ ಬಿಡುಗಡೆಯಾಗಿದೆ. ಹೆಚ್ಚಿನ ಮೊತ್ತ ಸರ್ಕಾರದಿಂದ ಹಂತ- ಹಂತವಾಗಿ ಬಿಡುಗಡೆ ಆಗುತ್ತದೆ. ಔಷಧಿ ಸಹಾಯಧನಕ್ಕೆ ಶಾಸಕರ ನಿಧಿಯನ್ನು ನೀಡಲು ಸಿದ್ಧ ಎಂದ ಅವರು, ಬೆಳೆಗಾರರು ಸರ್ಕಾರದ ಅನುದಾನಕ್ಕೆ ಬಹಳ ಕಾಯದೆ ಸ್ಥಳೀಯ ಸಹಕಾರಿ ಸಂಘಗಳ ಮೂಲಕ ಔಷಧಿ ಖರೀದಿಸಿ ಸಿಂಪಡಿಸುವುದು ಒಳಿತು ಎಂದರು.
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಮಾತನಾಡಿ, ಎಲೆಚುಕ್ಕಿ ರೋಗ ಈ ಹಿಂದಿನಿಂದಲೂ ಇದ್ದು, ಹೆಚ್ಚಿನ ಪರಿಣಾಮ ಇರುತ್ತಿರಲಿಲ್ಲ. ಆದರೆ ಈಗ ಬರುತ್ತಿರುವ ಎಲೆಚುಕ್ಕಿ ರೋಗ ಗಂಭೀರ ಪರಿಣಾಮ ಬೀರುತ್ತಿದೆ. ಮರಗಳನ್ನು ನಾಶ ಮಾಡುತ್ತಿದೆ. ಹೀಗಾಗಿ ಅಡಕೆ ಬೆಳೆಗಾರರು ಚಿಂತೆಗೊಳಗಾಗಿದ್ದಾರೆ ಎಂದರು. ರೋಗಪೀಡಿತ ಗಿಡಗಳ ರೋಗನಿರೋಧಕ ಶಕ್ತಿ ಹೆಚ್ಚಿಸಬೇಕು. ನಿಗದಿತ ಅವಧಿಯಲ್ಲಿ ಔಷಧಿ ಸಿಂಪಡಣೆ ಮಾಡಬೇಕು. ರೋಗಪೀಡಿತ ಎಲೆಗಳನ್ನು ಕತ್ತರಿಸಿ ತೋಟದಿಂದ ಹೊರ ಹಾಕಿ ಸುಡಬೇಕು. ಇದು ರೈತರಿಂದ ಸಾಮೂಹಿಕವಾಗಿ ಆಗಬೇಕು ಎಂದರು. ಯಡಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೆಕೇರಿ, ಯಡಳ್ಳಿ ಗ್ರಾಪಂ ಅಧ್ಯಕ್ಷ ಭಾಸ್ಕರ್ ಶೆಟ್ಟಿ, ಕಾನಗೋಡ ಗ್ರಾಪಂ ಅಧ್ಯಕ್ಷ ಪ್ರಕಾಶ ನಾಯ್ಕ, ಕುಳವೆ ಗ್ರಾಪಂ ಅಧ್ಯಕ್ಷೆ ರಂಜಿತಾ ಹೆಗಡೆ ಇದ್ದರು.ಕಲಭಾಗದಲ್ಲಿ ಉಚಿತ ಆರೋಗ್ಯ ಶಿಬಿರ ಸಂಪನ್ನ
ಕುಮಟಾ: ಯುವ ಸಮುದಾಯ ವಿವಿಧ ವ್ಯಸನಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ವ್ಯಸನಗಳು, ಸಾಂಕ್ರಾಮಿಕಗಳು ಹಾಗೂ ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಪ್ರಯತ್ನಶೀಲರಾಗೋಣ ಎಂದು ಮಂಗಳೂರಿನ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞ ಡಾ. ವಿಕ್ರಮ ಶೆಟ್ಟಿ ತಿಳಿಸಿದರು.ತಾಲೂಕಿನ ಕಲಭಾಗ ಗ್ರಾಪಂ ಸಭಾಭವನದಲ್ಲಿ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ, ತಾಪಂ ಸಂಜೀವಿನಿ ವಿಭಾಗ, ಧ.ಗ್ರಾ. ಯೋಜನೆ ಸಹಯೋಗದಲ್ಲಿ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕಲಭಾಗ ಗ್ರಾಪಂ ಅಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ, ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಇಂತಹ ಶಿಬಿರ ಸಂಘಟನೆ ಅತ್ಯುಪಯುಕ್ತ ಮತ್ತು ಶ್ಲಾಘನೀಯ ಕಾರ್ಯವಾಗಿದೆ. ಶಿಬಿರದ ಪ್ರಯೋಜನಗಳನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಇಂಥ ಯಾವುದೇ ಕಾರ್ಯಕ್ರಮಗಳಿಗೆ ನಮ್ಮ ಪಂಚಾಯಿತಿ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.
ಪತ್ರಕರ್ತ ಸದಾನಂದ ದೇಶಭಂಡಾರಿ ಮಾತನಾಡಿದರು. ಪಿಡಿಒ ಪ್ರಜ್ಞಾ ಡಿ., ಉದ್ಯಮಿ ರಾಮಕೃಷ್ಣ ಶಾನಭಾಗ, ವೆಂಕಟೇಶ ಕೊಡಿಯಾ, ಬಾಲಕೃಷ್ಣ ಕೊರಗಾಂವಕರ್ ಇತರರು ಇದ್ದರು. ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರವೀಣಕುಮಾರ ಆರ್. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ೧೮೫ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಆರೋಗ್ಯ ತಪಾಸಿಸಿಕೊಂಡು ಉಚಿತ ಸಲಹೆ ಪಡೆದರು. ಪ್ರಮೋದ ಶೆಟ್ಟಿ ಮತ್ತು ಗಜಾನನ ಶೆಟ್ಟಿ ನಿರ್ವಹಿಸಿದರು.