ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಗ್ರಾಮ ಭಾರತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಕರ್ನಾಟಕ ಸಂಘ, ಕೆ.ಆರ್.ಪೇಟೆ ಉದಯ ರವಿ ಟ್ರಸ್ಟ್, ಅಕ್ಕಿಹೆಬ್ಬಾಳಿನ ಲೋಕಾಯನ ಕಲ್ಚರಲ್ ಟ್ರಸ್ಟ್, ತಾಲೂಕು ರೈತಸಂಘ, ತಾಲೂಕು ಪದವಿಪೂರ್ವ ಉಪನ್ಯಾಸಕ ಸಂಘ ಮತ್ತು ಗ್ರಾಮ ಭಾರತಿ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ತಾಲೂಕಿನ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಮಹಾತ್ಮ ಗಾಂಧಿಯವರ ಬದಕು- ಬರಹ ಮತ್ತು ಹೋರಾಟ ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮತ್ತು ಕುವೆಂಪು ನಿತ್ಯ ಸ್ಮರಣೀಯ ವ್ಯಕ್ತಿತ್ವಗಳು. 12ನೇ ಶತಮಾನದಲ್ಲಿ ಬಸವಣ್ಣ ತೋರಿಸಿದ ಸರ್ವ ಸಮಾನ ಸಮಾಜ ನಿರ್ಮಾಣದ ಕನಸಿನ ತಳಹದಿಯ ಮೇಲೆ ಗಾಂಧಿಯವರ ಚಿಂತನೆಗಳು ವಿಸ್ತೃತಗೊಂಡಿವೆ ಎಂದರು.ಗಾಂಧಿ ಸಮಾಜ ಸುಧಾರಕರಲ್ಲ. ಬದಲಾಗಿ ಹೃದಯಗಳನ್ನು ಸುಧಾರಿಸಲು ಪ್ರಯತ್ನಿಸಿದವರು. ಅಹಿಂಸೆ ಎನ್ನುವುದು ಗಾಂಧಿ ಮಾನವ ಜಗತ್ತಿಗೆ ನೀಡಿದ ಬಹುದೊಡ್ಡ ಹೋರಾಟದ ಅಸ್ತ್ರ. ಜಗತ್ತಿನ ಮೇಲೆ ಮಹಾತ್ಮ ಗಾಂಧಿ ಬೀರಿದ ಪ್ರಭಾವ ಅಸಾಮಾನ್ಯವಾದುದು ಎಂದು ತಿಳಿಸಿದರು.
ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ಧಮನಿತರ ಪರವಾಗಿ ಧ್ವನಿಯೆತ್ತಿದವರು. ಆದರೆ ಇಂದು ಮತಬ್ಯಾಂಕ್ ರಾಜಕಾರಣಕ್ಕಾಗಿ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಮುಖಾಮುಖಿಯಾಗಿಸಲಾಗಿದೆ. ಹಣವುಳ್ಳವರ ಮತ್ತು ವಾಮಮಾರ್ಗದಲ್ಲಿ ಅಧಿಕಾರ ಪಡೆದವರನ್ನು ಯುವ ಸಮುದಾಯ ಹಿಂಬಾಲಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯುವ ಸಮುದಾಯದ ಬಳಿಗೆ ಗಾಂಧೀಜಿಯವರನ್ನು ತಲುಪಿಸುವ ಕೆಲಸ ಮಾಡಬೇಕು. ಶಾಲಾ ಕಾಲೇಜುಗಳಲ್ಲಿ ಗಾಂಧಿ ಕುರಿತ ವಿಚಾರ ಸಂಕಿರಣಗಳನ್ನು ನಡೆಸಿ ಗಾಂಧಿ ಕೃತಿಗಳನ್ನು ಓದಿಸುವ ಕೆಲಸ ಆಗಬೇಕು ಎಂದು ಕರೆ ನೀಡಿದರು.
ಅನಂತರ ನಡೆದ ವಿಚಾರ ಗೋಷ್ಠಿಗಳಲ್ಲಿ ಲೇಖಕಿ ಡಾ.ಎಚ್.ಎಸ್.ಅನುಪಮಾ ಅವರು, ಗಾಂದೀಜಿ ಮತ್ತು ಅಂಬೇಡ್ಕರ್ ನಡುವಿನ ಅಂದಿನ ಭಿನ್ನಾಭಿಪ್ರಾಯಗಳನ್ನು ಅರ್ಥೈಸಿಕೊಳ್ಳುವುದರ ಬಗ್ಗೆ ಮಾತನಾಡಿದರು. ಗಾಂಧೀಜಿಯವರ ಮೇಲೆ ಪ್ರಭಾವ ಬೀರಿದ ಪುಸ್ತಕಗಳು ಹಾಗೂ ವ್ಯಕ್ತಿಗಳನ್ನು ಕುರಿತು ಬಸರಾಳು ಸ.ಪ.ಪೂ ಕಾಲೇಜಿನ ಉಪನ್ಯಾಸಕ ಲೋಕೇಶ್ ಬೆಕ್ಕಳಲೆ, ಮಂಡ್ಯ ಜಿಲ್ಲೆಯಲ್ಲಿ ಗಾಂಧೀಜಿಯವರ ಹೆಜ್ಜೆಗಳನ್ನು ಕುರಿತು ಮಂಡ್ಯ ವಿಶ್ವ ವಿದ್ಯಾನಿಲಯದ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ಶಿವರಾಮು, ಗ್ರಾಮೀಣ ಯುವಜನತೆ ಮತ್ತು ಸ್ವಾವಲಂಬನೆ ಕುರಿತು ಮೇಲುಕೋಟೆಯ ಡಾ.ಸುಮನಸ್ ಕೌಲಗಿ ವಿಚಾರ ಮಂಡಿಸಿದರು.