ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಶನಿವಾರ ಆಯೋಜಿಸಿದ್ದ ‘ಔಷಧೀಯ ಸಸ್ಯಗಳ ವೈವಿಧ್ಯ ಮತ್ತು ಸಂರಕ್ಷಣೆ’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಮಕ್ಕಳು ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುವಾಗ ಪರಿಸರದೊಂದಿಗೆ ಒಡನಾಡಿ, ಮನೆಯಲ್ಲಿ ಹಿರಿಯರ ಮೂಲಕ ಗಿಡಗಳ ಔಷಧೀಯ ಪ್ರಯೋಜನ ಅರಿಯುತ್ತಿದ್ದರು. ಈಗ ಈ ಅವಕಾಶ ಇಲ್ಲವಾಗಿದೆ. ನಗರ ವಿಸ್ತರಣೆಗೆ ಅರಣ್ಯ ನಾಶವಾಗುತ್ತದೆ. ನಾಟಿವೈದ್ಯ ಪದ್ಧತಿಯಲ್ಲಿ ಗಿಡಮೂಲಿಕೆಗಳ ಪರಿಚಯವನ್ನು ರಹಸ್ಯವಾಗಿರಿಸುವ ಕ್ರಮವಿದೆ. ಈ ಎಲ್ಲ ಆಯಾಮಗಳಲ್ಲಿ ನೋಡಿದಾಗ ಗಿಡಮೂಲಿಕೆಗಳ ಕುರಿತು ಜಾಗೃತಿ ಹೊಂದಿ ಅವುಗಳನ್ನು ಸಂರಕ್ಷಿಸುವ ಬಗೆಯನ್ನು ಕಂಡುಕೊಳ್ಳಬೇಕಿದೆ ಎಂದು ಅವರು ಹೇಳಿದರು.ಔಷಧೀಯ ಸಸ್ಯಗಳ ಬಗ್ಗೆ ಗೂಗಲ್ ಮಾಹಿತಿ ಒದಗಿಸಬಹುದು. ಆದರೆ ನೈಜ ಅನುಭವ, ಜ್ಞಾನ ನೀಡಲು ಸಾಧ್ಯವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಫಿ ಗಿಡ ಬೆಳೆಯಬಹುದು ಆದರೆ ಕಾಯಿ ಬಿಡಿವುದು ಕಷ್ಟ. ಕಾಫಿ ಕೃಷಿಯಲ್ಲಿ ತಳಿ ಮತ್ತು ಭೌಗೋಳಿಕ ಸ್ಥಿತಿ ಸಂಬಂಧಿಸಿದಂತೆ ಬ್ರಿಟಿಷರು ಕರಾರುವಾಕ್ಕಾಗಿ ನಿರ್ಣಯಗಳನ್ನು ಮಾಡಿದ್ದರು. ಅದೇ ರೀತಿ ಗಿಡಮೂಲಿಕೆ ಕುರಿತೂ ಅರಿವು ಅಗತ್ಯ. ಈ ನಿಟ್ಟಿನಲ್ಲಿ ಪ್ರಯತ್ನ, ಸಂಶೋಧನೆ ಆಗಬೇಕು ಎಂದರು.
ಮುಖ್ಯ ಅತಿಥಿ, ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಇನ್ನೋರ್ವ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅವರು ಸಸ್ಯಶಾಸ್ತ್ರ ವಿಭಾಗದ ಸಸ್ಯಸೌರಭ ಭಿತ್ತಿಪತ್ರಿಕೆಯ ಒಂಬತ್ತನೇ ಸಂಚಿಕೆ ‘ಡೈವರ್ಸಿಟಿ ಆಫ್ ಎಥ್ನೋಮೆಡಿಸಿನ್’ ಬಿಡುಗಡೆಗೊಳಿಸಿದರು.
ಔಷಧೀಯ ಸಸ್ಯಗಳ ಅಭಿವೃದ್ಧಿಗಾಗಿ ಔಷಧ ಸಸ್ಯೋದ್ಯಾನ ನಿರ್ಮಾಣಕ್ಕೆ ಕೇಂದ್ರದ ರಾಷ್ಟ್ರೀಯ ಔಷಧೀಯ ಸಸ್ಯ ಮಂಡಳಿ ವತಿಯಿಂದ ಅನುದಾನ ಲಭಿಸಿದ್ದಕ್ಕಾಗಿ ಕಾಲೇಜನ್ನು ಅವರು ಅಭಿನಂದಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಕೃಷಿ ವಿಜ್ಞಾನಿ ಮತ್ತು ಲೇಖಕ (ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ) ಡಾ. ಕೆ.ಎನ್. ಗಣೇಶಯ್ಯ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ಔಷಧಿ ಸಸ್ಯ ಪ್ರಾಧಿಕಾರದ ಸೀನಿಯರ್ ಮೆಡಿಸಿನಲ್ ಪ್ಲಾಂಟ್ಸ್ ಕನ್ಸಲ್ಟೆಂಟ್ ಡಾ. ಎಂ.ಜೆ. ಪ್ರಭು ಉಪಸ್ಥಿತರಿದ್ದರು.
ದ.ಕ. ಜಿಲ್ಲೆಯ ಹಾಗೂ ಕೇರಳ, ಮಹಾರಾಷ್ಟ್ರ, ರಾಜಸ್ಥಾನ ಮತ್ತಿತರ ವಿವಿಧ ರಾಜ್ಯಗಳ ವಿವಿಧ ಕಾಲೇಜುಗಳಿಂದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.