ವಸತಿ ಶಾಲೆಗಳಿಗೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಲು ಹೊಸ ಜಾತಿ ಪ್ರಮಾಣ ಪತ್ರದ ನಿಯಮವು ಪಾಲಕರು, ಮಕ್ಕಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
ಕುಷ್ಟಗಿ: 2026ನೇ ಸಾಲಿನ ಮೊರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚೆನ್ನಮ್ಮ ಸೇರಿದಂತೆ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕ ಫೆ. 7ರ ವರೆಗೆ ವಿಸ್ತರಿಸುವ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಫೆ. 3ರಂದು ಆದೇಶ ಹೊರಡಿಸಿದ್ದಾರೆ.
ಇದರಿಂದ ವಸತಿ ಶಾಲೆ ಸೇರಬೇಕೆನ್ನುವ ಆಕಾಂಕ್ಷಿಗಳು, ಪಾಲಕರು ನಿಟ್ಟುಸಿರು ಬಿಟ್ಟಂತಾಗಿದೆ. ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು 6ನೇ ತರಗತಿ ಪ್ರವೇಶಾತಿಗೆ ದಾಖಲಾತಿ ಸಲ್ಲಿಸಲು ಜ. 25 ಹಾಗೂ ಅರ್ಜಿ ಸಲ್ಲಿಸಲು ಫೆ.2ರಂದು ಕೊನೆಯ ದಿನಾಂಕದೊಳಗೆ ಕಡ್ಡಾಯವಾಗಿ ಒಳಮೀಸಲಾತಿ ವರ್ಗಿಕರಣ ಕುರಿತು ಹೊಸ ಆರ್‌ಡಿ ಸಂಖ್ಯೆ ಹೊಂದಿರುವ ಜಾತಿ ಆದಾಯ ಪ್ರಮಾಣಪತ್ರ ತರುವಂತೆ ಆದೇಶ ಹೊರಡಿಸಿದ್ದರು.
ಈ ಹಿನ್ನೆಲೆಯಲ್ಲಿ ವಸತಿ ಶಾಲೆಗಳಿಗೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಲು ಹೊಸ ಜಾತಿ ಪ್ರಮಾಣ ಪತ್ರದ ನಿಯಮವು ಪಾಲಕರು, ಮಕ್ಕಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
ಇದನ್ನು ಮನಗಂಡ ಕನ್ನಡಪ್ರಭವೂ ಜ.25 ರಂದು ಹಾಸ್ಟೆಲ್ ಮಕ್ಕಳಿಗೆ ಜಾತಿ ಪ್ರಮಾಣ ಪತ್ರದ ಶಾಕ್ ! ಎಂಬ ತಲೆಬರಹದಡಿಯಲ್ಲಿ ಸಮಗ್ರ ವಿಶೇಷ ವರದಿ ಬಿತ್ತರಿಸಲಾಗಿತ್ತು.
ಈ ವರದಿ ಆಧಾರವನ್ನಾಗಿಟ್ಟುಕೊಂಡು ಬಂಜಾರ ಸಮಾಜದವರು ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಸರ್ಕಾರ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದರು.
ದಿನಾಂಕ ವಿಸ್ತರಣೆ ಆದೇಶ:ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ 2026ನೇ ಸಾಲಿನ ಮೊರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚೆನ್ನಮ್ಮ ಸೇರಿದಂತೆ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕ ಫೆ.7ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ವಸತಿ ಶಾಲೆ ಸೇರಬೇಕೆಂಬ ಆಕಾಂಕ್ಷಿಗಳು ಹಾಗೂ ಪಾಲಕರು ಕನ್ನಡಪ್ರಭಕ್ಕೆ ಅಭಿನಂದನೆ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.