ಪುರಸಭೆಗೆ ಮುತ್ತಿಗೆ ಹಾಕಿ ನಿವಾಸಿಗಳ ಧರಣಿ

KannadaprabhaNewsNetwork |  
Published : May 24, 2024, 12:48 AM IST
ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಖಾಲಿಕೊಡ ಪ್ರದರ್ಶಿ ಪ್ರತಿಭಟನೆ | Kannada Prabha

ಸಾರಾಂಶ

ಸಂಜೆಯೊಳಗೆ ನೀರು, ವಿದ್ಯುತ್‌ ಪೂರೈಕೆಗೆ ಆಗ್ರಹಿಸಿದ ನಾಗರಿಕರು. ಪೂರೈಸುವುದಾಗಿ ಮುಖ್ಯಾಧಿಕಾರಿ ಭರವಸೆ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಪಟ್ಟಣದ ವಾರ್ಡ್‌ ನಂ.೧೫ ರಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರು ಪೂರೈಕೆ ಮಾಡಿಲ್ಲ. ರಸ್ತೆ ತುಂಬೆಲ್ಲ ಕಸ ಬಿದ್ದಿದ್ದು ಸ್ವಚ್ಛಗೊಳಿಸಿಲ್ಲ. ಬೀದಿ ದೀಪಗಳನ್ನು ಅಳವಡಿಸುವುದು ಸೇರಿದಂತೆ ಪುರಸಭೆ ನಿರ್ಲಕ್ಷ್ಯ ಖಂಡಿಸಿ ಸ್ಥಳೀಯ ಮಹಿಳೆಯರು ಹಾಗೂ ಮುಖಂಡರು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪುರಸಭೆ ಎದುರು ಕುಳಿತು ಅಧಿಕಾರಿಗಳ ವಿರುದ್ಧ ಖಾಲಿ ಕೊಡಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ವಾರ್ಡ್‌ ಮುಖಂಡ ಯಾಶಿನ ಅತ್ತಾರ ಮಾತನಾಡಿ, ವಾರ್ಡ್‌ ನಂ.೧೫ರಲ್ಲಿನ ವಾಸಿಗಳಿಗೆ ವಾಟರ್‌ಮೆನ್‌ ಸಮರ್ಪಕವಾಗಿ ಕುಡಿಯಲು ನೀರು ಸರಬರಾಜು ಮಾಡುತ್ತಿಲ್ಲ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಮತ್ತು ವಾರ್ಡ್‌ನ ಸದಸ್ಯರಿಗೆ ಸಾಕಷ್ಟು ಬಾರಿಗೆ ದೂರು ಸಲ್ಲಿಸಲಾಗಿದೆ. ಆದರೆ ಪುರಸಭೆ ಅಧಿಕಾರಿಗಳಾಗಲಿ ಅಥವಾ ಸದಸ್ಯರಾಗಲಿ ಯಾವುದೇ ರೀತಿಯ ಸ್ಪಂದನೆ ತೋರಿಲ್ಲ. ವಾಟರ್‌ಮೆನ್‌ಗೆ ಕರೆ ಮಾಡಿದರೆ ಆತನ ಮೊಬೈಲ್‌ ಯಾವಾಗಲೂ ಸ್ವಿಚ್ಡ್‌ ಆಫ್‌ ಆಗಿರುತ್ತದೆ. ಇದರಿಂದ ಯಾರನ್ನು ಸಂಪರ್ಕಿಸಬೇಕು ಎಂಬುದು ತಿಳಿಯುತ್ತಿಲ್ಲ ಎಂದು ಕಿಡಿಕಾರಿದರು.

15ನೇ ವಾರ್ಡ್‌ನಲ್ಲಿ ಕೇವಲ ನೀರಿನ ಸಮಸ್ಯೆ ಮಾತ್ರವಲ್ಲ, ವಾರ್ಡ್‌ನಲ್ಲಿನ ಎಲ್ಲ ಮುಖ್ಯ ರಸ್ತೆಗಳಲ್ಲಿಯೂ ವಿದ್ಯುತ್ ದ್ವೀಪಗಳೇ ಇಲ್ಲ. ರಸ್ತೆಗಳು ಹದಗೆಟ್ಟು ಹೋಗಿವೆ. ಚರಂಡಿಗಳು ಸ್ವಚ್ಛತೆ ಇಲ್ಲದೇ ವಾರ್ಡ್‌ ತುಂಬ ದುರ್ನಾತ ಬೀರುತ್ತಿವೆ. ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಮಾತ್ರವಲ್ಲದೇ ಡೆಂಘೀ, ಕಾಲರಾದಂತಹ ರೋಗಗಳು ಉಲ್ಬಣಗೊಂಡರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಇಲ್ಲಿ, ನಿತ್ಯ ಬಹಿರ್ದೆಸೆಗೆ ಹೋಗಲು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. ಹೀಗೆ ವಾರ್ಡ್‌ನಲ್ಲಿ ಹತ್ತು ಹಲವಾರು ಸಮಸ್ಯೆಗಳಿದ್ದು, ಪುರಸಭೆ ಮಾತ್ರ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಸಾರ್ವಜನಿಕರ ಹಿತ ಕಾಪಾಡಬೇಕಾದ ಪುರಸಭೆ ಅಧಿಕಾರಿಗಳು, ವಾರ್ಡ್‌ ಸದಸ್ಯ ಒಂದು ದಿನವೂ ಈ ಕಡೆಗೆ ತಿರುಗಿಯೂ ನೀಡಿಲ್ಲ. ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಇದರಿಂದ ಬೇಸತ್ತು ಅನಿವಾರ್ಯವಾಗಿ ಎಲ್ಲ ಮಹಿಳೆಯರು, ಯುವಕರು ಪ್ರತಿಭಟನೆ ನಡೆಸುತ್ತಿದ್ದೇವೆ.

ನಮಗೆ ಸಮರ್ಪಕ ನೀರು ಹಾಗೂ ವಾರ್ಡ್‌ಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸಡರಿಯುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಮಾಹಿತಿ ತಿಳಿದ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನಿಸಿದರು.

ಕಳೆದ ಒಂದು ವಾರದಿಂದ ಪಟ್ಟಣದಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಕಾರಣ ಪಟ್ಟಣದ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ನೀರು ಪೂರೈಕೆಯಲ್ಲಿ ತೊಂದರೆಯಾಗಿದೆ. ಸಂಜೆಯೊಳಗೆ ನೀರು ಪೂರೈಕೆ ಮಾಡಲಾಗುವುದು, ಜೊತೆಗೆ ನಿಮ್ಮ ವಾರ್ಡ್‌ಗೆ ಭೇಟಿ ನೀಡಿ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಸ್ಪಂದಿಸಿ ಬಗೆಹರಿಸಲು ಪ್ರಯತ್ನಿಸುತ್ತೇವೆ. ಕೂಡಲೇ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ನಿವಾಸಿಗಳು ಪ್ರತಿಭಟನೆ ಕೈ ಬಿಟ್ಟಿದ್ದು, ಸಂಜೆ ನೀರು ಬರದಿದ್ದರೆ ಮತ್ತೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಪ್ರತಿಭಟನೆಯಲ್ಲಿ ಸೊಹೇಲ್ ಚೌಧರಿ, ಯಾಶಿನ ಅತ್ತಾರ, ಯೂನಿಸ್ ಹುಣಚ್ಯಾಳ, ಮಾಹಾಂತೇಶ ಕಡಿಬಾಗಲು, ಪವಾಡೆಪ್ಪ ಸಜ್ಜನ, ಖಾಜೇಸಾಬ ಮಳಗಿ, ಅಬ್ಬಾಸ ಹುಣಶ್ಯಾಳ, ಸೊಹೇಲ್ ಬಾಗವಾನ, ರಫೀಕ ಬೀಳಗಿ, ಫಜೈಲ್‌ ಮ್ಯಾಗೇರಿ, ಮಹಾಂತೇಶ ಹೂಗಾರ, ಬಿಬಿ ಮರಿಯಮ್ ಚೌಧರಿ, ಹೀನಾ ಮಳಗಿ ಸೇರಿದಂತೆ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಚೆ ಕಚೇರಿಗಳ ಬಲವರ್ಧನೆ ವಿಷಯ ಪ್ರಸ್ತಾಪಿಸಿದ ಸಂಸದ ಬಿವೈಆರ್‌
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ: ಡಾ.ನೂರಲ್ ಹುದಾ ಕರೆ