ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳಿಗೆ ಮಾರಕವಾಗಲಿರುವ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರುದ್ಧ ಜಿಲ್ಲೆಯಾದ್ಯಂತ ಜನರನ್ನು ಸಂಘಟಿಸಿ ಹೋರಾಟ ತೀವ್ರಗೊಳಿಸಲು ಹಾಗೂ ಇದರ ಜೊತೆಯಲ್ಲಿ ಕಾನೂನು ಹೋರಾಟ ಮಾಡಿ ಕೆನಾಲ್ ಕಾಮಗಾರಿಗೆ ತಡೆಯಾಜ್ಞೆ ತರುವ ಪ್ರಯತ್ನ ಮಾಡಲು ಸೋಮವಾರ ನಗರದಲ್ಲಿ ನಡೆದ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಹೋರಾಟ ಸಮಿತಿ ಸಭೆ ನಿರ್ಣಯ ಮಾಡಿತು.ವಿವಿಧ ಪಕ್ಷಗಳ ಮುಖಂಡರು, ರೈತಸಂಘ, ಹಲವು ಸಂಘಟನೆಗಳ ಪ್ರಮುಖರು ಸೇರಿದ್ದ ಸಭೆಯಲ್ಲಿ ಈ ತಿಂಗಳ 31 ರಂದು ಲಿಂಕ್ ಕೆನಾಲ್ ಕಾಮಗಾರಿ ನಡೆಯುವ ಸ್ಥಳದಲ್ಲಿ ಐದು ಸಾವಿರ ಜನರನ್ನು ಸೇರಿಸಿ ಮುತ್ತಿಗೆ ಹಾಕುವ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಲಾಯಿತು.ತೆವಡೆಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ಕುಪ್ಪೂರು ಗದ್ದುಗೆ ಮಠದ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ, ರೇವಣ ಸಿದ್ದೇಶ್ವರ ಮಠದ ಬಿಂದುಶೇಖರ ಒಡೆಯರ್ ಸ್ವಾಮೀಜಿ ಭಾಗವಹಿಸಿದ್ದರು.ನಮ್ಮಜಿಲ್ಲೆಯ ಪಾಲಿನ ಹೇಮಾವತಿ ನೀರನ್ನು ಉಳಿಸಿಕೊಳ್ಳಲು ಹೋರಾಟ ಸಮಿತಿ ರೂಪಿಸುವ ಯಾವುದೇ ರೀತಿಯ ಹೋರಾಟಕ್ಕೆ ಬೆಂಬಲ ನೀಡಿ ಭಾಗವಹಿಸುವುದಾಗಿ ಸ್ವಾಮೀಜಿಗಳು ಘೋಷಿಸಿದರು.ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಪಾವಗಡ ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳೂ ಹೇಮಾವತಿ ನೀರನ್ನು ಅವಲಂಬಿಸಿವೆ. ಹೇಮಾವತಿ ನೀರಿಲ್ಲದಿದ್ದರೆ ಬರಡು ಪ್ರದೇಶವಾಗುತ್ತಿತ್ತು. ಜಿಲ್ಲೆಯ ಪಾಲಿನ 19 ಟಿಎಂಸಿ ನೀರನ್ನು ಹೊರಗೆ ತೆಗೆದುಕೊಂಡು ಹೋಗಲು ಬಿಡಬಾರದು, ಅದಕ್ಕಾಗಿ ಯಾವ ರೀತಿಯ ಕಾನೂನು ಹೋರಾಟ ಮಾಡಬೇಕು, ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂಬುದನ್ನು ಮಾಡಬೇಕು. ಈ ಹೋರಾಟಕ್ಕೆ ಪಕ್ಷಭೇದವಿಲ್ಲದೆ ಎಲ್ಲರೂ ಬೆಂಬಲ ನೀಡಬೇಕು ಎಂದು ಕೋರಿದರು.ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ನಮ್ಮ ಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನೀರನ್ನುಎಕ್ಸ್ ಪ್ರೆಸ್ ಕೆನಾಲ್ ಮೂಲಕ ದಬ್ಬಾಳಿಕೆ ಮಾಡಿ ಮಾಗಡಿ, ರಾಮನಗರ ಕಡೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಅವೈಜ್ಞಾನಿಕ ಕೆನಾಲ್ ಯೋಜನೆ ಕಾಮಗಾರಿಯನ್ನು ಸರ್ಕಾರ ಸ್ಥಗಿತಗೊಳಿಸಬೇಕು. ಇದರ ವಿರುದ್ಧ ಕಾನೂನು ಹೋರಾಟ, ಸಾಮಾಜಿಕ ಹೋರಾಟ ಮಾಡಿ ನಮ್ಮ ನೀರನ್ನು ನಾವು ಉಳಿಸಿಕೊಳ್ಳದಿದ್ದರೆ ನಮಗೆ ಉಳಿಗಾಲವಿಲ್ಲ ಎಂದರು.ಹೋರಾಟ ಸಮಿತಿ ಅಧ್ಯಕ್ಷ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನೀರು ನಮ್ಮ ಹಕ್ಕು, ಇದನ್ನು ಕಸಿಯಲು ಬಿಡುವುದಿಲ್ಲ, ನೀರಿಗಾಗಿ ಯಾವುದೇ ತ್ಯಾಗಕ್ಕೆ ನಾವು ಸಿದ್ಧವಾಗಬೇಕು. ಕಾನೂನು ಹೋರಾಟ ಮಾಡಿ, ಕಾಮಗಾರಿಗೆ ತಡೆ ತಂದು ನೀರನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ಬಿಜೆಪಿ ಮುಖಂಡ ದಿಲೀಪ್‌ಕುಮಾರ್ ಮಾತನಾಡಿ, ಲಿಂಕ್ ಕೆನಾಲ್ ವಿರುದ್ಧ ಕಾನೂನು ಹೋರಾಟ ಅನಿವಾರ್ಯ. ಇದರ ಜೊತೆಗೆ ಜಿಲ್ಲೆಯಲ್ಲಿ ತಾಲೂಕು, ಹೋಬಳಿ, ಗ್ರಾಮಗಳ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಜನಜಾಗೃತಿಗೊಳಿಸಿ ಹೋರಾಟ ತೀವ್ರಗೊಳಿಸಬೇಕು ಎಂಬ ಸಲಹೆ ನೀಡಿದರು.
ಬಿಜೆಪಿಯಿಂದ ನಾಳೆ ಬೃಹತ್ ಪ್ರತಿಭಟನೆ
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಈ ಹೋರಾಟಕ್ಕೆ ಜಿಲ್ಲಾ ಬಿಜೆಪಿಯ ಸಂಪೂರ್ಣ ಬೆಂಬಲವಿದೆ. ಹೋರಾಟದಲ್ಲಿ ಭಾಗವಹಿಸಿ ಬೆಂಬಲ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿಯವರನ್ನು ಕೋರುವುದಾಗಿ ಹೇಳಿದ ಅವರು, ಹೋರಾಟವನ್ನು ತೀವ್ರಗೊಳಿಸಲು ಪಕ್ಷದಿಂದ ಜನರ ಸಂಘಟನೆ ಮಾಡಲಾಗುತ್ತದೆ. ಇದೇ ವಿಚಾರವಾಗಿ ಈ ತಿಂಗಳ 28ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.