ರಾಜ್ಯದಲ್ಲಿ 2028ರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದೇ ಬರುತ್ತದೆ. ಆದರೆ, ನಮ್ಮ ರಾಜ್ಯ ಬಿಜೆಪಿಯಲ್ಲಿ ಇನ್ನೂ ಗೊಂದಲ ಹಾಗೆಯೇ ಇದ್ದು, ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದಲ್ಲಿ 2028ರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದೇ ಬರುತ್ತದೆ. ಆದರೆ, ನಮ್ಮ ರಾಜ್ಯ ಬಿಜೆಪಿಯಲ್ಲಿ ಇನ್ನೂ ಗೊಂದಲ ಹಾಗೆಯೇ ಇದ್ದು, ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ಗೊಂದಲ ಮುಂದುವರಿದಿದ್ದು, ನಮ್ಮ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲೇ ನಾನೂ ಪಕ್ಷದ ಕಚೇರಿಗೆ ಕಾಲಿಟ್ಟಿಲ್ಲ ಎಂದರು.
ನಮ್ಮ ಜಿಲ್ಲೆಯಲ್ಲಿ ಮೂವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನು ನಾವೇ ಮಾಡಿಸಿದ್ದೆವು. ಆ ಎಲ್ಲರನ್ನೂ ಹೇಳದೇ, ಕೇಳದೇ ಆ ಮೂವರನ್ನೂ ಹುದ್ದೆಯಿಂದ ಕೆಳಗಿಳಿಸಿದರು. ನಾನು, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದೆವು. ಆಗ 60 ದಿನದಲ್ಲಿ ಎಲ್ಲಾ ಸರಿ ಮಾಡುತ್ತೇವೆಂದಿದ್ದರು. ಏನೂ ಮಾಡಿಲ್ಲ ಎಂದು ಅವರು ಬೇಸರ ಹೊರ ಹಾಕಿದರು.
ಯಡಿಯೂರಪ್ಪ, ವಿಜಯೇಂದ್ರ 60 ದಿನ ಸಮಯ ಕೇಳಿ, ಏನೂ ಮಾಡದಿರುವುದು ನನಗೆ ಬೇಸರ ತಂದಿದೆ. ಜಿಲ್ಲಾಧ್ಯಕ್ಷರು ನನಗೆ ಕರೆ ಮಾಡಿದರೂ ನಾನು ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಗನ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಯಡಿಯೂರಪ್ಪ, ರಾಘವೇಂದ್ರ ಕುಟುಂಬ ನನಗೂ, ನಮ್ಮನೆಯವರಿಗೆ ಕರೆದಿದ್ದಾರೆ. ಕಾರ್ಯಕ್ರಮದ ವೇಳೆ ಸಮಯವಿದ್ದರೆ, ಅವಕಾಶ ಸಿಕ್ಕರೆ ಯಡಿಯೂರಪ್ಪನವರ ಜೊತೆ ಮಾತನಾಡುತ್ತೇನೆ ಎಂದು ಅವರು ತಿಳಿಸಿದರು.
ದಾವಣಗೆರೆ ಜಿಲ್ಲೆಯ ಗೊಂದಲವನ್ನು ಸರಿಪಡಿಸದಿದ್ದರೆ ನಾವು ಭಾಗವಹಿಸಲಾಗುವುದಿಲ್ಲ, ಪರಿಸ್ಥಿತಿ ಸರಿಯಾಗದಿದ್ದರೆ ಕಷ್ಟವೆಂಬುದನ್ನೂ ಹೇಳುತ್ತೇನೆ. ದೆಹಲಿಗೆ ಹೋಗಿ ರಾಜ್ಯ ಬಿಜೆಪಿ ಉಸ್ತುವಾರಿ ಹರೀಶ ದ್ವಿವೇದಿ ಭೇಟಿ ಮಾಡಿ, ಮಾತನಾಡುತ್ತೇನೆ. ಜಿಲ್ಲೆಯ ಬಿಜೆಪಿ ಪರಿಸ್ಥಿತಿ ತೀರಾ ಹದಗೆಟ್ಟಿರುವ ಬಗ್ಗೆ ಗಮನಕ್ಕೆ ತಂದಿದ್ದೇವೆ. ಸಾಧ್ಯವಾದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ, ಚರ್ಚಿಸುವೆ. ಜಿಪಂ, ತಾಪಂ ಚುನಾವಣೆಗೂ ಮುನ್ನವೇ ಎಲ್ಲಾ ಸಮಸ್ಯೆಗಳೂ ಬಗೆಹರಿಯಬೇಕು ಎಂದು ಹೇಳಿದರು.
ನಮ್ಮ ಅನುಯಾಯಿಗಳೂ ಇರುತ್ತಾರೆ. ಅಂತಹವರನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ ಕಷ್ಟವಾಗುತ್ತದೆ. ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿರುವ ಭಿನ್ನಮತದ ಬಗ್ಗೆ ನೀವೇ ರಾಜ್ಯಾಧ್ಯಕ್ಷರಿಗೆ ಕೇಳಬೇಕು. ಯಡಿಯೂರಪ್ಪನವರು ಹಿಂದೆ ನಾವು ದಾವಣಗೆರೆ ಜಿಲ್ಲೆಗೆ ಏನೇ ಕೇಳಿದರೂ ಮಾಡಿಕೊಟ್ಟಿದ್ದರು. ಯಡಿಯೂರಪ್ಪನವರ ಬಗ್ಗೆ ನಮ್ಮ ಯಾವುದೇ ಆಕ್ಷೇಪವೂ ಇಲ್ಲ. ರಾಜ್ಯಾಧ್ಯಕ್ಷ ಇನ್ನೂ ಯುವಕ, ಎಲ್ಲವನ್ನೂ ಸರಿ ಮಾಡಿಕೊಂಡು ಹೋಗಬೇಕು. ಸರಿ ಮಾಡಿಕೊಂಡರೆ ನಾವೂ ಗೌರವ ಕೊಡುತ್ತೇವೆ. ಯಾರದ್ದೋ ಮಾತು ಕೇಳಿಕೊಂಡು ಮಾಡಿದರೆ ತಪ್ಪಾಗುತ್ತದೆ ಎಂದು ಅವರು ತಿಳಿಸಿದರು.
ವಿಧಾನಸಭೆ ಚುನಾವಣೆ, ಎಂಎಲ್ಸಿ ಚುನಾವಣೆ ಎಲ್ಲರೂ ಒಂದಾಗಿ ಕೆಲಸ ಮಾಡಿದ್ದೇವೆ. ನಾವ್ಯಾರೂ ಹಿಂದೆ ಸರಿದಿಲ್ಲ. ಹಿಂದೆ ಸರಿದವರಿಗೆ ಪಾಪ, ಪುಣ್ಯ ಗೊತ್ತಾಗುತ್ತದೆ. ಮುಂದೆಯೂ ಸಹ ಎಂಎಲ್ಎ ಚುನಾವಣೆ ಬರುತ್ತವೆ. ಅದಕ್ಕೆ ಪಕ್ಷ ಸರಿ ಮಾಡಿಕೊಳ್ಳಲಿ. ನಾನೂ ಹಿರಿಯ, ನಮ್ಮನೆಯಲ್ಲೇ 6 ಸಲ ಸಂಸದರಾಗಿದ್ದೇವೆ. ಪಕ್ಷ ಕಟ್ಟಲು ನನ್ನ ಹೋರಾಟ, ತನು, ಮನ ಎಲ್ಲವನ್ನೂ ಅರ್ಪಿಸಿದ್ದೇವೆ. ದಾವಣಗೆರೆಯಲ್ಲಿ ಪಕ್ಷ ಕಟ್ಟಲು ನಮ್ಮ ಪರಿಶ್ರಮವೂ ಇದೆ. ಯಾರೋ ಪುಣ್ಯಾತ್ಮ ಆ ಜಿಲ್ಲೆಯವರು, ಈ ಜಿಲ್ಲೆಯವರು, ಪಕ್ಷ ಕಟ್ಟಿಲ್ಲವೆನ್ನುತ್ತಾರೆ. ಆ ಪುಣ್ಯಾತ್ಮ ಮಾತಿಗೆ ಒತ್ತು ಕೊಡುವುದಿಲ್ಲ ಎಂದು ತಮ್ಮ ರಾಜಕೀಯ ವಿರೋಧಿಗಳಿಗೆ ಹೇಳಿದರು.
-----
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಎಲ್ಲಾ ಹಣ ಹಾಕಿದ್ದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳೂ ಇಲ್ಲದಂತಾಗಿದೆ. ಎಲ್ಲಿ ಯಾವ ಅಭಿವೃದ್ಧಿ ಕಾರ್ಯಗಳು, ಭೂಮಿಪೂಜೆ ಎಲ್ಲಿ ಆಗುತ್ತಿದೆ? ಮೈನ್ಸ್ದು ಡಿಎಂಎ ಫಂಡ್ನಿಂದ ಚಿತ್ರದುರ್ಗ, ಹೊಳಲ್ಕೆರೆ, ಬಳ್ಳಾರಿ, ವಿಜಯ ನಗರ ಜಿಲ್ಲೆಯಲ್ಲಿ ಒಂದಿಷ್ಟು ಕೆಲಸವಾಗುತ್ತಿದೆ. ಮೈನ್ಸ್ ನವರು ಕಟ್ಟಿದ ಹಣದಲ್ಲಿ ಆ ಕೆಲಸವಾಗುತ್ತಿದೆ ಅಷ್ಟೇ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.