ಮತದಾನ ಜಾಗೃತಿ
ಚನ್ನರಾಯಪಟ್ಟಣ: ಏ.೨೬ ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಶೇ.೮೫ಕ್ಕೆ ಹೆಚ್ಚಿಸುವ ಸಂಕಲ್ಪ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಜಿ.ಆರ್.ಹರೀಶ್ ತಿಳಿಸಿದರು.ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಸ್ವೀಪ್ ಸಮಿತಿ ಚನ್ನರಾಯಪಟ್ಟಣ, ಎನ್‌ಆರ್‌ಎಲ್‌ಎಂ ಘಟಕ, ಪುರಸಭೆ ಚನ್ನರಾಯಪಟ್ಟಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿಯಾಗಿ ಆಯೋಜನೆ ಮಾಡಿದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲ ಮತದಾರರಿಗೂ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ, ಕಡ್ಡಾಯ ಮತದಾನ ಮಾಡುವಂತೆ ಮತದಾರರನ್ನು ಪ್ರೇರೇಪಿಸುವ ಜವಾಬ್ದಾರಿ ಮತಗಟ್ಟೆ ಹಂತದ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಎಂಬಿಕೆ, ಎಲ್‌ಸಿಆರ್‌ಪಿಗಳ ಮೇಲೆ ಇರುತ್ತದೆ ಎಂದರು, ಲೋಕಸಭಾ ಚುನಾವಣೆ ನಡೆಯಲು ಬೆರಳೆಣಿಕೆಯ? ದಿನಗಳು ಮಾತ್ರ ಉಳಿದಿದ್ದು ಬಿ.ಎಲ್ ಒಗಳು ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ ಮತದಾರರಿಗೆ ಮತದಾನ ಕುರಿತು ಸಾರ್ವತ್ರಿಕ ಜಾಗೃತಿ ಮೂಡಿಸಬೇಕು. ತಮ್ಮ ಮತಗಟ್ಟೆಯ ವ್ಯಾಪ್ತಿಯ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಮತದಾನದ ಮಹತ್ವದ ಬಗ್ಗೆ ತಿಳಿಸಬೇಕು.ಮತದಾನ ಮಾಡುವ ಸಂದರ್ಭದಲ್ಲಿ ಹಾಜರುಪಡಿಸಬೇಕಾದ ದಾಖಲಾತಿಗಳ ಬಗ್ಗೆ ಮಾಹಿತಿಗಳನ್ನು ನೀಡಬೇಕು ಎಂದು ತಿಳಿಸಿದರು.ಮತದಾನ ಜಾಗೃತಿ ಜಾಥಾವು ತಾಲೂಕು ಪಂಚಾಯತಿ ಆವರಣದಿಂದ ಮೆರವಣಿಗೆ ಹೊರಟು ಕೃಷ್ಣರಾಜ ವೃತ್ತ, ಶ್ರೀಕಂಠಯ್ಯ ವೃತ್ತ, ಎಪಿಎಂಸಿ ಆವರಣ, ಕೋರ್ಟ್ ಮುಂಭಾಗ, ವಾರದ ಸಂತೆ ಆವರಣ, ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸಿದ್ದರು. ಅನಂತರ ತಾಲೂಕು ಪಂಚಾಯತಿ ಮುಂಭಾಗದಲ್ಲಿ ಮಾನವ ಸರಪಳಿ ನಿರ್ಮಿಸಿ, ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಿ.ಆರ್.ಹರೀಶ್, ಸಹಾಯಕ ನಿರ್ದೇಶಕ ಗಿರೀಶ್, ಪುರಸಭೆಯ ಅಧಿಕಾರಿ ಶಾರದಮ್ಮ, ತಾಲೂಕು ಪಂಚಾಯತಿ ನೌಕರ ಟಿಪಿಎಮ್ ದೇವರಾಜು, ಸಿಎಸ್ ದೇವರಾಜು, ವಿನುತ, ಯಶಸ್ವಿನಿ ಹಾಜರಿದ್ದರು.ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಜಿ. ಆರ್. ಹರೀಶ್ ಮಾತನಾಡಿದರು.