ಕಾರಟಗಿ: ಕಸವರಮೆಂಬುದು ನೆರೆ ಸೈ | ರಿಸಲಾರ್ಪೊಡೆ ಪರವಿಚಾರಮಂ ಧರ್ಮಮುಮಂ |
ಪರರ ವಿಚಾರ, ಧರ್ಮ ಗೌರವಿಸುವುದು ಬಂಗಾರಕ್ಕೆ ಸಮಾನ ಎಂದು ಕಾರಟಗಿ ತಾಲೂಕಿನ 3ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷ. ಡಾ. ಸಿ.ಬಿ.ಚಿಲ್ಕರಾಗಿ ಹೇಳಿದರು.
ಕಾರಟಗಿ ತಾಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿದರು.ಜಗತ್ತಿನಲ್ಲಿ ಚರ್ಚೆಯಾಗುತ್ತಿರುವ ಯಾಂತ್ರಿಕ ಬುದ್ಧಿಮತ್ತೆ ಎಐ ಮತ್ತು ಚಿಪ್ ಆಧಾರಿತ ಕಲಿಕೆ ಪ್ರಮುಖ ಪಾತ್ರ ವಹಿಸಿದ್ದರಿಂದ ನಮ್ಮ ದೇಶದ ಬಗ್ಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಮಾಪನ ಗಾಬರಿ ಹುಟ್ಟಿಸುವಷ್ಟು ಕುಸಿದು ಹೋಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಷ್ಟ್ರಕೂಟರ ಕಾಲದ ಶ್ರೀವಿಜಯನು ಕವಿರಾಜ ಮಾರ್ಗ ಕಾವ್ಯ ರಚಿಸಿ ಇಡೀ ಕರ್ನಾಟಕದಲ್ಲಿಯೇ ವಿಶಿಷ್ಟ ಸೌಂದರ್ಯದ ಭಾಷೆ ಬಳಕೆ ಮಾಡುವವರಲ್ಲಿ ಕೊಪಣಿಗರು ಪ್ರಮುಖರು ಎಂದು ಸಾರಿದರು
ಕನ್ನಡ ಭಾಷೆ-ಸಾಹಿತ್ಯವು ಭಾರತೀಯತೆಗೆ ಬಹುದೊಡ್ಡ ಪರಂಪರೆ ನೀಡಿದೆ. ಹಲವಾರು ಭಾಷೆ, ವಿಭಿನ್ನ ಸಂಸ್ಕೃತಿ, ಹತ್ತಾರು ಮತ ಧರ್ಮಗಳಲ್ಲಿ, ಕನ್ನಡತನ ಕನ್ನಡ ಸಂಸ್ಕೃತಿ ಕನ್ನಡ ಮನಸ್ಸು ಗುರುತಿಸಿಕೊಂಡಿವೆ. ಮತ್ತು ಭಿನ್ನತೆ ತನ್ನೊಳಗೆ ಜೀರ್ಣಿಸಿಕೊಂಡು ತನ್ನದೇ ತೇಜಸ್ಸನ್ನು ಮೆರೆಯುತ್ತಾ ಬಂದಿದೆ. ಪಂಪ, ರನ್ನ,ಪೊನ್ನ ವಚನಕಾರರು ಜನ್ನ ಹರಿಹರ ರಾಘವಾಂಕ ಚಾಮರಸ ಕುಮಾರವ್ಯಾಸ ಲಕ್ಷೀಶ ಕನಕ ಪುರಂದರಾದಿ ದಾಸವರೇಣ್ಯರು, ನಿಜಗುಣರಾದಿ ತತ್ವಪದಕಾರರು ಇವರೆಲ್ಲರ ಸಾಹಿತ್ಯ ಬರೀ ಸಾಹಿತ್ಯವೆನಿಸದೆ, ಬದುಕಿನ ಜ್ಞಾನಕೋಶಗಳೇ ಆಗಿವೆ. ಆಧುನಿಕ ಸಾಹಿತಿಗಳಾದ ಕುವೆಂಪು ಮಾಸ್ತಿ ಬೇಂದ್ರೆ ಕಾರಂತ ಪುತಿನ ಚದುರಂಗ ಜಿಎಸ್ ಶಿವರುದ್ರಪ್ಪ ಅನಂತಮೂರ್ತಿ ತೇಜಸ್ವಿ ಭೈರಪ್ಪ ಲಂಕೇಶ್ ಕೃಷ್ಣ ಆಲನಹಳ್ಳಿ ಡಿಆರ್ ನಾಗರಾಜ ದೇವನೂರ ಮಹಾದೇವ ನಟರಾಜ ಬೂದಾಳ ಕಾತ ಚಿಕ್ಕಣ್ಣ ಅವರ ಸಾಹಿತ್ಯದವರೆಗೂ ವಿಸ್ತರಿಸಿ, ಈಗಲೂ ಬರೆಯುವ ಯುವ ಬರಹಗಾರರೂ ಮುಂದುವರಿಸಿದ್ದಾರೆ. ಅದರ ಈಗಿನ ಸಾಹಿತ್ಯ ಕೃತಿಗಳ ಗುಣಮಟ್ಟ ಕುರಿತು ಲೇಖಕರು ಆತ್ಮವಲೋಕನ ಮಾಡಿಕೊಳ್ಳಬೇಕಿದೆ .
ಮಾತೃಭಾಷೆಯಾಗಿರದ ಭಾಷೆಯೊಂದನ್ನು ಶಿಕ್ಷಣದ ಕೊಡುಕೊಳ್ಳುವಿಕೆಯ ಬಳಕೆಗೆ ಹೇರಿದಾಗ ಭಾರತದ ಜ್ಞಾನೋತ್ಪಾದನೆಗೆ ತೀವ್ರ ಧಕ್ಕೆ ಉಂಟಾಗಿದ್ದನ್ನು ಹಿಂದಿನಿಂದ ಇಂದಿನವರೆಗೂ ಮುಂದುವರಿಯುತ್ತಿರುವ ಜಾತಿ ತಾರತಮ್ಯ, ವಸಾಹತು ಶಾಹಿ ಸಾಂಸ್ಕೃತಿಕ ಯಜಮಾನಿಕೆ ಮತ್ತು ಪಶ್ಚಿಮದ ದಾಹಿಮನೋಸ್ಥಿತಿಯ ಸಾಮ್ರಾಜ್ಯಶಾಹಿ ಧೋರಣೆಗಳು, ಭಾರತದಲ್ಲಿಯ ಜ್ಞಾನ ದಿವಾಳಿಯಂಚಿಗೆ ತಂದು ನಿಲ್ಲಿಸಿದ್ದನ್ನು ದಾಖಲೆಗಳು ತೋರಿಸುತ್ತಿವೆ.ಯಾಂತ್ರಿಕ ಬುದ್ಧಿಮತ್ತೆ (ಎಐ) ಮತ್ತು ಚಿಪ್ ಕಲಿಕೆಗಳು ಪ್ರಮುಖ ಪಾತ್ರವಹಿಸಿದ್ದರಿಂದ ನಮ್ಮ ದೇಶದ ಬಗ್ಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಮಾಪನಗಳು ಗಾಬರಿ ಹುಟ್ಟಿಸುವಷ್ಟು ಕುಸಿದು ಹೋಗಿವೆ ಎಂದರು.