ಸುಂಟಿಕೊಪ್ಪ: ಮಳೆ ಹಾನಿ ಮುಂಜಾಗ್ರತಾ ಕ್ರಮ ಸಭೆ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗುತ್ತಿದ್ದು, ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಳೆಯಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸೋಮವಾರಪೇಟೆ ಉಪವಿಭಾಗದ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ವಿವಿಧ ಗ್ರಾಮಗಳ ಮುಖಂಡರೊಂದಿಗೆ ಸಭೆ ನಡೆಯಿತು.ಶುಕ್ರವಾರ ಸಂಜೆ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದ ಡಿವೈಎಸ್ಪಿ ಚಂದ್ರಶೇಖರ್, ಜಿಲ್ಲೆಯಲ್ಲಿ ಅತೀವ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ವರದಿಯನುಸಾರ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಹಿನ್ನೆಲೆ ಭೂಮಿಯು ಸಡಿಲತೆಗೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಂತಹ ಸಂದರ್ಭ ವೀಡಿಯೋ ಚಿತ್ರೀಕರಣ ಮಾಡದೆ ಆಪತ್ತು ಸಂಭವಿಸಿದ ಸ್ಥಳದ ತುರ್ತು ಮಾಹಿತಿಯನ್ನು ಸಂಬಂಧಿಸಿದ ಇಲಾಖೆ ರವಾನಿಸುವ ಮೂಲಕ ಅಮೂಲ್ಯ ಜೀವಗಳ ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕೆಂದು ಅವರು ಕರೆ ನೀಡಿದರು.ಸುಂಟಿಕೊಪ್ಪ ಹಲವು ಕುಗ್ರಾಮಗಳನ್ನು ಹೊಂದಿರುವ ಕೇಂದ್ರವಾಗಿದೆ. ಈ ಹಿಂದೆಯೂ ಹಲವು ಕಹಿಘಟನೆಗಳು ಸಂಭವಿಸಿದೆ. ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೆ ಧಾವಿಸಲು ಜೆಸಿಬಿ, ಕ್ರೇನ್ ಮಾಲೀಕರು ಮತ್ತು ಆಪರೇಟರ್‌ಗಳು, ಆಂಬುಲೆನ್ಸ್ ಮತ್ತು ಅವುಗಳ ಚಾಲಕರು ಮತ್ತು ಮಾಲೀಕರು ಹಾಗೂ ವುಡ್ ಕಟ್ಟರ್‌ಗಳ ಮಾಲೀಕರು, ಸ್ವಯಂ ಸೇವಾ ಸಂಘಗಳು, ಮುಖಂಡರು ತಮ್ಮೊಂದಿಗೆ ಸಹಕಾರಕ್ಕೆ ಮುಂದಾಗಬೇಕೆಂದು ಅವರು ಮನವಿ ಮಾಡಿಕೊಂಡರು.ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಮಾತನಾಡಿ, ಅಪಾಯದ ಅಂಚಿನಲ್ಲಿರುವ ಸ್ಥಳಗಳ ಮಾಹಿತಿ ನೀಡುವಂತೆ ಸೂಚಿಸಿದರಲ್ಲದೆ, ತಾವು ಸಲ್ಲಿಸಿದ ಮನವಿಯನ್ನು ಸರ್ಕಾರಕ್ಕೂ, ಜಿಲ್ಲಾಡಳಿತಕ್ಕೆ ಕಳುಹಿಸುವ ಮತ್ತು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದೆಂದು ಹೇಳಿದರು.ಇದೇ ಸಂದರ್ಭ ಪಂಚಾಯಿತಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪ, ರಫೀಕ್ ಖಾನ್, ಶಬ್ಬೀರ್, ಬಿ.ಕೆ.ಪ್ರಶಾಂತ್ ಮಾತನಾಡಿ, ಸುಂಟಿಕೊಪ್ಪ ಪಟ್ಟಣದ ಪಂಪ್ ಬಡಾವಣೆಯು ಅಪಾಯದ ಅಂಚಿನಲ್ಲಿದ್ದು, ಈ ಭಾಗದಲ್ಲಿ ನೂರಾರು ಕುಟುಂಬ ವಾಸಿಸುತ್ತಿದೆ. ಅಪಾಯದ ಅಂಚಿನಲ್ಲಿರುವ ಸ್ಥಳದಲ್ಲೇ ಅಂಗನವಾಡಿ ಕೇಂದ್ರ ಕಾರ್ಯಚರಿಸುತ್ತಿದೆ. ಮುಂದೆ ಅನಾಹುತ ಸಂಭವಿಸುವ ಮುನ್ನ ಇದಕ್ಕೆ ಸೂಕ್ತ ರೀತಿಯ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಆಗ್ರಹಿಸಿದರು.ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಮಾತನಾಡಿದರು.ಸಭೆಯಲ್ಲಿ ಕಂದಾಯ ಇಲಾಖೆ ಗ್ರಾಮ ಆಡಳಿತಾಧಿಕಾರಿ ಉಮೇಶ್, ಚೆಸ್ಕಾಂ, ಶಿಕ್ಷಣ ಇಲಾಖೆ, ಪೊಲೀಸ್ ಸಿಬ್ಬಂದಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.