ಕನ್ನಡಪ್ರಭ ವಾರ್ತೆ ಮೈಸೂರುನಗರದ ಯುವರಾಜ ಕಾಲೇಜು ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಎಂ. ವೆಂಕಟೇಶ್ ಅವರು ವೃತ್ತಿಯಿಂದ ಮಂಗಳವಾರ ನಿವೃತ್ತರಾದ ಹಿನ್ನೆಲೆಯಲ್ಲಿ ಅಧ್ಯಾಪಕರ ಬಳಗದಿಂದ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಆತ್ಮೀಯವಾಗಿ ಅಭಿನಂದಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ ಮಾತನಾಡಿ, ಕಳೆದ 37 ವರ್ಷಗಳಿಂದ ಅಧ್ಯಾಪಕರಾಗಿ ಸಹ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಅಧ್ಯಯನ ಮಂಡಳಿ ಹಾಗೂ ಪರೀಕ್ಷಾ ಮಂಡಳಿ ಅಧ್ಯಕ್ಷರಾಗಿ, ಸ್ನಾತಕೋತ್ತರ ವಿಭಾಗದ ಸಂಯೋಜಕರಾಗಿ, ಐಕ್ಯೂಎಸಿ ಸಂಯೋಜಕರಾಗಿ, ಪರೀಕ್ಷಾ ನಿಯಂತ್ರಣಾಧಿಕಾರಿ, ಸಂಶೋಧನಾ ಮಾರ್ಗದರ್ಶಕರಾಗಿ, ಕರ್ನಾಟಕ ವಿಜ್ಞಾನ ಪರಿಷತ್ತಿನ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಪ್ರೊ.ಬಿ.ಎಂ. ವೆಂಕಟೇಶ್ ಅವರು ಕಾರ್ಯ ನಿರ್ವಹಿಸಿದ್ದಾರೆ ಎಂದರು.ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ನೂರಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿ ಯುವ ಅಧ್ಯಾಪಕರಿಗೆ ಮಾದರಿಯಾಗಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳ ಮೆಚ್ಚಿನಗುರುವಾಗಿ ವೃತ್ತಿ ಬದುಕನ್ನು ಸಾರ್ಥಕಗೊಳಿಸಿದ್ದು, ಅವರು ನಡೆದು ಬಂದದಾರಿ, ಶ್ರಮದಾಯಕ ಕೃಷಿ ಕುಟುಂಬದ ಹಿನ್ನೆಲೆ ಅವರನ್ನು ಒಬ್ಬ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿವೆ ಎಂದು ಅವರು ಹೇಳಿದರು.ಪ್ರೊ.ಕೆ. ಅಜಯಕುಮಾರ್ ಮಾತನಾಡಿ, ಪ್ರೊ.ಬಿ.ಎಂ. ವೆಂಕಟೇಶ್ ಅವರು ಶೈಕ್ಷಣಿಕ ಪ್ರಗತಿಗೆ ತಮ್ಮದೇ ಆದ ಪ್ರಾಮಾಣಿಕ ಕೊಡುಗೆ ನೀಡಿದ್ದಾರೆ. ಸತತ ಅಧ್ಯಯನ, ಸಂಶೋಧನೆ ಹಾಗೂ ಉತ್ತಮ ಬೋಧಕರಾಗಿಯೂ ಮೆಚ್ಚುಗೆ ಪಡೆದಿದ್ದಾರೆ. ಹೀಗೆ ವೃತ್ತಿ ಜೀವನದುದ್ದಕ್ಕೂ ಸಾಮಾಜಿಕ ಕಳಕಳಿ, ಶಿಸ್ತು, ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬಂದಿದ್ದಾರೆ ಎಂದರು.ಅಭಿನಂದನೆ ಸ್ವೀಕರಿಸಿದ ಪ್ರೊ.ಬಿ.ಎಂ. ವೆಂಕಟೇಶ್ ಮಾತನಾಡಿ, ಅಧ್ಯಾಪಕ ವೃತ್ತಿ ನನ್ನ ಬದುಕನ್ನು ಸಾರ್ಥಕ ಗೊಳಿಸಿದೆ. ಆದರ್ಶ ಗುರು ಪರಂಪರೆಯ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.ಕಾಲೇಜಿನ ಪ್ರೊ.ಎಚ್.ಎಸ್. ಜಯಂತ್, ಪ್ರೊ. ಜಯದೇವಪ್ಪ, ಪ್ರೊ. ರವಿ ಸಲ್ಡಾನ, ಪ್ರೊ. ದೇಮಪ್ಪ, ಪ್ರೊ. ಶೇಖರ್ ನಾಯ್ಕ್, ಪ್ರೊ.ಎಂ.ಎನ್. ಕುಮಾರ್ ಮಾತನಾಡಿದರು.ಅಧ್ಯಾಪಕರ ಬಳಗದ ಕಾರ್ಯದರ್ಶಿ ಪ್ರೊ.ಎಸ್. ಸುರೇಶ್, ಸಂಚಾಲಕ ಪ್ರೊ.ಜಿ. ಕೃಷ್ಣಮೂರ್ತಿ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಸಿ.ಡಿ. ಪರಶುರಾಮ, ಪ್ರಾಧ್ಯಾಪಕರಾದ ಜಿ. ಶ್ರೀನಿವಾಸ್, ಎಂ.ಎಸ್. ವಸಂತ, ರೇಖಾ, ಕೋಕಿಲಾ, ಜೆ. ರಾಜೇಶ್, ಕೆ.ಬಿ. ಉಮೇಶ್, ಎಚ್. ಅನ್ನಪೂರ್ಣ, ಸುಧಾ, ನಾಗೇಶ್ ಬಾಬು, ಚಂದ್ರಯ್ಯ, ವಿಜಯಕುಮಾರ ಬೋರಟ್ಟಿ, ಸದಾಶಿವಯ್ಯ, ಕೆ. ಕೃಷ್ಣ, ಪಿ.ಜಿ. ಚಂದ್ರಶೇಖರ್, ಪ್ರತಿಭಾ ಮೊದಲಾದವರು ಇದ್ದರು.