ಕನ್ನಡಪ್ರಭ ವಾರ್ತೆ ಮೈಸೂರುಸೆಸ್ಕ್ ಮೈಸೂರು ವೃತ್ತದ ಮುಖ್ಯ ಎಂಜಿನಿಯರ್ ಆಗಿದ್ದ ಮೃತ್ಯುಂಜಯ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಗುರುವಾರ ನಗರದ ಪ್ರಧಾನ ಕಚೇರಿಯಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.ಸೆಸ್ಕ್ ಎಂಡಿ ಕೆ.ಎಂ. ಮುನಿಗೋಪಾಲ್ ರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮೃತ್ಯುಂಜಯ ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ಮಾತನಾಡಿದ ಸೆಸ್ಕ್ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು, ಮೃತ್ಯುಂಜಯ ಅವರ ಕಾರ್ಯವೈಖರಿ, ಕೆಲಸದ ಮೇಲಿನ ಶ್ರದ್ಧೆ ಮತ್ತು ನಿಷ್ಠೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿದ್ದಕ್ಕಾಗಿ ಸಂತಸ ಹಂಚಿಕೊಂಡು, ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮೃತ್ಯುಂಜಯ ಅವರು, ಸರ್ಕಾರಿ ಉದ್ಯೋಗ ದೊರೆತಿರುವುದು ನಮ್ಮ ಪುಣ್ಯಫಲ. ಆದ್ದರಿಂದ ನಾವೆಲ್ಲರೂ ಸೇವಾ ಮನೋಭಾವದಿಂದ ಕೆಲಸ ನಿರ್ವಹಿಸಬೇಕು. ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ಇದ್ದರೆ ಜನರಿಂದ ಗೌರವ ಹಾಗೂ ಪ್ರಶಂಸೆ ಸ್ವಾಭಾವಿಕವಾಗಿ ದೊರೆಯುತ್ತದೆ ಎಂದು ಹೇಳಿದರು.ತಮ್ಮ ಸೇವಾ ಅವಧಿಯಲ್ಲಿ ಹೆಚ್ಚಿನ ವರ್ಗಾವಣೆ ಆಗದೆ, ದೀರ್ಘಕಾಲ ಬೆಸ್ಕಾಂನಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದು ಅವರು ಸ್ಮರಿಸಿದರು. ಹಿರಿಯ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯುವ ಮನೋಭಾವ ಹೊಂದದೆ, ಎಲ್ಲರೂ ಒಗ್ಗೂಡಿ ಸಂಸ್ಥೆಯ ಏಳಿಗೆಗಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು.ಸಂಸ್ಥೆಯ ಬಗ್ಗೆ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು. ನಾವು ಕೆಲಸ ಮಾಡುವ ಸಂಸ್ಥೆಯನ್ನು ಮನೆಯಂತೆ ಭಾವಿಸಿ, ವೃತ್ತಿ ಗೌಪ್ಯತೆ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಸದಾ ಅಧ್ಯಯನಶೀಲರಾಗಿದ್ದು ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕಿರಿಯ ಅಧಿಕಾರಿಗಳಿಗೆ ಸಂದೇಶ ನೀಡಿದರು.ಕಾರ್ಯಕ್ರಮದಲ್ಲಿ ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್ ಸೇರಿದಂತೆ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.---ಕೋಟ್ ಮೃತ್ಯುಂಜಯ ಅವರು ತಮ್ಮ ಕೆಲಸದಲ್ಲಿ ಸಕಾರಾತ್ಮಕ ಗುಣ ಹೊಂದಿದ್ದರು. ಅವರ ಕೆಲಸದ ವೈಖರಿ ಎಲ್ಲರಿಗೂ ಮಾದರಿ ಆಗಿದ್ದು, ಅವರ ಸೇವೆಯ ಅನುಭವವನ್ನು ಇನ್ನಷ್ಟು ಪರಿಣಾಮಕಾರಿ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಮೃತ್ಯುಂಜಯ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ. - ಕೆ.ಎಂ. ಮುನಿಗೋಪಾಲ ರಾಜು, ವ್ಯವಸ್ಥಾಪಕ ನಿರ್ದೇಶಕರು, ಸೆಸ್ಕ್.-------------------eom/mys/dnm/