ಹಕ್ಕುಚ್ಯುತಿ ಹೆಸರಿನಲ್ಲಿ ಅಧಿಕಾರಿಗಳಿಗೆ ರೇವಣ್ಣ ಕಿರುಕುಳ

KannadaprabhaNewsNetwork |  
Published : Mar 22, 2026, 01:30 AM IST
21ಎಚ್ಎಸ್ಎನ್9 :  | Kannada Prabha

ಸಾರಾಂಶ

ಶಾಸಕ ಎಚ್.ಡಿ. ರೇವಣ್ಣ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದ್ದು, ಜಿಲ್ಲೆ ಹಾಗೂ ತಾಲೂಕು ಮಟ್ಟದ ಆಡಳಿತಾಧಿಕಾರಿಗಳಿಗೆ ಅನಗತ್ಯ ಒತ್ತಡ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್ ಗಂಭೀರವಾಗಿ ಆರೋಪ ಮಾಡಿದರು. ಹೊಳೆನರಸೀಪುರದ ಲಕ್ಷ್ಮೀ ನರಸಿಂಹ ದೇವಾಲಯ ಯಾರೊಬ್ಬರ ವೈಯಕ್ತಿಕ ಆಸ್ತಿ ಅಲ್ಲ, ಅದು ಸಾರ್ವಜನಿಕರ ನಂಬಿಕೆಯ ಕೇಂದ್ರ. ಅದನ್ನು ಯಾರ ಮನಸ್ಸಿಗೆ ಬಂದಂತೆ ನಡೆಸಲು ಸಾಧ್ಯವಿಲ್ಲ ಎಂದು ರೇವಣ್ಣ ವಿರುದ್ಧ ಗಂಭೀರವಾಗಿ ವಾಗ್ದಾಳಿ ನಡೆಸಿದರು. ಹಿರಿಯ ರಾಜಕಾರಣಿಯಾಗಿ ರೇವಣ್ಣ ಅಧಿಕಾರಿಗಳನ್ನು ಗುರಿಯಾಗಿಸಿ ನಿರಂತರವಾಗಿ ಆರೋಪ ಮಾಡುವುದು, ಒತ್ತಡ ಹೇರುವುದು ಸರಿಯಲ್ಲ ಎಂದು ಟೀಕಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಶಾಸಕ ಎಚ್.ಡಿ. ರೇವಣ್ಣ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದ್ದು, ಜಿಲ್ಲೆ ಹಾಗೂ ತಾಲೂಕು ಮಟ್ಟದ ಆಡಳಿತಾಧಿಕಾರಿಗಳಿಗೆ ಅನಗತ್ಯ ಒತ್ತಡ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್ ಗಂಭೀರವಾಗಿ ಆರೋಪ ಮಾಡಿದರು. ನಗರದ ಡಿಸಿ ಕಚೇರಿ ಆವರಣದಲ್ಲಿರುವ ತಮ್ಮ ಕಚೇರಿಯಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿ, ಡಿಸಿ ಹಾಗೂ ತಹಸೀಲ್ದಾರ್‌ ವಿರುದ್ಧ ಹಕ್ಕುಚ್ಯುತಿ ಮಂಡಿಸಿರುವುದು ಶಾಸಕರ ಸ್ಥಾನಮಾನಕ್ಕೆ ತಕ್ಕ ನಡೆ ಅಲ್ಲ. ಹಕ್ಕುಚ್ಯುತಿ ಎನ್ನುವುದು ಗಂಭೀರವಾದ ಪ್ರಕ್ರಿಯೆ. ಅದನ್ನು ಸುಮ್ಮನೆ ಪ್ರತೀ ಅಧಿವೇಶನದಲ್ಲಿ ಯಾರ ಮೇಲಾದರೂ ಬಳಸುವುದು ಸರಿಯಲ್ಲ. ಇದು ಅಧಿಕಾರಿಗಳಿಗೆ ಭೀತಿ ಉಂಟುಮಾಡುವ ಪ್ರಯತ್ನ. ಹಿರಿಯ ರಾಜಕಾರಣಿಯಾಗಿ ರೇವಣ್ಣ ಅವರು ಯುವ ನಾಯಕರಿಗೆ ಮಾರ್ಗದರ್ಶನ ನೀಡಬೇಕು. ಆದರೆ ಅದನ್ನು ಬಿಟ್ಟು ಅಧಿಕಾರಿಗಳನ್ನು ಗುರಿಯಾಗಿಸಿ ನಿರಂತರವಾಗಿ ಆರೋಪ ಮಾಡುವುದು, ಒತ್ತಡ ಹೇರುವುದು ಸರಿಯಲ್ಲ ಎಂದು ಟೀಕಿಸಿದರು.

ಅವರು ಅನುಭವ ಹೊಂದಿದವರು. ಆ ಅನುಭವವನ್ನು ಅಭಿವೃದ್ಧಿಗೆ ಬಳಸಬೇಕಾದರೆ, ಅಧಿಕಾರ ದುರುಪಯೋಗದಿಂದ ಆಡಳಿತ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ದೂರಿದರು. ಪ್ರತಿ ಅಧಿವೇಶನದಲ್ಲೂ ಹಕ್ಕುಚ್ಯುತಿ ವಿಷಯವನ್ನು ಎತ್ತಿಕೊಂಡು ಸಣ್ಣಪುಟ್ಟ ವಿಚಾರಗಳನ್ನೇ ದೊಡ್ಡದಾಗಿ ಮಾಡಿ ಅಧಿಕಾರಿಗಳ ಮೇಲೆ ಮಾನಸಿಕ ಒತ್ತಡ ತರಲಾಗುತ್ತಿದೆ. ಇದು ಆಡಳಿತದ ಸಾಮಾನ್ಯ ಕಾರ್ಯವಿಧಾನಕ್ಕೂ ಅಡ್ಡಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. “ಅಧಿಕಾರಿಗಳು ತಪ್ಪು ಮಾಡಿದರೆ ತಿದ್ದಬೇಕು. ಆದರೆ ಅವರನ್ನು ಅವಮಾನಿಸುವ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ ಎಂದರು.

ರಾಜ್ಯಮಟ್ಟದ ವಿವಾದ ಮಾಡುತ್ತಿದ್ದಾರೆ:ಹೊಳೆನರಸೀಪುರ ಜಾತ್ರೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೇಯಸ್ ಪಟೇಲ್, ಈ ವಿಷಯವನ್ನು ರಾಜ್ಯ ಮಟ್ಟದ ವಿವಾದವನ್ನಾಗಿ ಮಾಡಿರುವುದು ರೇವಣ್ಣ ಅವರೇ ಎಂದು ದೂರಿದರು. ಜಾತ್ರೆಗೆ ಸಂಬಂಧಿಸಿದಂತೆ ನಡೆದ ಮೊದಲ ಸಭೆಯಲ್ಲಿ ತೇರಿಗೆ ಹೊಸ ಬಟ್ಟೆ ಹಾಕುವ ತೀರ್ಮಾನ ಕೈಗೊಂಡಿದ್ದರೂ, ನಂತರ ಮತ್ತೆ ಸಭೆ ನಡೆಸಿ ಅದನ್ನು ಬದಲಾಯಿಸಿರುವುದು ಏಕಪಕ್ಷೀಯ ನಿರ್ಧಾರ ಎಂದು ಹೇಳಿದರು. ನಾನು ನನ್ನ ಗೌರವಧನದಿಂದ ಎರಡು ಲಕ್ಷ ರುಪಾಯಿ ನೀಡಿದ ನಂತರ ಎರಡನೇ ಸಭೆ ಕರೆದು ನಿರ್ಧಾರ ಬದಲಾಯಿಸುವುದು ಸರಿಯಲ್ಲ. ಸಾರ್ವಜನಿಕ ವಿಚಾರಗಳಲ್ಲಿ ಎಲ್ಲರ ಅಭಿಪ್ರಾಯಕ್ಕೂ ಮಹತ್ವ ನೀಡಬೇಕು ಎಂದು ಹೇಳಿದರು. ಹೊಳೆನರಸೀಪುರದ ಲಕ್ಷ್ಮೀ ನರಸಿಂಹ ದೇವಾಲಯ ಯಾರೊಬ್ಬರ ವೈಯಕ್ತಿಕ ಆಸ್ತಿ ಅಲ್ಲ, ಅದು ಸಾರ್ವಜನಿಕರ ನಂಬಿಕೆಯ ಕೇಂದ್ರ. ಅದನ್ನು ಯಾರ ಮನಸ್ಸಿಗೆ ಬಂದಂತೆ ನಡೆಸಲು ಸಾಧ್ಯವಿಲ್ಲ ಎಂದು ರೇವಣ್ಣ ವಿರುದ್ಧ ಗಂಭೀರವಾಗಿ ವಾಗ್ದಾಳಿ ನಡೆಸಿದರು.ಜಿಲ್ಲಾಧಿಕಾರಿ ಮಹಿಳೆಯಾಗಿದ್ದರೂ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿರುವುದು ಖಂಡನೀಯ. ಒಬ್ಬ ಪ್ರಾಮಾಣಿಕ ಅಧಿಕಾರಿಯ ಮೇಲೆ ಈ ರೀತಿಯ ಆರೋಪ ಮಾಡುವುದು ಅವರ ಮನೋಬಲ ಕುಗ್ಗಿಸುವ ಪ್ರಯತ್ನ. ಇದು ಸರಿಯಲ್ಲ ಎಂದು ಹೇಳಿದರು. ರೇವಣ್ಣ ಅವರ ಈ ನಡೆ ಅವರ ಅಸಹಾಯಕತೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು. ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಏಜೆಂಟ್‌ಗಳಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಶ್ರೇಯಸ್ ಪಟೇಲ್, ಯಾವುದೇ ಅಧಿಕಾರಿ ಒಂದು ರಾಜಕೀಯ ಪಕ್ಷದ ಪರವಾಗಿ ಕಾರ್ಯನಿರ್ವಹಿಸುವುದು ಸಾಧ್ಯವಿಲ್ಲ. ಸರರ್ಕಾರಗಳು ಬದಲಾಗುತ್ತವೆ. ಆದರೆ ಅಧಿಕಾರಿಗಳು ಎಲ್ಲ ಸರ್ಕಾರಗಳಲ್ಲೂ ಕೆಲಸ ಮಾಡಬೇಕು. ಅವರ ಮೇಲೆ ರಾಜಕೀಯ ಬಣ್ಣ ಹಚ್ಚುವುದು ತಪ್ಪು ಎಂದು ಸ್ಪಷ್ಟಪಡಿಸಿದರು.ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ಕುರಿತು ಮಾತನಾಡಿದ ಅವರು, ವಿಶೇಷ ತನಿಖಾ ತಂಡ (ಎಸ್‌ಐಟಿ) ಸಂಪೂರ್ಣ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾರೂ ಅದರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿಲ್ಲ ಎಂದು ಹೇಳಿದರು. “ಯಾರಿಗಾದರೂ ತನಿಖೆ ಕುರಿತು ಅನುಮಾನ ಇದ್ದರೆ ನ್ಯಾಯಾಲಯದ ಮೊರೆ ಹೋಗಬಹುದು. ನಾವು ಎಸ್‌ಐಟಿ ಕೆಲಸದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ,” ಎಂದು ಹೇಳಿದರು. ಜೆಡಿಎಸ್ ಪಕ್ಷದಿಂದ ಪ್ರಭಾವಿ ವ್ಯಕ್ತಿಗಳ ಬೆಂಬಲಿಗರನ್ನು ಬಿಟ್ಟಿದ್ದಾರೆ ಎಂಬ ಆರೋಪಕ್ಕೂ ಅವರು ತಿರುಗೇಟು ನೀಡಿದರು.

ಗಾಂಜಾ ಸರಬರಾಜು ಜಿಲ್ಲೆಯಲ್ಲಿ ಹೆಚ್ಚು ನಡೆಯುತ್ತಿರವ ಬಗ್ಗೆ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂಸದರು, ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಮುಂದಿನ ಕ್ರಮಕೈಗೊಳ್ಳಲು ಸೂಚನೆ ಕೊಡುವುದಾಗಿ ಭರವಸೆ ನೀಡಿದರು. ಜಿಲ್ಲೆಯ ಗ್ಯಾಸ್ ಸರಬರಾಜು ಕುರಿತು ಮಾಹಿತಿ ನೀಡಿದ ಅವರು, ಸುಮಾರು ೩,೨೦೦ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಇದ್ದರೂ, ೭,೭೩೧ ಗೃಹಬಳಕೆ ಸಿಲಿಂಡರ್‌ಗಳು ಲಭ್ಯವಿರುವುದರಿಂದ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು. ಸರಬರಾಜು ವ್ಯವಸ್ಥೆ ಸರಾಗವಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದರು. ಕೊನೆಯಲ್ಲಿ ರೇವಣ್ಣ ಅವರಿಗೆ ನೇರ ಎಚ್ಚರಿಕೆ ನೀಡಿದ ಶ್ರೇಯಸ್ ಪಟೇಲ್, ತಮ್ಮ ನಡೆ ತಿದ್ದಿಕೊಂಡರೆ ಒಳಿತು. ಇಲ್ಲವಾದರೆ ಜನರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತಾರೆ. ಅಧಿಕಾರಿಗಳಿಗೆ ಕಿರುಕುಳ ನೀಡುವ ರಾಜಕೀಯವನ್ನು ಇಲ್ಲಿಗೇ ನಿಲ್ಲಿಸಬೇಕು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಕಲ್ಯಾಣಕ್ಕಾಗಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ
ಜೀವನದ ಉನ್ನತಿಗೆ ಧರ್ಮ ಪಾಲನೆ ಮುಖ್ಯ: ರಂಭಾಪುರಿ ಶ್ರೀ