ಬಳ್ಳಾರಿ: ನಗರದ ಕೌಲ್ ಬಜಾರ್ ಹಾಗೂ ಕಂಟೋನ್ಮೆಂಟ್ ಪ್ರದೇಶಗಳಲ್ಲಿ ಅನಧಿಕೃತವಾಗಿ ಒತ್ತುವರಿಯಾಗಿದ್ದ ಕೋಟ್ಯಂತರ ರುಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಜೆಸಿಬಿ ಯಂತ್ರಗಳ ಸಹಾಯದೊಂದಿಗೆ ಯಶಸ್ವಿಯಾಗಿ ತೆರವುಗೊಳಿಸಿದ್ದಾರೆ.
ಬಳ್ಳಾರಿ ನಗರದ ಸಿಟಿಸಿ ವಾರ್ಡ್ ನಂ. 20, ಬ್ಲಾಕ್ ನಂ. 13, ಟಿಎಸ್ ನಂ. 1074 ರಲ್ಲಿ ಬರುವ ಸುಮಾರು 0.93 ಸೆಂಟ್ಸ್ ವಿಸ್ತೀರ್ಣದ ಸರ್ಕಾರಿ ಹಳ್ಳದ ಜಮೀನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಸ್ಥಳದಲ್ಲಿದ್ದ ಅನಧಿಕೃತ ತಾತ್ಕಾಲಿಕ ಶೆಡ್‌ಗಳು ಮತ್ತು ಕಟ್ಟಡಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ಬಳ್ಳಾರಿ ಕೋಟೆ ಸಮೀಪದ ಹೊಸಪೇಟೆ ರಸ್ತೆಯ ಕಂಟೋನ್ಮೆಂಟ್ ವ್ಯಾಪ್ತಿಯಲ್ಲಿರುವ ಸಿಟಿಸಿ ವಾರ್ಡ್ ನಂ. 21, ಬ್ಲಾಕ್ ನಂ. 03, ಟಿಎಸ್ ನಂ.59(ಪಿ) ರಲ್ಲಿ ಬರುವ 0.10.50 ಸೆಂಟ್ಸ್ ಸರ್ಕಾರಿ ಜಮೀನಿನ ಒತ್ತುವರಿಯನ್ನೂ ಸಹ ಅಧಿಕಾರಿಗಳ ತಂಡ ಸಮ್ಮುಖದಲ್ಲಿ ತೆರವುಗೊಳಿಸಿ, ಸರ್ಕಾರದ ವಶಕ್ಕೆ ಪಡೆಯಲಾಯಿತು.ಕ್ರಿಮಿನಲ್ ಮೊಕದ್ದಮೆ ಎಚ್ಚರಿಕೆ:ತೆರವುಗೊಳಿಸಲಾದ ಜಾಗಗಳಲ್ಲಿ ಅಧಿಕೃತ ಸರ್ಕಾರಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಈ ಜಮೀನು ಸರ್ಕಾರಕ್ಕೆ ಸೇರಿದ್ದಾಗಿದ್ದು, ಮುಂದಿನ ದಿನಗಳಲ್ಲಿ ಯಾರಾದರೂ ಇದನ್ನು ಒತ್ತುವರಿ ಮಾಡಲು ಯತ್ನಿಸಿದರೆ ಅವರ ವಿರುದ್ಧ ಕಠಿಣ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಬೋರ್ಡ್‌ಗಳ ಮೂಲಕ ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.
ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದಲ್ಲಿ ಅನಧಿಕೃತವಾಗಿ ಒತ್ತುವರಿಯಾಗಿದ್ದ ಕೋಟ್ಯಂತರ ರುಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಶನಿವಾರ ತೆರವುಗೊಳಿಸಿದರು.