ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಸರ್ಕಾರದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಸ್ಪಂದನಾ ಸಭೆ ಉದ್ಘಾಟಿಸಿ ಮಾತನಾಡಿ, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಜನರ ಎಲ್ಲಾ ಸಮಸ್ಯೆಗಳನ್ನು ಏಕ ಕಾಲಕ್ಕೆ ಪರಿಹರಿಸಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನರ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಅಕ್ರಮ ಸಕ್ರಮ ಸಮಸ್ಯೆ ಪರಿಹಾರಕ್ಕಾಗಿ ‘ಎ’ ಖಾತೆ, ‘ಬಿ’ ಖಾತೆ ಮಾಡುವ ಪ್ರಕ್ರಿಯೆ ಆರಂಭಿಸಿದ್ದೇವೆ. ಯಾವುದೇ ದಾಖಲೆಗಳನ್ನು ಮಾರ್ಪಡಿಸಲು ಒಂದಷ್ಟು ಸಮಯ ಬೇಕಾಗುತ್ತದೆ. ಪಂಚಾಯತ್ ರಾಜ್, ಕಂದಾಯ ಮತ್ತು ನಗರಾಭಿವೃದ್ಧಿ ಇಲಖೆಯಲ್ಲಿ ಸಾಕಷ್ಟು ಅಕ್ರಮ-ಸಕ್ರಮ ಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರೋಪಾಯ ಕಂಡು ಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.ನಾನು ಜಿಲ್ಲೆಯ ಜವಾಬ್ದಾರಿಯುತ ಸಚಿವನಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಜಿಲ್ಲೆಯಲ್ಲಿ 20 ಸಾವಿರ ರೆವಿನ್ಯೂ ಪ್ರಕರಣ ಬಗೆಹರಿಸಲಾಗಿದೆ. ಕಳೆದ ಎಂಟು ತಿಂಗಳಿನಲ್ಲಿ ಪಾಂಡವಪುರ ಉಪ ವಿಭಾಗ ಒಂದರಲ್ಲಿಯೇ 8 ಸಾವಿರ ಪಹಣಿ ತಿದ್ದುಪಡಿ, 8 ಸಾವಿರ ಪೌತಿ ಖಾತೆ ಮಾಡಲಾಗಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಶಾಶ್ವತರಲ್ಲ. ಒಬ್ಬರ ಅಧಿಕಾರದ ಅವಧಿಯಲ್ಲಿ ಆದ ಅಭಿವೃದ್ಧಿ ಕಾಮಗಾರಿಗಳನ್ನು ಮತ್ತೊಬ್ಬರ ಅಧಿಕಾರದ ಅವಧಿಯಲ್ಲಿ ಮುಂದುವರಿಸಲೇ ಬೇಕು. ಅಭಿವೃದ್ಧಿಯಲ್ಲಿ ಪಕ್ಷ, ರಾಜಕಾರಣ ಸಲ್ಲದು. ಕೆಲಸ ಮಾಡುವವರನ್ನು ಬೈಯ್ಯವುದು ಸಹಜ. ನಾವು ಅಭಿವೃದ್ಧಿ ಕೆಲಸಗಳನ್ನು ಮಾಡಿದಷ್ಟು ವಿರೋಧಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರ ಅನುಭವ ನನಗಾಗಿದೆ. ವಿರೋಧಿಗಳ ಟೀಕೆಗೆ ಹೆದರಿ ಅಭಿವೃದ್ಧಿ ಕೆಲಸದಿಂದ ಹಿಂಜರಿಯುವವನು ನಾನಲ್ಲ ಎಂದರು.
ಇದೇ ವೇಳೆ ಪಂಚಾಯತ್ ರಾಜ್, ಇಲಾಕೆ, ಕಂದಾಯ ಮತ್ತು ಶಿಶು ಅಭಿವೃದ್ಧಿ ಇಲಾಖೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಚಿವರು ಫಲಾನುಭವ ಮಜೂರಾತಿ ಪತ್ರ ವಿತರಿಸಿದರು.