- ಅಧಿಕಾರಿಗಳು, ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಚಿವಕನ್ನಡಪ್ರಭ ವಾರ್ತೆ ಹುಣಸೂರು
ಕಂದಾಯ ಸಚಿವ ಕೃಷ್ಣಭೈರೇಗೌಡ ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ತಾಲೂಕು ಕಚೇರಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿ, ವಿಲೇವಾರಿ ವಿಳಂಬವಾಗುತ್ತಿರುವುದನ್ನು ಗಮನಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.ಬೆಳಗ್ಗೆ 11ರ ಸುಮಾರಿಗೆ ಅವರು ತಾಲೂಕು ಕಚೇರಿಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ವಾಹನದಿಂದ ಕೆಳಗಿಳಿದು ಒಬ್ಬಂಟಿಯಾಗಿ ನಡೆದುಕೊಂಡು ನೇರವಾಗಿ ಶಿರಸ್ತೇದಾರರ ಕಚೇರಿಯತ್ತ ಸಾಗಿದರು. ಅಷ್ಟರಲ್ಲಾಗಲೇ ಸಾರ್ವಜನಿಕರು ಸಚಿವರನ್ನು ಗುರುತಿಸಿ ಅವರನ್ನು ಹಿಂಬಾಲಿಸಿದರು. ಶಿರಸ್ತೇದಾರ್ ಶ್ರೀಪಾದ್ ಅವರಿಗೆ ವಿಲೇ ಆಗದೇ ಉಳಿದಿರುವ ಕಡತಗಳ ಪಟ್ಟಿಯ ರಿಜಿಸ್ಟ್ರರ್ ಪುಸ್ತಕವನ್ನು ನೀಡಲು ಕೋರಿದರು. ಅಧೀನ ಅಧಿಕಾರಿ ಪ್ರಶಾಂತ್ ಕಡತವನ್ನು ತಂದರು. ಅದರಲ್ಲಿ ಸಾರ್ವಜನಿಕರು ನೀಡಿರುವ ಅರ್ಜಿಗಳ ತಿಂಗಳುಗಳ ಕಾಲ ವಿಲೇ ಆಗದಿರುವುದನ್ನು ಕಂಡು ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಿಬ್ಬಂದಿ ಕೊರತೆಯಿದ್ದು, ಇರುವ ಸಿಬ್ಬಂದಿಯಿಂದಲೇ ಕೆಲಸ ಮಾಡಿಸುತಿದ್ದೇವೆ ಎಂದು ಶಿರಸ್ತೇದಾರ್ ಸಮಜಾಯಿಷಿ ನೀಡಲು ಮುಂದಾದಾಗ ಸಚಿವರು ಕಾರಣಗಳನ್ನು ಹೇಳಬೇಡಿ ಎಂದರು.
ಅಧಿಕಾರಿಗಳಿಗೆ ಚಾಟಿ ಬೀಸಿದ ಸಚಿವರುಈ ನಡುವೆ ಕಂದಾಯ ಇಲಾಖೆ ಹೊರತಂದಿರುವ ಇ- ಆಫೀಸ್ ಆನ್ ಲೈನ್ ತೆರೆದು ತೋರಿಸಿ ಎಂದು ಸಿಬ್ಬಂದಿ ಪ್ರಶಾಂತ್ ಅವರಿಗೆ ತಿಳಿಸಿದರು. ನಾಲ್ಕೈದು ನಿಮಿಷಗಳಾದರೂ ಆನ್ ಲೈನ್ ಓಪನ್ ಆಗಲಿಲ್ಲ. ಇದರಿಂದ ಮತ್ತುಷ್ಟ ಕೋಪಗೊಂಡ ಸಚಿವರು, ನೀವುಗಳು ಈ ತಂತ್ರಜ್ಞಾನದ ಬಳಕೆ ಮಾಡುತ್ತಿಲ್ಲವೆಂದು ತಿಳಿಯಿತು. ಹಾಗಾಗಿ ಅದು ಓಪನ್ ಆಗುತ್ತಿಲ್ಲ. ಕರ್ತವ್ಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಈ ತಂತ್ರಜ್ಞಾನದ ಬಳಕೆ ಮಾಡಲು ಸೂಚಿಸಲಾಗಿದೆ. ಆದರೆ ಇಲ್ಲಿ ಅದರ ಉಲ್ಲಂಘನೆಯಾಗುತ್ತಿದೆ. ಇನ್ನೇನು ಕೆಲಸ ಮಾಡುತ್ತಿದ್ದೀರಿ? ವಿಳಂಬವಾಗಲು ನೂರಾರು ನೆಪ ಹೇಳುವ ನೀವು, ಕೆಲಸ ಮಾಡಲು ಕೇವಲ 5 ಕಾರಣ ಕೊಡಿ ನೋಡೋಣವೆಂದು ಚಾಟಿ ಬೀಸಿದರು.
ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಬೇಕೆಂದು ಸೂಚಿಸಿದ್ದೆಜಿಲ್ಲಾಮಟ್ಟದ ಸಭೆಯಲ್ಲಿ ಜಿಲ್ಲೆಯಾದ್ಯಂತ ಒನ್ ಟು ಫೈವ್ ಮತ್ತು ಪೌತಿಖಾತೆ ಆಂದೋಲನ ಆಯೋಜಿಸುವ ಮೂಲಕ ಕಂದಾಯ ಇಲಾಖೆಯ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಬೇಕೆಂದು ಸೂಚಿಸಿದ್ದೆ. ಆದರೆ ನೀವ್ಯಾರು ಅದನ್ನು ಮಾಡಿಲ್ಲ ಯಾಕೆ? ಪ್ರತಿಯೊಂದು ಹೋಬಳಿ ವ್ಯಾಪ್ತಿಯಲ್ಲಿ ವಿಎಗಳು ಸ್ವಯಂಪ್ರೇರಿತರಾಗಿ ಒನ್ ಟು ಫೈವ್ ಕಾರ್ಯವನ್ನು 15 ದಿನಕ್ಕೊಮ್ಮೆ ಕನಿಷ್ಟ ಒಂದು ಪ್ರಕರಣವನ್ನಾದರೂ ಪೂರ್ಣಗೊಳಿಸಿ ವರದಿ ನೀಡಲು ಸೂಚಿಸಿದ್ದೆ. ನಿಮ್ಮಲ್ಲಿ ಎಷ್ಟು ಪ್ರಕರಣಗಳು ಪೂರ್ಣಗೊಂಡಿವೆ? ಪೌತಿಖಾತೆ ಆಂದೋಲನ ಆಯೋಜಿಸಿ ಎಷ್ಟು ಪ್ರಕರಣಗಳಿಗೆ ಪರಿಹಾರ ನೀಡಿದ್ದೀರಿ? ಇದ್ಯಾವುದು ಮಾಡಿಲ್ಲವೆಂದರ ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲವೆನ್ನುವುದೇ ನಿಮ್ಮ ಅಭಿಪ್ರಾಯವೇ ಎಂದು ಅಲ್ಲಿದ್ದ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸಿದಾಗ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರು.
ಸಚಿವರ ಜೊತೆಯಲ್ಲಿದ್ದ ಉಪವಿಭಾಗಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರರಿಗೆ ಪೌತಿಖಾತೆ ಆಂದೋಲನ ಆಯೋಜಿಸುವ ಕುರಿತು ಗಮನಹರಿಸಿ ವರದಿ ನೀಡಿರೆಂದು ಸೂಚಿಸಿದರು.ನಂತರ ಶ್ರೀರಂಗಪಟ್ಟಣದಲ್ಲಿ ಕಾರ್ಯಕ್ರಮವಿದೆಯೆಂದು ತಿಳಿಸಿ ಅಲ್ಲಿಂದ ತೆರಳಿದರು.
ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್ ಯದುಗಿರೀಶ್, ಮುಖಂಡರಾದ ಪುಟ್ಟರಾಜು, ರವಿ, ಶಿವಣ್ಣ ಹಾಗೂ ಸಾರ್ವಜನಿಕರು ಇದ್ದರು.