ಶಾಲೆ ತೊರೆದ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗಾಗಿ ಎಸ್ಎಸ್ಎಲ್‌ಸಿ ಪರೀಕ್ಷೆಗೆ ತರಬೇತಿ ಪಡೆಯಲು ಆಯೋಜಿಸಿದ್ದ ವಿಶೇಷ ಪುನಶ್ಚೇತನ ಶಿಬಿರದಲ್ಲಿಂದು ಜಿಲ್ಲಾಧಿಕಾರಿ ಶಿಲ್ಪಾನಾಗ್, ಇತರೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಶುಭಕೋರಿ ಬೀಳ್ಕೊಡುಗೆ ನೀಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶಾಲೆ ತೊರೆದ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗಾಗಿ ಎಸ್ಎಸ್ಎಲ್‌ಸಿ ಪರೀಕ್ಷೆಗೆ ತರಬೇತಿ ಪಡೆಯಲು ಆಯೋಜಿಸಿದ್ದ ವಿಶೇಷ ಪುನಶ್ಚೇತನ ಶಿಬಿರದಲ್ಲಿಂದು ಜಿಲ್ಲಾಧಿಕಾರಿ ಶಿಲ್ಪಾನಾಗ್, ಇತರೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಶುಭಕೋರಿ ಬೀಳ್ಕೊಡುಗೆ ನೀಡಿದರು. ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಇನ್ನಿತರ ನೆರವಿನಿಂದ ಮೂರು ತಿಂಗಳಿಗೂ ಹೆಚ್ಚು ಕಾಲ ತಾಲೂಕಿನ ಹರದನಹಳ್ಳಿಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಶಾಲೆ ಬಿಟ್ಟ ಬುಡಕಟ್ಟು ಸಮುದಾಯದ ೩೦ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್‌ಸಿ ಪರೀಕ್ಷೆಗೆ ಸಜ್ಜುಗೊಳಿಸಲು ವಿಶೇಷ ಶಿಬಿರ ಆಯೋಜನೆ ಮಾಡಲಾಗಿತ್ತು. ಊಟ, ವಸತಿ ಸಹಿತ ಶಿಬಿರದಲ್ಲಿ ೧೫ ಮಂದಿ ಶಿಕ್ಷಕರು ವಿವಿಧ ವಿಷಯಗಳನ್ನು ಬೋಧಿಸಿ ಬುಡಕಟ್ಟು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಹಾಜರಾಗಲು ಸಿದ್ದಪಡಿಸಿದ್ದಾರೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ವಿಶೇಷ ಕಾಳಜಿಯಿಂದಾಗಿ ಶಾಲೆ ತೊರೆದ ಬುಡಕಟ್ಟು ವಿದ್ಯಾರ್ಥಿಗಳಿಗೆ ವಿಶೇಷ ಶಿಬಿರ ಏರ್ಪಾಡಾಗಿತ್ತು. ವಿಶೇಷ ಕಲಿಕಾ ಪುನಶ್ಚೇತನ ಶಿಬಿರಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಇನ್ನಿತರರು ಭೇಟಿ ನೀಡಿ ಪರೀಕ್ಷೆ ಬರೆಯುತ್ತಿರುವ ಬುಡಕಟ್ಟು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಯಾವುದೇ ಭಯ ಪಡದೆ ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಎಸ್ಎಸ್ಎಲ್‌ಸಿ ನಂತರವೂ ಮುಂದಿನ ಶಿಕ್ಷಣಕ್ಕೆ ಎಲ್ಲಾ ಉತ್ತೇಜನ ನೀಡಲಾಗುತ್ತದೆ. ಉತ್ತಮ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ. ಎಲ್ಲಾ ಯಶಸ್ಸು ನಿಮಗೆ ದೊರೆಯಲಿ ಎಂದರು.ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ಆತ್ಮಸ್ತೈರ್ಯದಿಂದ ಪ್ರಯತ್ನ ಪಡಬೇಕು. ಸೋಲಿನ ಬಗ್ಗೆ ಹೆದರದೆ ಗೆಲುವಿನ ಬಗ್ಗೆ ಯೋಚಿಸಬೇಕು. ಶಿಕ್ಷಣದಲ್ಲಿ ಮುಂದೆ ಬರಬೇಕೆಂಬ ಪ್ರಯತ್ನ ಯಶಸ್ಸುಗೊಳ್ಳಲಿದೆ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನಿಮ್ಮದಾಗಲಿ ಶುಭ ಕೋರಿದರು.ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ, ರೋಟರಿ ಪಂಚಶೀಲ ಸಂಸ್ಥೆಯ ಕಿರಣ್ ರಾಬರ್ಟ್, ಬೆಂಜಮಿನ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.