ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಪಂಪ್ ಸ್ಟೋರೇಜ್ ಪ್ರಾಜೆಕ್ಟ್‌ಗೆ ಐದು ವರ್ಷಗಳ ಬಳಿಕ ಮರುಜೀವ ಬಂದಿದೆ. ಯೋಜನೆ ಕಾರ್ಯಗತಗೊಳಿಸಲು ಇಂಧನ ಇಲಾಖೆ ಮುಂದಾಗಿದೆ. ಟೆಂಡರ್ ಪ್ರಕ್ರಿಯೆ ಆರಂಭಿಸಿರುವ ಇಂಧನ ಇಲಾಖೆ ಐದು ವರ್ಷಗಳ ಹಿಂದೆ ₹4,500 ಕೋಟಿಗೆ ಸೀಮಿತವಾಗಿದ್ದ ಯೋಜನೆಯ ಗಾತ್ರವೀಗ ₹8,500 ಕೋಟಿಗೆ ವಿಸ್ತಾರಗೊಂಡಿದೆ. ರಾಜ್ಯದ 2ನೇ ಭೂಗರ್ಭ ವಿದ್ಯುತ್ ಯೋಜನೆ ಹಾಗೂ ರಾಜ್ಯದ ಅತಿ ದೊಡ್ಡ ವಿದ್ಯುತ್ ಉತ್ಪಾದನಾ ಯೋಜನೆಯೇ ಶರಾವತಿ ಶರಾವತಿ ಪಂಪ್ ಸ್ಟೋರೇಜ್ ಪ್ರಾಜೆಕ್ಟ್. ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಹಿರೇಹೆನ್ನಿ ಗ್ರಾಮದ ಬಳಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪರಿಸರಾಸಕ್ತರ ಭಾರಿ ವಿರೋಧಕ್ಕೆ ಕಾರಣವಾಗಿದ್ದ ಶರಾವತಿ ಪಂಪ್ ಸ್ಟೋರೇಜ್ ಪ್ರಾಜೆಕ್ಟ್‌ಗೆ ಐದು ವರ್ಷಗಳ ಬಳಿಕ ಮರುಜೀವ ಬಂದಿದೆ. ಯೋಜನೆ ಕಾರ್ಯಗತಗೊಳಿಸಲು ಇಂಧನ ಇಲಾಖೆ ಮುಂದಾಗಿದೆ.
ಟೆಂಡರ್ ಪ್ರಕ್ರಿಯೆ ಆರಂಭಿಸಿರುವ ಇಂಧನ ಇಲಾಖೆ ಐದು ವರ್ಷಗಳ ಹಿಂದೆ ₹4,500 ಕೋಟಿಗೆ ಸೀಮಿತವಾಗಿದ್ದ ಯೋಜನೆಯ ಗಾತ್ರವೀಗ ₹8,500 ಕೋಟಿಗೆ ವಿಸ್ತಾರಗೊಂಡಿದೆ.
ಏನಿದು ಯೋಜನೆ?:
ರಾಜ್ಯದ 2ನೇ ಭೂಗರ್ಭ ವಿದ್ಯುತ್ ಯೋಜನೆ ಹಾಗೂ ರಾಜ್ಯದ ಅತಿ ದೊಡ್ಡ ವಿದ್ಯುತ್ ಉತ್ಪಾದನಾ ಯೋಜನೆಯೇ ಶರಾವತಿ ಶರಾವತಿ ಪಂಪ್ ಸ್ಟೋರೇಜ್ ಪ್ರಾಜೆಕ್ಟ್. ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಹಿರೇಹೆನ್ನಿ ಗ್ರಾಮದ ಬಳಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ನೀರು ಸಂಗ್ರಹ ಟ್ಯಾಂಕ್ ಮತ್ತು ಪವರ್ ಸ್ಟೇಷನ್ (ವಿದ್ಯುತ್ ಉತ್ಪಾದನಾ ಘಟಕ) ನಿರ್ಮಾಣಕ್ಕೆ ಮಾಡಿರುವ ಸ್ಥಳದಲ್ಲಿ ಡ್ರಿಲ್ಲಿಂಗ್ ನಡೆಸಿ, ಅದರ ವರದಿ ಆಧರಿಸಿ ಅಂತಿಮವಾಗಿ ನಿಗದಿಪಡಿಸಿದ ಸ್ಥಳಗಳಲ್ಲಿ ಟ್ಯಾಂಕ್, ಪವರ್ ಸ್ಟೇಷನ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.
ಶರಾವತಿ ಪಂಪ್ಸ್ ಸ್ಟೋರೇಜ್ ಪ್ರಾಜೆಕ್ಟ್ ಹೆಸರಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಸಿ) ಈ ಯೋಜನೆ ಕೈಗೆತ್ತಿಕೊಂಡಿದೆ. ಗೇರುಸೊಪ್ಪ ಹಿನ್ನೀರಿನಿಂದ ತಲಕಳಲೆ ಡ್ಯಾಂಗೆ ಪೈಪ್ ಮೂಲಕ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಈ ನೀರು ಬಳಸಿ ಹಿರೇಹೆನ್ನಿ ಬಳಿ ಪವರ್ ಸ್ಟೇಷನ್‌ನಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಬಳಿಕ ಆ ನೀರು ಮತ್ತೆ ಗೇರುಸೊಪ್ಪ ಹಿನ್ನೀರು ಸೇರುತ್ತದೆ.
ಪರಿಸರಾಸಕ್ತರ ತೀವ್ರ ವಿರೋಧ:
ರಾಜ್ಯ ಸರ್ಕಾರ 2019ರಲ್ಲಿ ಶರಾವತಿ ಅಭಯಾರಣ್ಯವನ್ನು ವಿಸ್ತರಿಸಿ ಆದೇಶ ಹೊರಡಿಸಿತ್ತು. ಸಿಂಗಳೀಕ ಹಾಗೂ ಹಾರ್ನ್ ಬಿಲ್‌ಗಳ ಸಂರಕ್ಷಣೆಗೆ ಈ ಕ್ರಮ ಅನಿವಾರ್ಯ ಎಂದು ಸರ್ಕಾರವೇ ಹೇಳಿತ್ತು. 43 ಸಾವಿರ ಹೆಕ್ಟೇರ್ ಶರಾವತಿ ಅಭಯಾರಣ್ಯವನ್ನು 93 ಸಾವಿರ ಹೆಕ್ಟೇರ್‌ಗೆ ವಿಸ್ತರಿಸಲಾಗಿತ್ತು. ಹೀಗಿರುವಾಗ ಅಭಯಾರಣ್ಯ ವ್ಯಾಪ್ತಿಯಲ್ಲಿ ಎರಡು ಸಾವಿರ ಮೆಗಾವಾಟ್ ಸಾಮರ್ಥ್ಯದ ಪಂಪ್ ಸ್ಟೋರೇಜ್ ಪ್ರಾಜೆಕ್ಟ್ ಏಕೆ ಎಂದು ಪರಿಸರಾಸಕ್ತರು ಪ್ರಶ್ನಿಸಿದ್ದರು. 2017ರಲ್ಲಿ ಯೋಜನೆ ಘೋಷಣೆ ಆದಾಗಲೂ ವ್ಯಾಪಕ ವಿರೋಧ ವ್ಯಕ್ತವಾಗಿ, ಪರಿಸರ ಪ್ರೇಮಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಯೋಜನೆಯಿಂದ ಸುಮಾರು 2 ಲಕ್ಷ ಮರ ಹಾಗೂ 10 ಲಕ್ಷ ಗಿಡಗಳು ನಾಶವಾಗಲಿವೆ. ಕಸ್ತೂರಿ ರಂಗನ್ ವರದಿ ಪ್ರಕಾರ ಪಶ್ಚಿಮಘಟ್ಟದ ತಪ್ಪಲಲ್ಲಿರುವ ಶರಾವತಿ ಕಣಿವೆ ಪರಿಸರ ಸೂಕ್ಷ್ಮ ವಲಯವಾಗಿದೆ. ಹೀಗಾಗಿ, ಇಲ್ಲಿ ಯೋಜನೆ ಜಾರಿ ಮಾಡಿದರೆ ಅಪಾಯ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದರು. ಇದರಿಂದ ಯೋಜನೆಗೆ ತಾತ್ಕಾಲಿಕ ಹಿನ್ನಡೆಯಾಗಿತ್ತು.
ಕಾನೂನು ಹೋರಾಟದಲ್ಲಿ ಸರ್ಕಾರಕ್ಕೆ ಜಯ:
ಬಳ್ಳಾರಿಯ ಪರಿಸರಾಸಕ್ತ ಸಂತೋಷ್ ಮಾರ್ಟಿನ್ ಮತ್ತು ಬೆಂಗಳೂರಿನ ಯುನೈಟೆಡ್ ಕನ್ಸರ್ವೇಶನ್ ಮೂವ್‌ಮೆಂಟ್ ಸಂಘಟನೆ ಶರಾವತಿ ಪಂಪ್ ಸ್ಟೋರೇಜ್ ಪ್ರಾಜೆಕ್ಟ್ ವಿರುದ್ಧ ಹೈಕೋರ್ಟ್‌ನಲ್ಲಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ಲಿಂಗನಮಕ್ಕಿ ಅಣೆಕಟ್ಟೆಯಿಂದ ವಿದ್ಯುತ್ ಉತ್ಪಾದನೆ ಬಳಿಕ ಪುನಃ ನದಿಗೆ ಸೇರುತ್ತಿರುವ ನೀರನ್ನು ಮೇಲೆತ್ತಿ ವಿದ್ಯುತ್ ಉತ್ಪಾದಿಸಲು ಕೆಪಿಸಿ ಯೋಜಿಸಿದೆ. ಇದಕ್ಕೆ ಕರ್ನಾಟಕ ಸರ್ಕಾರ ಅನುಮತಿಯನ್ನೂ ನೀಡಿದೆ. ಆದರೆ, ಯೋಜನೆ ಕೈಗೆತ್ತಿಕೊಳ್ಳುತ್ತಿರುವ ಪ್ರದೇಶ ಶರಾವತಿ ವನ್ಯಜೀವಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. 2020ರಲ್ಲಿ ನ್ಯಾಯಾಲಯ ಸರ್ವೇಗೆ ತಡೆಯಾಜ್ಞೆ ನೀಡಿತ್ತು. ಅನಂತರ ನಡೆದ ಕಾನೂನು ಹೋರಾಟದಲ್ಲಿ ಸರ್ಕಾರಕ್ಕೆ ಜಯ ಸಿಕ್ಕಿದ್ದು, ಇದೀಗ ಯೋಜನೆಯು ಟೆಂಡರ್‌ಗೆ ತೆರೆದುಕೊಂಡಿದೆ.
- - - ಬಾಕ್ಸ್-1 2000 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಪ್ರಸ್ತುತ ವಾರಾಹಿ ಜಲವಿದ್ಯುತ್ ಯೋಜನೆ ಮೂಲಕ ನಾಲ್ಕು ಘಟಕಗಳಲ್ಲಿ 460 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದೀಗ ಎರಡನೇ ಭೂಗರ್ಭ ಯೋಜನೆಯಾಗಿ ಶರಾವತಿ ಪಂಪ್ ಸ್ಟೋರೇಜ್ ಪ್ರಾಜೆಕ್ಟ್ ಸಿದ್ಧವಾಗುತ್ತಿದೆ. ಇದರಿಂದ ಎರಡು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲು ನಿರ್ಧರಿಸಲಾಗಿದೆ. ಶರಾವತಿ ಪಂಪ್ ಸ್ಟೋರೇಜ್ ಪ್ರಾಜೆಕ್ಟ್‌ಗೆ 2017ರಲ್ಲಿ ₹4.800 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಈಗ ಯೋಜನೆಯ ಗಾತ್ರ ₹8.500 ಕೋಟಿಗೆ ಏರಿಕೆಯಾಗಿದೆ. ಆದರೂ, ಹಿಂದೇಟು ಹಾಕದ ಕೆಪಿಸಿ ರಾಜ್ಯದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಎಸ್‌ವಿಪಿ (ಶರಾವತಿ ಕಣಿವೆ ಪ್ರಾಜೆಕ್ಟ್) ಸಾಲಿಗೆ ಸೇರ್ಪಡೆ ಮಾಡಲು ಕೆಪಿಸಿ ಮುಂದಾಗಿದೆ.
- - - ಬಾಕ್ಸ್-2 ವಿದ್ಯುತ್ ಕ್ಷಮತೆ ಹೆಚ್ಚಿಸಲು ಪ್ಲಾನ್ ಇತ್ತೀಚಿನ ವರ್ಷಗಳಲ್ಲಿ ಮಳೆ ಕಡಿಮೆಯಾಗಿ ಲಿಂಗನಮಕ್ಕಿ ಜಲಾಶಯ ಭರ್ತಿ ಆಗುವುದೇ ಅಪರೂಪವಾಗಿದೆ. ಈ ಹಿನ್ನೆಲೆ ನೀರನ್ನು ಮರುಬಳಕೆ ಮಾಡುವುದರೊಂದಿಗೆ ಇಂಧನ ಕ್ಷಮತೆ ಹೆಚ್ಚಿಸಿಕೊಳ್ಳುವುದಕ್ಕೆ ಈ ಯೋಜನೆ ಅನುಕೂಲವಾಗಲಿದೆ.
ಪ್ರಸ್ತುತ ಮಧ್ಯಪ್ರದೇಶ, ಪಂಜಾಬ್ ರಾಜ್ಯಗಳಿಂದ ವಿದ್ಯುತ್ ಆಮದು ಮಾಡಿಕೊಳ್ಳಲಾಗುತ್ತಿದೆ. ಹಿಮಾಚಲ ಪ್ರದೇಶದಿಂದ ವಿದ್ಯುತ್ ಖರೀದಿಸಲಾಗುತ್ತಿದೆ. ಪ್ರಸಕ್ತ ಮುಂಗಾರು ಕೈಕೊಟ್ಟ ಹಿನ್ನೆಲೆ ವಿದ್ಯುತ್ ಉತ್ಪಾದನೆಯಲ್ಲಿ ಕುಂಠಿತಗೊಂಡಿದೆ. ಸ್ಥಳೀಯವಾಗಿ ನೀರನ್ನು ಮರುಬಳಕೆ ಮಾಡುವುದರೊಂದಿಗೆ ಇಂಧನ ಉತ್ಪಾದಿಸುವುದು ಈ ಯೋಜನೆ ಉದ್ದೇಶ ಎನ್ನುವುದು ಕೆಪಿಸಿ ಅಧಿಕಾರಿಗಳ ಅಭಿಪ್ರಾಯ.
- - -
-4ಎಸ್ಎಂಜಿಕೆಪಿ04: ಶರಾವತಿ ಪಂಪ್ ಸ್ಟೋರೇಜ್ ಪ್ರಾಜೆಕ್ಟ್‌ಗೆ ನೀರು ಪೂರೈಸಲಿರುವ ತಲಕಳಲೆ ಡ್ಯಾಂ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.