ಆಡಳಿತ ವ್ಯವಸ್ಥೆಯಲ್ಲಿ ನಡೆಯುವ ಲೋಪದೋಷಗಳ ನಿಯಂತ್ರಣ ಹಾಗೂ ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಮಾಹಿತಿ ಹಕ್ಕು ಕಾಯ್ದೆ ಸಹಾಯಕಾರಿಯಾಗಿದೆ.
ಕನ್ನಡಪ್ರಭ ವಾರ್ತೆ ಕುಮಟಾ
ಆಡಳಿತ ವ್ಯವಸ್ಥೆಯಲ್ಲಿ ನಡೆಯುವ ಲೋಪದೋಷಗಳ ನಿಯಂತ್ರಣ ಹಾಗೂ ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಮಾಹಿತಿ ಹಕ್ಕು ಕಾಯ್ದೆ ಸಹಾಯಕಾರಿಯಾಗಿದೆ. ಪ್ರತಿಯೊಬ್ಬರೂ ಮಾಹಿತಿ ಹಕ್ಕಿನ ಬಗ್ಗೆ ಅರಿತುಕೊಂಡು ತಮ್ಮ ಸಂವಿಧನಾಬದ್ಧ ಹಕ್ಕು ಚಲಾಯಿಸುವುದಕ್ಕೆ ಸದಾ ಸಿದ್ಧರಿರಬೇಕು ಎಂದು ಬಾಡದ ಹಿರೇಹೊಸಬ ಮಂದಿರದ ಅರ್ಚಕ ಪವನ ಗುನಗಾ ಹೇಳಿದರು.ಇಲ್ಲಿನ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ಜಿಲ್ಲಾ ಹಾಗೂ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿದರು.ಮುಖ್ಯಅತಿಥಿ ಡಾ. ರವಿರಾಜ ಕಡ್ಲೆ ಮಾತನಾಡಿ, ಒಳ್ಳೆಯ ಕೆಲಸ ಮಾಡುವಾಗ ಮಾತ್ರ ಸಮಸ್ಯೆ ಎದುರಾಗುವುದು ಸಹಜ. ಆ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬೇಕು. ಮಾಹಿತಿ ಹಕ್ಕಿನ ದುರುಪಯೋಗವಾಗದೇ ಸಮಾಜದ ಹಿತಕ್ಕಾಗಿ ಸದಾ ಕಾರ್ಯ ನಿರ್ವಹಿಸಬೇಕು ಎಂದರು.ಕರಾವಳಿ ಕನ್ನಡ ಸಂಘದ ಭಾಸ್ಕರ ಪಟಗಾರ ಮಾತನಾಡಿ, ಸಮಾಜದಲ್ಲಿ ಅಥವಾ ಆಡಳಿತ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು, ಅನ್ಯಾಯವನ್ನು ಧೈರ್ಯವಾಗಿ ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಮನೋಭಾವ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ತೆರಿಗೆ ಹಣದ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು. ಸ್ವಾರ್ಥ ರಹಿತವಾಗಿ ಸಮಾಜದ ಒಳಿತಿಗಾಗಿ ಶ್ರಮಿಸೋಣ ಎಂದರು. ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ಹನುಮಂತರಾಯ ಮತ್ತು ಆಶಾ ಮೂಡಗೇರಿ ಮಾತನಾಡಿ, ವ್ಯಕ್ತಿಗತ ಶ್ರಮಕ್ಕಿಂತ ಸಂಘಟಿತ ಪ್ರಯತ್ನಕ್ಕೆ ಹೆಚ್ಚು ಫಲವಿದೆ. ನ್ಯಾಯದ ಪರ ಹೋರಾಟಕ್ಕಾಗಿ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಆರಂಭವಾಗಿದೆ. ತಾಲೂಕು ಮಟ್ಟದಿಂದ ರಾಷ್ಟ್ರಮಟ್ಟದವರೆಗೂ ನಮ್ಮ ಸಂಘ ಕಾರ್ಯ ನಿರ್ವಹಿಸುತ್ತಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಮಾಹಿತಿ ಹಕ್ಕು ಸಹಾಯಕಾರಿ ಎಂದರು.ಜಿಲ್ಲಾಧ್ಯಕ್ಷ ಪ್ರಣವ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಜಿಲ್ಲಾಧ್ಯಕ್ಷೆ ಸವಿತಾ ಜಿ. ಮುಕ್ರಿ, ಸಂಘಟನಾ ಕಾರ್ಯದರ್ಶಿ ತಿಮ್ಮಪ್ಪ ಆರ್. ಮುಕ್ರಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಜೆ. ಮುಕ್ರಿ, ತಾಲೂಕಾಧ್ಯಕ್ಷ ರಮೇಶ ಉಪ್ಪಾರ, ಮಂಜುನಾಥ ಆರ್. ಮುಕ್ರಿ, ವಕೀಲ ಶಂಕರ ಹಳಕಾರ ಶಿರಸಿ, ಸಂತೋಷ ಮೂಡಗೇರಿ, ಅಶೋಕಗೌಡ ಪಾಟೀಲ್, ಇಂದಿರಾ ಮುಕ್ರಿ, ಹೇಮಲತಾ ಮುಕ್ರಿ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.