ಇಚ್ಛಾಶಕ್ತಿಯಿಂದ ಸಾಧನೆಯ ಶಿಖರಕ್ಕೆ ಏರಿ: ಇನ್‌ಸ್ಪೆಕ್ಟರ್ ಪ್ರಕಾಶ ಮಾಳೆ

KannadaprabhaNewsNetwork | Published : Feb 6, 2024 1:31 AM

ಸಾರಾಂಶ

ದೊಡ್ಡ ಗುರಿಯೆಡೆಗೆ ನಮ್ಮ ಲಕ್ಷ್ಯವಿರಬೇಕು. ನಾವು ಪರಿಶ್ರಮ, ಶ್ರದ್ಧೆಯಿಂದ ಕಾರ್ಯ ನಿರ್ವಹಿಸಬೇಕು. ಸಂಕಲ್ಪ ಶಕ್ತಿ ದೃಢವಾಗಿರಬೇಕು.

ಗಂಗಾವತಿ: ಇಚ್ಛಾಶಕ್ತಿ ಇದ್ದರೆ ಸಾಧನೆಯ ಶಿಖರಕ್ಕೆ ಏರಬಹುದು ಎಂದು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪ್ರಕಾಶ ಮಾಳೆ ಹೇಳಿದರು.ಸಮುತ್ಕರ್ಷ ಐಎಎಸ್ ಅಕಾಡೆಮಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಸದಾ ಗುರಿಯ ಕುರಿತಾಗಿ ಧ್ಯಾನಿಸಬೇಕು. ದೊಡ್ಡ ಗುರಿಯೆಡೆಗೆ ನಮ್ಮ ಲಕ್ಷ್ಯವಿರಬೇಕು. ನಾವು ಪರಿಶ್ರಮ, ಶ್ರದ್ಧೆಯಿಂದ ಕಾರ್ಯ ನಿರ್ವಹಿಸಬೇಕು. ಸಂಕಲ್ಪ ಶಕ್ತಿ ದೃಢವಾಗಿರಬೇಕು. ಸದಾ ಅಧ್ಯಯನ ನಮ್ಮನ್ನು ಎತ್ತರಕ್ಕೆ ಒಯ್ಯುತ್ತದೆ. ನಾವು ಯಾವಾಗಲೂ ಗುಣಾತ್ಮಕ ಚಿಂತನೆಯಲ್ಲಿ ತೊಡಗಬೇಕು. ನಾವು ಪರಿಶ್ರಮ ಪಟ್ಟರೂ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಯಶಸ್ಸು ಅವಲಂಬಿಸಿರುತ್ತದೆ. ಇಚ್ಛಾಶಕ್ತಿ ಇದ್ದರೆ ಸಾಧನೆಯ ಬಾಗಿಲು ತೆರೆಯುತ್ತದೆ. ಆತ್ಮವಿಶ್ವಾಸ ಎಲ್ಲದಕ್ಕೂ ಪ್ರೇರಣೆ ಎಂದರು.ಇನ್ನೋರ್ವ ಅತಿಥಿಗಳಾದ ಕೊಪ್ಪಳ ಗವಿಸಿದ್ದೇಶ್ವರ ಕಾಲೇಜಿನ ಅರ್ಥಶಾಸ್ತ್ರದ ಉಪನ್ಯಾಸಕ ಪ್ರೊ.ಶರಣಬಸಪ್ಪ ಬಿಳಿಯಲೆ ಮಾತನಾಡಿ, ಇವತ್ತು ವಿದ್ಯಾರ್ಥಿಗಳು ಅತ್ಯುತ್ತಮ ಶಿಕ್ಷಣ ದೊರೆಯುತ್ತಿದೆ. ಆದರೆ ಸಾಕಷ್ಟು ಸವಾಲುಗಳು, ವಿದ್ಯಾರ್ಥಿಗಳು, ಪಾಲಕರು, ಕಾಲದ ವೇಗಕ್ಕೆ ತಕ್ಕಂತೆ ಓಡಬೇಕು. ಸ್ಪರ್ಧಾತ್ಮಕ ಓದು, ಪಠ್ಯದ ಓದು, ಹೀಗೆ ವಿಭಿನ್ನ ಅಧ್ಯಯನಕ್ಕೆ ತೊಡಗಬೇಕು ಎಂದರು.ಆಳವಾದ ಅರಿವಿನ ಜ್ಞಾನದ ದಾರಿ ನಮ್ಮದಾಗಬೇಕು. ಜ್ಞಾನ ಎಲ್ಲ ಕಾಲಕ್ಕೂ ಮುಖ್ಯ. ಇವತ್ತು ನಮ್ಮ ಮನಸ್ಸಿನಲ್ಲಿ ರಾಷ್ಟ್ರ ದೇವೋಭವ ಎನ್ನುವ ಧ್ಯೇಯ ತುಂಬಿಕೊಳ್ಳಬೇಕು. ರಾಷ್ಟ್ರದ ಅಭಿಮಾನ ದೊಳಗೆ ಮಾತೃ, ಪಿತೃ, ಗುರು, ಅತಿಥಿಗಳು ಅಡಕವಾಗಿದ್ದಾರೆ. ನಮ್ಮ ಗುರಿ ಬಲಿಷ್ಠ ರಾಷ್ಟ್ರ ನಿರ್ಮಾಣದ ಕಡೆಗೆ ಇರಬೇಕು ಎಂದರು.ರಾಷ್ಟ್ರ ನಿರ್ಮಾಣದಲ್ಲಿ ಐಎಎಸ್ ಅಧಿಕಾರಿಗಳ ಪಾತ್ರ ಮಹತ್ವದ್ದು. ಹೈಸ್ಕೂಲ್ ಮಟ್ಟದಲ್ಲಿಯೇ ಐಎಎಸ್ ಗುರಿಯ ಬಗ್ಗೆ ತಿಳುವಳಿಕೆ ನೀಡುವುದು ಮಹತ್ವದ ಕಾರ್ಯ ಎಂದು ಹೇಳಿದರು.ವೇದಿಕೆಯಲ್ಲಿ ರಾಘವೇಂದ್ರ ಸಿರಿಗೇರಿ, ಅನಿಲ್ ಕುಷ್ಟಗಿ, ಬದರಿನಾರಾಯಣ ಆದಾಪುರ ಉಪಸ್ಥಿತರಿದ್ದರು. ಪ್ರಾಸ್ತಾವಿಕ ನುಡಿ ಸಂತೋಷ ಕೆಲೋಜಿ, ಸ್ವಾಗತ ಗುಂಡೂರು ಪವನಕುಮಾರ್, ವೀರು ಕೊಟಗಿ ವಂದಿಸಿದರು. ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

Share this article