ಕನ್ನಡಪ್ರಭ ವಾರ್ತೆ ತುಮಕೂರು
ವಿದ್ಯೆಗೆ ಬೆಲೆಕಟ್ಟಿರುವ, ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿರುವ ಬಹುರಾಷ್ಟ್ರೀಯ ಕಂಪನಿಗಳ ಹುನ್ನಾರದಿಂದ ಕನ್ನಡಕ್ಕೆ ಅಪಾಯವಿದೆ ಎಂದು ಹಿರಿಯ ಬರಹಗಾರ ಪ್ರೊ. ಕೆ. ವೈ. ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸಿದರು.ವಿವಿ ಕಲಾ ಕಾಲೇಜು ಶನಿವಾರ ಆಯೋಜಿಸಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಸರ್ವರನ್ನೂ ಒಗ್ಗೂಡಿಸುವ ರಾಜ್ಯೋತ್ಸವ ನಿತ್ಯೋತ್ಸವ ಆಗಬೇಕು. ಕೊಡಗು, ಕಲ್ಯಾಣ ಕರ್ನಾಟಕ, ಕರಾವಳಿ ಪ್ರದೇಶ ಸ್ವತಂತ್ರ ರಾಜ್ಯ ಕೇಳುತ್ತಿವೆ. ಇವೆಲ್ಲ ಪ್ರದೇಶಗಳು ಒಗ್ಗಟ್ಟಾಗಿ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕು. ಕನ್ನಡ ಭಾಷೆ ಎಂಬುದು ಬದುಕುವುದನ್ನು ಕಲಿಸುವ ಜೀವನ ದೃಷ್ಟಿ ಎಂದು ತಿಳಿಸಿದರು.ಕನ್ನಡದಲ್ಲಿ ತಂತ್ರಜ್ಞಾನ ಉಪಯೋಗಿಸಿ, ಅದನ್ನು ಬಳಸುವಂತೆ ಮಾಡುವ ಜವಾಬ್ದಾರಿ ನಮ್ಮದಾಗಬೇಕು. ಕರ್ನಾಟಕ ನಾಡಿನ ಶ್ರೇಷ್ಠ ಮಹನೀಯರ ಪರಿಚಯವನ್ನು ಇತರೆ ರಾಜ್ಯದವರಿಗೆ ಮಾಡಿಕೊಡಬೇಕು. ಅವರೂ ಕನ್ನಡದಲ್ಲಿಯೇ ವ್ಯವಹರಿಸುವಂತಾಗಬೇಕು ಎಂದರು.
ಧ್ವಜಾರೋಹಣ ನೆರೆವೇರಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಲಸಚಿವೆ ನಾಹಿದಾ ಜಮ್ ಜಮ್, ಜಾತಿ, ಧರ್ಮ ಎಲ್ಲವನ್ನೂ ಒಗ್ಗೂಡಿಸುವುದು ಕನ್ನಡ. ಕನ್ನಡವೆಂದರೆ ಉತ್ಕೃಷ್ಟ ಭಾವನೆ. ಇತರೆ ರಾಜ್ಯಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ಭಾಷೆ ಕಲಿಯುತ್ತೇವೆ. ಹೊರ ರಾಜ್ಯಗಳಿಂದ ನಮ್ಮಲ್ಲಿಗೆ ಬಂದು ಕನ್ನಡ ಕಲಿಯಲು ಹಿಂಜರಿಯುವ ಮಂದಿಗೆ ಪ್ರೀತಿಯಿಂದ ಕನ್ನಡ ಹೇಳಿಕೊಡಬೇಕಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಇಂದು ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕ್ಷೀಣಿಸಿದೆ. ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಇಂದು ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಖಾಸಗಿ ಶಾಲೆಗಳು ಬಡ ರೈತರನ್ನು, ಕಾರ್ಮಿಕರನ್ನು ಸುಲಿಗೆ ಮಾಡುತ್ತಿವೆ. ಕನ್ನಡ ಶಾಲೆಗಳು ಉಳಿದರೆ ಕನ್ನಡ ಭಾಷೆ ಶಾಶ್ವತವಾಗಿ ಬೆಳಗಲಿದೆ ಎಂದರು.
ಕನ್ನಡ ಶಾಲೆಯಲ್ಲಿ ಓದಿ, ವಿಶ್ವದ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಜಿಲ್ಲೆಯ ವಿಜ್ಞಾನಿಗಳಾದ ವಿವಿ ಸಾವಯವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಡಿ. ಸುರೇಶ್, ಶ್ರೀ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಜಿ. ನಾಗರಾಜ್ ಅವರನ್ನು ಗೌರವಿಸಿಸಲಾಯಿತು.ವಿವಿ ಕಲಾ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಘಟಕದ ಸಂಚಾಲಕ ಡಾ. ರವಿ ಸಿ. ಎಂ ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕ ಶಿವಣ್ಣ ಬೆಳವಾಡಿ ನಿರೂಪಿಸಿದರು.