ಶಿರಸಿ:
ನಗರದ ಮಾರಿಕಾಂಬಾ ದೇವಿ ಜಾತ್ರೆಯ ವಿಧಿ-ವಿಧಾನಗಳು ಬುಧವಾರ ಆರಂಭಗೊಂಡಿವೆ. ಮೊದಲ ಕಾರ‍್ಯಕ್ರಮವಾಗಿ ದೇವಾಲಯದಲ್ಲಿ ದೇವಿಯ ಪ್ರತಿಷ್ಠಾ ಮಂಟಪ ಕಳಚುವ ಕಾರ‍್ಯಕ್ರಮ ಬುಧವಾರ ಮಧ್ಯಾಹ್ನ ನಡೆಯಿತು.ರಾಜ್ಯದಲ್ಲಿಯೇ ಅತಿದೊಡ್ಡ ಜಾತ್ರೆ ಎಂದು ಗುರುತಿಸಿಕೊಂಡಿರುವ ಮಾರಿಕಾಂಬಾ ಜಾತ್ರೆಯ ಈ ಮೊದಲ ಕಾರ‍್ಯಕ್ರಮದಲ್ಲಿ ಭಕ್ತರು ಉತ್ಸಾಹದೊಂದಿಗೆ ಪಾಲ್ಗೊಂಡರು. ದೇವಾಲಯದ ಅಧ್ಯಕ್ಷ ರವಿ ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ್ ಹಾಗೂ ಧರ್ಮದರ್ಶಿಗಳು, ಬಾಬುದಾರ ಮುಖ್ಯಸ್ಥ ಜಗದೀಶ ಗೌಡರ್ ಅವರ ಸಮ್ಮುಖದಲ್ಲಿ ಬೆಳಗಿನಿಂದಲೇ ಮಂಟಪ ಕಳಚುವ ಕಾರ‍್ಯಕ್ರಮ ಆರಂಭವಾಯಿತು.
ಮಧ್ಯಾಹ್ನ ೧೧.೨೧ಕ್ಕೆ ನಿಗದಿಗೊಂಡ ಸಮಯದಲ್ಲಿ ಪ್ರತಿಷ್ಠಾ ಮಂಟಪ ಕಳಚಲಾಯಿತು. ಬಳಿಕ ದೇವಾಲಯದ ಸಮೀಪವೇ ಇರುವ ದೇವಾಲಯಕ್ಕೆ ತೆರಳಿದ ಭಕ್ತರು, ಕಾರ್ಯಕರ್ತರು ಸಂಪ್ರದಾಯದಂತೆ ಅಲ್ಲಿಯೂ ಪ್ರತಿಷ್ಠಾ ಮಂಟಪ ಕಳಚಿದರು. ಮಾರಿಕಾಂಬಾ ದೇವಿಗೆ ಪ್ರತಿದಿನ ಬೆಳಗ್ಗೆ ೮ ಗಂಟೆಗೆ ಮಹಾಪೂಜೆ ನಡೆಸಲಾಗುತ್ತಿತ್ತಾದರೂ ಈ ಕಾರ‍್ಯಕ್ರಮಗಳು ಇದ್ದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ೨ ಗಂಟೆಗೆ ನಡೆಸಲಾಯಿತು. ಮಹಾಪೂಜೆ ನಡೆಯುವ ವರೆಗೂ ದೇವಿಯ ದರ್ಶನಕ್ಕೆ ಅವಕಾಶ ಇರಲಿಲ್ಲ. ಅಲ್ಲದೇ ದೇವಾಲಯದಲ್ಲಿ ಪ್ರತಿ ನಿತ್ಯ ನಡೆಯುವ ಅನ್ನ ಸಂತರ್ಪಣೆಯನ್ನೂ ಬುಧವಾರ ಸ್ಥಗಿತಗೊಳಿಸಲಾಗಿತ್ತು. ಮಾ. ೧೯ರಿಂದ ೨೭ರ ವರೆಗೆ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ. ಇದರ ಅಂಗವಾಗಿ ಮೊದಲನೇ ಹೊರಬೀಡು ಫೆ. ೨೭ರಂದು, ಎರಡನೇ ಹೊರಬೀಡು ಮಾ. ೧ರಂದು, ಮೂರನೇ ಹೊರಬೀಡು ಮಾ. ೫ರಂದು, ನಾಲ್ಕನೇ ಹೊರಬೀಡು ಮತ್ತು ರಥ ನಿರ‍್ಮಾಣಕ್ಕಾಗಿ ಮರ ಪೂಜೆ ಮಾ. ೮ರಂದು ನಡೆಯಲಿದೆ. ಮಾ. ೧೨ರಂದು ಅಂಕೆಯ ಹೊರಬೀಡು ನಡೆಯಲಿದ್ದು, ಅಂದೇ ಮರವನ್ನು ದೇವಾಲಯಕ್ಕೆ ತರಲಾಗುತ್ತದೆ. ದೇವಿಯ ವಿಗ್ರಹ ವಿಸರ್ಜನೆ ಹಾಗೂ ಅಂಕೆ ಹಾಕುವಿಕೆ ಮಾ. ೧೩ರಂದು ನಡೆಯಲಿದೆ.ಮಾ. ೧೯ರಂದು ಜಾತ್ರಾ ಕಲ್ಯಾಣ ಪ್ರತಿಷ್ಠೆಯೊಂದಿಗೆ ಜಾತ್ರೆಯ ಮೆರಗು ತೆರೆದುಕೊಳ್ಳಲಿದೆ. ಮಾ. ೨೦ರಂದು ಶೋಭಾಯಾತ್ರೆಯೊಂದಿಗೆ ಬಿಡ್ಕಿ ಬಯಲಿನ ಜಾತ್ರಾ ಗದ್ದುಗೆಗೆ ಬರಲಿರುವ ಮಾರಿಕಾಂಬೆ ಮಾ. ೨೧ರಿಂದ ಭಕ್ತರನ್ನು ಹರಸಲಿದ್ದಾಳೆ.