ರಸ್ತೆ ಅಪಘಾತ: ಗೀತಾ ಶಿವರಾಜ್‌ ಕುಮಾರ್‌ ನೆರವು

KannadaprabhaNewsNetwork |  
Published : Jul 09, 2024, 12:49 AM IST
ಪೋಟೋ: 8ಎಚ್‌ಎಚ್‌ಆರ್‌05ಹಾವೇರಿಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಎಮ್ಮೆಹಟ್ಟಿಯ 13 ಜನ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಸೋಮವಾರ ಎಮ್ಮೆಹಟ್ಟಿಗೆ ಭೇಟಿ ನೀಡಿದ ಗೀತಾ ಶಿವರಾಜ್ ಕುಮಾರ್ ದಂಪತಿಗಳು ಮೃತ ಕುಟುಂಬಗಳಿಗೆ ಸಾಂತ್ವಾನ ಹೇಳಿದರು. | Kannada Prabha

ಸಾರಾಂಶ

ಹಾವೇರಿಯ ಬ್ಯಾಡಗಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಎಮ್ಮೆಹಟ್ಟಿಯ 13 ಜನ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಸೋಮವಾರ ಎಮ್ಮೆಹಟ್ಟಿಗೆ ಭೇಟಿ ನೀಡಿದ ಗೀತಾ ಶಿವರಾಜ್ ಕುಮಾರ್ ದಂಪತಿಗಳು ಮೃತ ಕುಟುಂಬಗಳಿಗೆ ಸಾಂತ್ವಾನ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಕಳೆದ ಜೂ.28ರಂದು ಹಾವೇರಿ ಬ್ಯಾಡಗಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಎಮ್ಮೆಹಟ್ಟಿ 13 ಜನ ಮೃತಪಟ್ಟಿದ್ದ ಹಿನ್ನೆಲೆ ಸೋಮವಾರ ಎಮ್ಮೆಹಟ್ಟಿಗೆ ಭೇಟಿ ನೀಡಿದ ಗೀತಾ ಶಿವರಾಜ್ ಕುಮಾರ್ ದಂಪತಿಗಳು ಮೃತ ಕುಟುಂಬಗಳಿಗೆ ಸಾಂತ್ವಾನ ಹೇಳಿ ವೈಯಕ್ತಿಕ ನೆರವು ನೀಡಿದರು.

ಮೃತರಾದ 13 ಜನರಿಗೆ ತಲಾ ಒಂದು ಲಕ್ಷ ರು. ಹಾಗೂ ನಾಲ್ಕು ಜನ ಗಾಯಾಳುಗಳಿಗೆ 1.50 ಲಕ್ಷ ರು. ವೈಯಕ್ತಿಕ ನೆರವು ನೀಡಿದರು.

ಬಳಿಕ ಮಾತನಾಡಿದ ಲೋಕಸಭಾ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ಮೃತರ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಮೃತ ಕುಟುಂಬಗಳ ನೋವಿಗೆ ಸ್ಪಂದಿಸಲು ಸದಾ ಸಿದ್ದರಿದ್ದೇವೆ ಎಂದು ತಿಳಿಸಿದರು.

ಈ ಘಟನೆ ನಮ್ಮಗೆ ಜೀರ್ಣಿಸಲಾಗುವುದಿಲ್ಲ. ಭಗವಂತ ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಈ ಎಮ್ಮೆಹಟ್ಟಿ ಗ್ರಾಮಸ್ಥರು ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ. ಕುಟುಂಬದ ಉಳಿದ ಸದಸ್ಯರಿಗೆ ಧೈರ್ಯ ತುಂಬಿದ್ದಾರೆ. ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ. ಮುಂದೆ ಕೂಡ ನೆರವು ನೀಡುತ್ತೇವೆ. ಹೋದ ಜೀವಗಳ ನಷ್ಟ ನಾವು ತುಂಬಿಕೊಡಲಾಗುವುದಿಲ್ಲ. ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ. ಮುಂದೆಯೂ ಮೃತ ಕುಟುಂಬದವರ ಬಗ್ಗೆ ಮಾಹಿತಿ ಪಡೆಯುತ್ತಿರುವಂತೆ ಜಿಲ್ಲಾಧ್ಯಕ್ಷರಾದ ಪ್ರಸನ್ನಕುಮಾರ್ ಅವರಿಗೂ ಹೇಳಿದ್ದೇವೆ ಎಂದರು.

ಶಿವರಾಜ್‍ಕುಮಾರ್ ಮಾತನಾಡಿ, ಇಂತಹ ಸಂದರ್ಭದಲ್ಲಿ ಎಲ್ಲರೂ ಸಹಾಯ ಮಾಡಬಹುದು. ಆದರೆ ಸಮಧಾನ ಮಾಡುವುದು ಕಷ್ಟ. ಈ ದುರ್ಘಟನೆ ನೆನಪು ಸದಾ ಕಾಡುತ್ತಿರುತ್ತದೆ. ಅದನ್ನು ಗೆಲ್ಲುವ ಶಕ್ತಿ ದೇವರು ಕೊಡಲಿ, ನೋಡಿ ಬಹಳ ದುಃಖವಾಯಿತು. ಕುಟುಂಬದ ಮಕ್ಕಳಿಗೆ ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆ ಕೂಡ ನೆರವು ನೀಡುವ ಭರವಸೆ ನೀಡುತ್ತಿದ್ದೇನೆ ಎಂದರು.

ಅಪಘಾತದಲ್ಲಿ ಎಮ್ಮೆಹಟ್ಟಿ ಗ್ರಾಮದ ಐಎಎಸ್ ತಯಾರಿ ನಡೆಸುತ್ತಿದ್ದ, ರಾಷ್ಟ್ರೀಯ ಕ್ರೀಡಾಪಟು, ಮಾನಸ, ಮತ್ತು ತಾಯಿ ಭಾಗ್ಯಮ್ಮ, ನಾಗೇಶಪ್ಪ, ಮೀನಾಕ್ಷಮ್ಮ, ಮಗ ಆದರ್ಶ ಹಾಗೂ ತಾಯಿ ಸುಭದ್ರಮ್ಮ ಅವರನ್ನ ಕಳೆದುಕೊಂಡು ಗ್ರಾಮ ಸ್ಮಶಾನ ಮೌನಕ್ಕೆ ಜಾರಿತ್ತು. ಇವರ ಮನೆ ಪರಿಸ್ಥಿತಿ ಗಂಭೀರವಾಗಿದೆ. ಫುಟ್ ಬಾಲ್ ಪ್ಲೇಯರ್ ಆಗಿದ್ದ ಮಾನಸ ಅಂಧಳಾಗಿದ್ದಳು. ಏಷಿಯನ್ ಕಪ್‍ಗಾಗಿ ಕೊಚ್ಚಿಯಲ್ಲಿ ಫುಟ್ ಬಾಲ್ ಆಡಿದ್ದಾಳೆ. ಜಪಾನ್ ವಿರುದ್ಧ ಆಡಿದ್ದಾಳೆ ಎಂದು ಮಾನಸಾಳ ಕುಟುಂಬ ನೋವುನ್ನು ವ್ಯಕ್ತಪಡಿಸಿದೆ.

ಸ್ಪೋರ್ಟ್ಸ್‌ ಅಸೋಸಿಯೇಷನ್ ಬಂದು ಮಾತನಾಡಿದರೂ ಫುಟ್ಬಾಲ್ ಫೆಡರೇಷನ್ ಒಬ್ಬರೂ ಬಂದಿಲ್ಲ. ಆದರೆ ಅವರ ನಿಧನದ ಬಗ್ಗೆ ಯಾವ ಸಂಘಟನೆಯವರು ಶ್ರದ್ಧಾಂಜಲಿ ಸಲ್ಲಿಸದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿದ್ದ ಮಾನಸರನ್ನ ದೇವಸ್ಥಾನಕ್ಕೆ ಹೋಗಲು ಕುಟುಂಬಸ್ಥರು ಕರೆಸಿದ್ದರು. ಏಷಿಯನ್ ಪುಟ್ ಬಾಲ್‍ನಲ್ಲಿ ಭಾಗಿಯಾಗಿದ್ದ ಮಾನಸಳ ಸಾವಿನ ಸಮಯದಲ್ಲಿ ಕ್ರೀಡಾಪಟುವಾಗಿ ಸಂದಬೇಕಿದ್ದ ಗೌರವ ದೊರೆತಿಲ್ಲ ಎಂದು ಅವರ ಕುಟುಂಬ ಆರೋಪಿಸಿದೆ.

ಮಾನಸಾಳ ಕಥೆ ಒಂದು ಕಡೆಯಾದರೆ, ಗಾಯಗೊಂಡಿದ್ದ ಅರ್ಪಿತಳ ತಂದೆ ನಾಗೇಶ್ ರಾವ್, ವಿಶಾಲಾಕ್ಷಮ್ಮ ಆದರ್ಶ್, ಅಜ್ಜಿ ಸುಭದ್ರಮ್ಮ ಅಪಘಾತ ನಡೆದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಂಗವಿಕಲೆಯಾದ ಅರ್ಪಿತಾಳರನ್ನ ದೊಡ್ಡಮ್ಮ ಮತ್ತು ಚಿಕ್ಕಮ್ಮರು ನೋಡಿಕೊಳ್ತಿದ್ದಾರೆ. ಆದರೆ ಅಪಘಾತದಲ್ಲಿ ಮೃತರಾದ ಮನೆಯವರ ಬಗ್ಗೆ ಅರ್ಪಿತಾಳಿಗೆ ಇನ್ನೂ ತಿಳಿಸಿಲ್ಲ. ಸದ್ಯಕ್ಕೆ ಡಿಸ್ಚಾರ್ಜ್ ಆಗಿ ಎಮ್ಮೆಹಟ್ಟಿ ಮನೆಗೆ ಬಂದಿದ್ದಾರೆ. ಮನೆಯಲ್ಲಿ ನೀರಸ ಮೌನಕಾಡಿದೆ. ಆದರೆ ಅರ್ಪಿತಾಳ ಮನದಲ್ಲಿ ತಂದೆ ತಾಯಿ ಇನ್ನೂ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ ಎಂಬ ಭಾವನೆ ಇದೆ.

ಆದರೆ ಇಂದು ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ₹65 ಸಾವಿರ ನೀಡಿದೆ. ಈ ಹಿಂದೆ ನಟ ಶಿವರಾಜ್ ಕುಮಾರ್ ದಂಪತಿ ಘೋಷಿಸಿದಂತೆ ಮೃತರಿಗೆ ತಲಾ ಒಂದು ಲಕ್ಷ ರು. ಹಣವನ್ನೇ ನೀಡಿದರು. 13 ಜನರು ಅಪಘಾತದಲ್ಲಿ ಮೃತರಾಗಿದ್ದು 13 ಲಕ್ಷದ ರು. ನೆರವು ನೀಡಲಾಯಿತು. ಈ ಹಣವನ್ನ ಮೃತ ವಿಶಾಲಾಕ್ಷಿ ನಾಗೇಶ್ ಕುಟುಂಬರಿಗೆ ನೀಡಲಾಯಿತು.

ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಘೋಷಿಸಲಾಗಿತ್ತು. ಅದರಲ್ಲಿ ಇಬ್ವರು ಗುಣಮುಖರಾದರೂ ಇನ್ನಿಬ್ಬರ ಪರಿಸ್ಥಿತಿ ಗಂಭೀರವಾಗಿಯೇ ಇದೆ. ಈ ವೇಳೆ ಭದ್ರಾವತಿ ಶಾಸಕ ಸಂಗಮೇಶ್ವರ್ ಕೂಡ ತಲಾ ₹50 ಸಾವಿರ ನೆರವು ನೀಡಿ, ಶಿವರಾಜ್‍ಕುಮಾರ್ ದಂಪತಿಗೆ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಮೃತರಾದ ಅರುಣ್ ಪತ್ನಿ ರೇಣುಕಾ ಮಾತನಾಡಿ, ನನ್ನ ಪತಿಯೇ ನನಗೆ ಆಶ್ರಯವಾಗಿದ್ದರು. ನಾನು 3 ತಿಂಗಳ ಬಾಣಂತಿ, ನನ್ನ ಮಗುವಿನ ಭವಿಷ್ಯಕ್ಕೆ ನನಗೆ ಉದ್ಯೋಗ ಬೇಕಾಗಿದೆ. ಹಿಂದೆ ಕೂಡ ನಾನು ನನಗೆ ಉದ್ಯೋಗ ಕೊಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆ. ಸಚಿವ ಮಧುಬಂಗಾರಪ್ಪ ಮತ್ತು ಇದೀಗ ಗೀತಾ ಶಿವರಾಜ್‍ಕುಮಾರ್ ಅವರು ಕೂಡ ಭರವಸೆ ನೀಡಿದ್ದಾರೆ. ಮುಂದಿನ ಭವಿಷ್ಯಕ್ಕೂ ಸಹಕಾರ ನೀಡುವುದಾಗಿ ಅವರ ವೈಯುಕ್ತಿಕ ದೂರವಾಣಿ ನಂಬರ್‌ ಕೂಡ ನೀಡಿದ್ದು, ಯಾವುದೇ ಸಂದರ್ಭದಲ್ಲೂ ಕೂಡ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಎಮ್ಮೆಹಟ್ಟಿ ಗ್ರಾಮದ ಮುಖಂಡರು ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಂತು, ಜಿ.ಡಿ.ಮಂಜುನಾಥ್ ಮತ್ತಿತರರಿದ್ದರು.

ನಟ ಶಿವರಾಜ್ ಕುಮಾರ್ ಕಣ್ಣಿರು

ಬಾಣಂತಿ ರೇಣುಕಾ ಅವರಿಗೆ ಸಾಂತ್ವಾನ ಹೇಳುವಾಗ ನಟ ಶಿವರಾಜ್ ಕುಮಾರ್ ಕಣ್ಣಿರು ಸುರಿಸಿದರು. ಪಕ್ಕದಲ್ಲೆ ಕುಳಿತಿದ ಗೀತಾ ಶಿವರಾಜ್ ಕುಮಾರ್ ಬಾಣಂತಿ ರೇಣುಕಾಳ ಕೈ ಹಿಡಿದು ಸಮಾದಾನ ಮಾಡಿ ಯಾವುದೇ ಸಮಯದಲ್ಲೂ ನಮ್ಮನ್ನು ಸಂಪರ್ಕಿಸಿ ನೆರವು ನೀಡುವುದಾಗಿ ಹೇಳಿ ತಲೆ ಸವರಿ ಮೊಬೈಲ್ ನಂಬರ್ ನೀಡಿದರು. ಎಮ್ಮೆಹಟ್ಟಿ ಬಿಟ್ಟು ತೆರಳಿದ ಕೆಲ ಸಮಯದ ನಂತರ ರೇಣುಕಾಳಿಗೆ ವಾಟ್ಸಪ್‍ನಲ್ಲಿ ಸಂದೇಶ ಕಳಿಸಿ ಧೈರ್ಯ ತುಂಬಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಪ್ರದಾಯ ತಿರಸ್ಕರಿಸದಿದ್ರೆ ಪ್ರಗತಿಶೀಲತೆ ಪ್ರಬಲವಾಗದು
ಸೋಮಾರಿಗಳಾಗದೆ ಕ್ರಿಯಾಶೀಲರಾಗಲಿ