4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ

KannadaprabhaNewsNetwork |  
Published : Dec 07, 2025, 03:00 AM IST

ಸಾರಾಂಶ

ರಾಜಧಾನಿ ಬೆಂಗಳೂರಿನ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳು ಹಾಗೂ ವಾರ್ಡ್‌ ರಸ್ತೆಗಳ ಅಭಿವೃದ್ಧಿಗೆ ಪ್ರಸ್ತುತ 4,808 ಕೋಟಿ ರು. ವೆಚ್ಚ ಮಾಡಲಾಗುತ್ತಿದ್ದು, ಮಳೆಗಾಲ ಆರಂಭಕ್ಕೂ ಮೊದಲು ವೈಟ್‌ಟಾಪಿಂಗ್‌ ಕಾಮಗಾರಿ ಹೊರತು ಪಡಿಸಿ ಉಳಿದೆಲ್ಲ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳು ಹಾಗೂ ವಾರ್ಡ್‌ ರಸ್ತೆಗಳ ಅಭಿವೃದ್ಧಿಗೆ ಪ್ರಸ್ತುತ 4,808 ಕೋಟಿ ರು. ವೆಚ್ಚ ಮಾಡಲಾಗುತ್ತಿದ್ದು, ಮಳೆಗಾಲ ಆರಂಭಕ್ಕೂ ಮೊದಲು ವೈಟ್‌ಟಾಪಿಂಗ್‌ ಕಾಮಗಾರಿ ಹೊರತು ಪಡಿಸಿ ಉಳಿದೆಲ್ಲ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ 1682 ಕಿ.ಮೀ ಉದ್ದದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಿದ್ದು, ಈ ಪೈಕಿ ಈಗಾಗಲೇ 124 ಕಿ.ಮೀ ಉದ್ದದ ರಸ್ತೆಯನ್ನು ವೈಟ್‌ಟಾಪಿಂಗ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಇದೀಗ, 1700 ಕೋಟಿ ರು. ವೆಚ್ಚದಲ್ಲಿ 157 ಕಿ.ಮೀ ಉದ್ದ ವೈಟ್‌ಟಾಪಿಂಗ್‌ ಕಾಮಗಾರಿ ಆರಂಭಿಸಲಾಗಿದೆ. 694 ಕೋಟಿ ರು. ವೆಚ್ಚದಲ್ಲಿ 392 ಕಿ.ಮೀ ಉದ್ದದ ರಸ್ತೆ ಡಾಂಬರೀಕರಣ ಪ್ರಗತಿಯಲ್ಲಿದೆ. 1,241 ಕೋಟಿ ರು. ವೆಚ್ಚದಲ್ಲಿ ಡಾಂಬರೀಕರಣಕ್ಕೆ, ಮುಖ್ಯಮಂತ್ರಿಯ ಅನುದಾನದಲ್ಲಿ 900 ಕೋಟಿ ರು. ವೆಚ್ಚದಲ್ಲಿ ವಾರ್ಡ್‌ ರಸ್ತೆಗಳಿಗೆ ಡಾಂಬರೀಕರಣ ಮಾಡಲು ನಿರ್ಧರಿಸಲಾಗಿದೆ.

ಇನ್ನೂ ಐಟಿ- ಬಿಟಿ ಕಂಪನಿಗಳಿರುವ ಹೈಡೆನ್ಸಿಟಿ ಕಾರಿಡಾರ್‌ನ 78 ಕಿ.ಮೀ ಅಭಿವೃದ್ಧಿಗೆ 273 ಕೋಟಿ ರು. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟಾರೆಯಾಗಿ ನಗರದಲ್ಲಿ ಅಸ್ತಿತ್ವದಲ್ಲಿರುವ ರಸ್ತೆಗಳ ಅಭಿವೃದ್ಧಿಗೆ 4,808 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಡಾಂಬರೀಕರಣ ಕಾಮಗಾರಿಗಳು ಮುಂಬರುವ ಮಾರ್ಚ್‌, ಏಪ್ರಿಲ್‌ಗಿಂತ ಮೊದಲು ಪೂರ್ಣಗೊಳಿಸಲಾಗುವುದು. ವೈಟ್‌ಟಾಪಿಂಗ್‌ ಕಾಮಗಾರಿಯ ಪೈಕಿ ಈಗಾಗಲೇ ಸುಮಾರು 34 ಕಿ.ಮೀ ಉದ್ದದ ರಸ್ತೆಯಲ್ಲಿ ಕಾಮಗಾರಿ ಮುಗಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. 30 ಕಿ.ಮೀ ಉದ್ದದ ರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಒಟ್ಟಾರೆ, 2026ರ ಸೆಪ್ಟಂಬರ್‌ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಎಂಜಿ ರಸ್ತೆಗೆ ವೈಟ್‌ಟಾಪಿಂಗ್ ಭಾಗ್ಯವಿಲ್ಲ

ಅತಿ ಹೆಚ್ಚು ವಾಹನ ಸಂಚಾರವಿರುವ ಎಂ.ಜಿ.ರಸ್ತೆಯನ್ನು ವೈಟ್‌ಟಾಪಿಂಗ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದಕ್ಕೆ ತೀರ್ಮಾನಿಸಲಾಗಿತ್ತು. ಆದರೆ, ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಸಂಚಾರಿ ಪೊಲೀಸರು ಅವಕಾಶ ನೀಡುತ್ತಿಲ್ಲ. ಹೀಗಾಗಿ, ಡಾಂಬರೀಕರಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.ಗುಂಡಿ ಮುಕ್ತದ ಬಗ್ಗೆ ಭರವಸೆ ಇಲ್ಲ

ಕಳೆದ ಆರೇಳು ವರ್ಷದಿಂದ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಯಾವುದೇ ವೆಚ್ಚ ಮಾಡಿಲ್ಲ. ಇದೀಗ ವೆಚ್ಚ ಮಾಡಲಾಗುತ್ತಿದೆ. ವಾರ್ಡ್‌ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಕಳೆದ ಬಾರಿ ಮಳೆಗಾಲದಲ್ಲಿ ಕಂಡುಬಂದಷ್ಟು ರಸ್ತೆ ಗುಂಡಿ ಸಮಸ್ಯೆ ಇರುವುದಿಲ್ಲ. ಸಂಪೂರ್ಣವಾಗಿ ಗುಂಡಿ ಮುಕ್ತಕ್ಕೆ ಕಸ ವಿಲೇವಾರಿ, ಜಲಮಂಡಳಿಯ ಕೊಳವೆ ವ್ಯವಸ್ಥೆ, ನೀರು ಗಾಲುವೆ ವ್ಯವಸ್ಥಿತವಾಗಿರಬೇಕಾಗಲಿದೆ. ಆ ವ್ಯವಸ್ಥೆ ಸದ್ಯಕ್ಕೆ ಇಲ್ಲ ಎಂದು ತುಷಾರ್‌ ಗಿರಿನಾಥ್‌ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಡಿಎನಿಂದ ‘ಕಟ್ ಆ್ಯಂಡ್ ಕವರ್’ ಟನಲ್‌

ಹೆಬ್ಬಾಳ ಜಂಕ್ಷನ್‌ನಿಂದ ಪಶು ವೈದ್ಯಕೀಯ ಕಾಲೇಜುವರೆಗೂ ವಾಹನ ದಟ್ಟಣೆ ಕಡಿಮೆ ಮಾಡಲು ಉದ್ದೇಶಿಸಿರುವ ಮೂರು ಪಥದ ಅವಳಿ ಕೆಳ ಮಾರ್ಗ (ಅಂಡರ್ ಪಾಸ್) ವನ್ನು ‘ಕಟ್ ಆ್ಯಂಡ್ ಕವರ್’ ಮಾದರಿಯಲ್ಲಿ ನಿರ್ಮಿಸಲಾಗುವುದು. 2215 ಕೋಟಿ ರು. ವೆಚ್ಚ ಮಾಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಲಿದೆ. ಸುರಂಗ ರಸ್ತೆ ಹಾಗೂ ಮೇಖ್ರಿ ವೃತ್ತದಲ್ಲಿ ಫ್ಲೈಓವರ್‌ ನಿರ್ಮಾಣ ಮಾಡಲಿದೆ. ಮುಂದಿನ ವರ್ಷದ ಜನವರಿಯಲ್ಲಿ ಬಿಡಿಎ ವತಿಯಿಂದ ಟೆಂಡರ್ ಕರೆಯಲಾಗುತ್ತದೆ.

ನಗರಕ್ಕೆ ರಿಂಗ್‌ ಪ್ಲೈಓವರ್‌ಗೆ ಪ್ರಸ್ತಾವನೆ

ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು 18,204 ಕೋಟಿ ರು. ವೆಚ್ಚದಲ್ಲಿ ಸುಮಾರು 126.44 ಕಿ.ಮೀ ಉದ್ದದ 13 ಫ್ಲೈಓವರ್‌ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸಲಾಗಿದೆ. ಟೋಲ್‌ ನಿಗದಿ ಪಡಿಸಲು ಆರ್ಥಿಕ ಇಲಾಖೆ ಸಲಹೆ ನೀಡಿದೆ.13 ಫ್ಲೈಓವರ್‌ ಪೈಕಿ 10 ಫ್ಲೈಓವರ್‌ 2 ಪಥ, 3 ಫ್ಲೈಓವರ್‌ 3 ಪಥ ಇರಲಿದೆ ಎಂದು ಅವರು ಮಾಹಿತಿ ನೀಡಿದರು.22,539 ಗುಂಡಿ ಮುಚ್ಚಲಾಗಿದೆ

ನಗರದಾದ್ಯಂತ ರಸ್ತೆ ಗುಂಡಿಗಳನ್ನು ಯುದ್ಧೋಪಾದಿಯಲ್ಲಿ ಮುಚ್ಚಲಾಗುತ್ತಿದ್ದು, ಈವರೆಗೆ 22,539 ಗುಂಡಿಗಳನ್ನು ಮುಚ್ಚಲಾಗಿದೆ. ಮಳೆ ನಿರಂತರವಾಗಿ ಬಂದ ಪರಿಣಾಮ ತಡವಾಗಿದ್ದು, ಮುಂದಿನ ವರ್ಷ ರಸ್ತೆ ಗುಂಡಿಗಳನ್ನು ನಿಯಂತ್ರಿಸಲು ದೀರ್ಘಕಾಲಿಕ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.

33 ಪ್ಯಾಕೇಜ್ ನಲ್ಲಿ ಕಸ ವಿಲೇಗೆ ಟೆಂಡರ್‌ ನಗರದ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಎರಡು ವರ್ಷಗಳ ಕಾಲ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಇದೀಗ ಇತ್ಯರ್ಥವಾಗಿದೆ. ಹೊಸದಾಗಿ 33 ಪ್ಯಾಕೇಜ್ ಗಳಲ್ಲಿ ಟೆಂಡರ್ ಕರೆಯಲಾಗಿದೆ. ಅದರ ಪೈಕಿ 132 ಬಿಡ್‌ ಬಂದಿದ್ದು, 4ರಿಂದ 5 ಪ್ಯಾಕೇಜ್‌ಗಳಿಗೆ ಬಿಡ್ ಬಂದಿಲ್ಲ. ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದ್ದು, ಇನ್ನೂ ಒಂದು ವಾರ ಬೇಕಾಗಲಿದೆ. ಬಿಡ್‌ ಬರದ ಪ್ಯಾಕೇಜ್‌ಗಳನ್ನು ಆಯ್ಕೆಯಾಗುವ ಗುತ್ತಿಗೆದಾರರಿಗೆ ನೀಡುವುದಕ್ಕೆ ಚಿಂತನೆ ನಡೆಸಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಕಾರ್ಯಾದೇಶ ನೀಡಲಾಗುವುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡ್ರಗ್ಸ್‌ಗಾಗಿ ಜೈಲರ್, ಸಿಬ್ಬಂದಿ ಮೇಲೆ ಕೈದಿಗಳ ಹಲ್ಲೆ!
ಬಾಬಾ ಸಾಹೇಬ್‌ ಅಂಬೇಡ್ಕರ್‌ ಅಪರೂಪದ ನಾಯಕ: ಸಿಎಂ