ಅಂತೂ ರಸ್ತೆ ಅಗಲೀಕರಣ ಟ್ರಾಕ್ ಗೆ ಬಂತು

KannadaprabhaNewsNetwork | Published : Jan 1, 2025 12:00 AM

ಸಾರಾಂಶ

ಚಿತ್ರದುರ್ಗ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಕನ್ನಡಪ್ರಭ ತನ್ನ ಸರಣಿಯ ಮೂರನೇ ಕಂತಿನಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿ ಅಗತ್ಯತೆ ಬಗ್ಗೆ ಪ್ರಸ್ತಾಪಿಸಿತ್ತು

ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ವೆಂಕಟೇಶ ನಾಯ್ಕ ನೇಮಕ । ಕನ್ನಡಪ್ರಭ ತನ್ನ ಸರಣಿ ವರದಿ 3 ನೇ ಭಾಗದಲ್ಲಿ ಪ್ರಸ್ತಾಪಿಸಿತ್ತು

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬರೀ ಬಾಯಿ ಮಾತಿನಲ್ಲಿಯೇ ಇದ್ದ ಚಿತ್ರದುರ್ಗದ ನಗರದ ರಸ್ತೆ ಅಗಲೀಕರಣ ಪ್ರಕ್ರಿಯೆ ಅಂತೂ ಟ್ರ್ಯಾಕ್ ಗೆ ಬಂದಿದೆ. ಜಿಲ್ಲಾಧಿಕಾರಿ ವೆಂಕಟೇಶ್ ಅವರು ಅಗಲೀಕರಣಕ್ಕೆ ವಿಶೇಷ ಭೂ ಸ್ವಾಧೀನ ಅಧಿಕಾರಿಯನ್ನಾಗಿ ವೆಂಕಟೇಶ್ ನಾಯ್ಕ ಅವರನ್ನು ನೇಮಕ ಮಾಡುವುದರ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದಾರೆ. ಹೊಸ ವರ್ಷದಿಂದ ಅಗಲೀಕರಣ ಪ್ರಕ್ರಿಯೆಗೆ ಪೂರ್ವ ಸಿದ್ಧತೆ ಕಾರ್ಯಗಳು ಆರಂಭವಾಗಲಿವೆ. ವಿಶೇಷ ಭೂ ಸ್ವಾಧೀನ ಅಧಿಕಾರಿ ಅಗತ್ಯತೆ ಬಗ್ಗೆ ಕನ್ನಡಪ್ರಭ ತನ್ನ ಸರಣಿ ವರದಿಯ ಮೂರನೇ ಕಂತಿನಲ್ಲಿ ಪ್ರಸ್ತಾಪಿಸಿತ್ತು.

ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿ ನಿಯೋಜನೆ ಗೊಂಡಿರುವ ವೆಂಕಟೇಶ ನಾಯ್ಕ ಹಾಲಿ ತುಮಕೂರು-ಚಿತ್ರದುರ್ಗ ನೇರ ರೈಲು ಮಾರ್ಗ ಹಾಗೂ ಬೀದರ್- ಶ್ರೀರಂಗಪಟ್ಟಣ ಹೆದ್ದಾರಿಯ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೆಂಕಟೇಶ್ ನಾಯ್ಕ ನಾಯಕನಹಟ್ಟಿ ಪಕ್ಕದ ಮನಮೈನಹಟ್ಟಿಯವರಾಗಿದ್ದು ಚಿತ್ರದುರ್ಗ ಬಲ್ಲವಂತವರಾಗಿದ್ದಾರೆ.

ವಿಶೇಷ ಭೂ ಸ್ವಾಧೀನ ಅಧಿಕಾರಿ ನೇಮಕದ ಹಿನ್ನಲೆ ಕನ್ನಡಪ್ರಭದೊಂದಿಗೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಸ್ತೆ ಅಗಲೀಕರಣ ಕುರಿತು ಚರ್ಚಿಸಲಾಗಿತ್ತು. ಅದರ ಮೊದಲ ಹಂತವಾಗಿ ವಿಶೇಷ ಭೂ ಸ್ವಾಧೀನ ಅಧಿಕಾರಿ ನೇಮಕ ಮಾಡಲಾಗಿದೆ. ನಗರಸಭೆಯಲ್ಲಿ ಅವರು ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಕೊಠಡಿ ನೀಡಲು ಸೂಚಿಸಲಾಗಿದೆ ಎಂದರು.

ಚಿತ್ರದುರ್ಗ ನಗರದ ಚಳ್ಳಕೆರೆ ವೃತ್ತದಿಂದ ಕನಕ ವೃತ್ತದವರೆಗೆ ರಸ್ತೆ ಅಗಲೀಕರಣ ನಡೆಯುತ್ತಿದ್ದು ನಗರಸಭೆ ಅಧಿಕಾರಿಗಳು ಈಗಾಗಲೇ ಕಟ್ಟಡಗಳ ಪಟ್ಟಿ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ರಸ್ತೆ ವಿಸ್ತೀರ್ಣದ ಮಾಹಿತಿ ಪಡೆದು ತೆರವು ಕಾರ್ಯಾಚರಣೆಗೆ ಮುಂದಾಗಲಾಗುವುದು. ಕಟ್ಟಡಗಳ ಒಟ್ಟು ನಾಲ್ಕು ಹಂತದಲ್ಲಿ ಪರಿಶೀಲಿಸಲಾಗುತ್ತದೆ. ರಸ್ತೆ ಒತ್ತುವರಿ ಪ್ರಮಾಣ, ನಗರಸಭೆಯಿಂದ ನಿವೇಶನ ಮಂಜೂರಾಗಿರುವುದು, ಸ್ವಂತ ನಿವೇಶನವೇ, ಕಟ್ಟಡ ನಿರ್ಮಾಣಕ್ಕೆ ಪಡೆಯಲಾದ ಅನುಮತಿಯ ಗಮನಿಸಲಾಗುತ್ತದೆ ಎಂದರು. ಜಿಲ್ಲಾಧಿಕಾರಿ ವೆಂಕಟೇಶ್ ಮಾರ್ಗದರ್ಶನದಲ್ಲಿಯೇ ರಸ್ತೆ ಅಗಲೀಕರಣ ನಡೆಯುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಚಿತ್ರದುರ್ಗದಲ್ಲಿ ಇದುವರೆಗೂ ನಡೆದಿರುವ ಮೂರು ರಸ್ತೆ ಅಗಲೀಕರಣದಲ್ಲಿ ಭೂ ಸ್ವಾಧೀನ ಅಧಿಕಾರಿ ನೇಮಕ ಮಾಡಲಾಗಿರಲಿಲ್ಲ. ಗೋಡೆಗಳಿಗೆ ಮಾರ್ಕ್ ಹಾಕಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಚಾನುಸಾರ ಕಟ್ಟಡ ತೆರವು ಗೊಳಿಸಲಾಗಿತ್ತು. ಅಬ್ಬಾ..!

ಕೇಳಿ ಕೊಂಡಿದ್ದಕ್ಕೆ ಬಿಲ್ಡಿಂಗ್ ಸ್ವಲ್ಪ ಉಳಿಸಿಕೊಟ್ಟರು ಎಂಬ ಸಮಾಧಾನದಲ್ಲಿ ವರ್ತಕರು ಹಾಗೂ ಏನೋ ಕೇಳಿದೆ ಅಂತ ಅವಕಾಶ ಮಾಡಿಕೊಟ್ಟಿದ್ದೇನೆ ಎಂದು ಜನಪ್ರತಿನಿಧಿ್ಗಳು ಔದಾರ್ಯದ ನಗೆ ಬೀರಿದ್ದರು. ನಿಯಮಾವಳಿಗಳು ಮೂಲೆ ಗುಂಪಾಗಿದ್ದವು. ಆದರೆ ಈ ಬಾರಿ ವ್ಯವಸ್ಥಿತ ಸ್ವರೂಪ ಸಿಕ್ಕಿದೆ. ರಸ್ತೆ ಅಗಲೀಕರಣಕ್ಕೆ ಭರವಸೆಯೊಂದು ಪ್ರಾಪ್ತವಾದಂತಾಗಿದೆ.

Share this article