ಜಿಲ್ಲಾ ಕಾರ್ಯಕಾರಿಯಲ್ಲಿ ಅವಿರೋಧ ಆಯ್ಕೆ: ಬಿ.ಎನ್. ವಾಸರೆ ಘೋಷಣೆ
ಕನ್ನಡಪ್ರಭ ವಾರ್ತೆ ದಾಂಡೇಲಿದಾಂಡೇಲಿಯಲ್ಲಿ ಡಿ. 13, 14, 15ರಂದು ನಡೆಯಲಿರುವ ಉತ್ತರಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಕುಮಟಾದ ರೋಹಿದಾಸ ನಾಯ್ಕ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.ಈ ಬಗ್ಗೆ ಕಸಾಪ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದಾಂಡೇಲಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಮುಂಡಗೋಡ ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ ಸೂಚಿಸಿದರು. ಹೊನ್ನಾವರ ಅಧ್ಯಕ್ಷ ಎಸ್.ಎಚ್. ಗೌಡ ಅನುಮೋದಿಸಿದರು. ಅಂತಿಮವಾಗಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಪಿ.ಆರ್. ನಾಯ್ಕ, ಜಾರ್ಜ್ ಫರ್ನಾಂಡೀಸ್, ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಆನೆ ಹೊಸುರ, ಜಿಲ್ಲಾ ಸಮಿತಿ ಸದಸ್ಯರಾದ ಎಸ್.ವಿ. ಬಿರಾದರ, ಪಿ.ಎಂ. ಮುಕ್ರಿ, ಜಯಶೀಲ ಆಗೇರ, ಕಸಾಪ ತಾಲೂಕು ಘಟಕಗಳ ಅಧ್ಯಕ್ಷರಾದ ನಾರಾಯಣ ನಾಯ್ಕ, ದಾಂಡೇಲಿ, ಸುಮಂಗಲಾ ಅಂಗಡಿ, ಹಳಿಯಾಳ, ರಾಮಾ ನಾಯ್ಕ, ಕಾರವಾರ, ಗೋಪಾಲಕೃಷ್ಣ ನಾಯಕ, ಅಂಕೋಲಾ, ವಸಂತ ಕೊಣಸಾಲಿ, ಮುಂಡಗೋಡ, ಸುಬ್ರಹ್ಮಣ್ಯ ಭಟ್, ಯಲ್ಲಾಪುರ, ಸುಬ್ರಾಯ ಭಟ್, ಬಕ್ಕಳ ಶಿರಸಿ, ಗಂಗಾಧರ ನಾಯಕ, ಭಟ್ಕಳ, ಎಸ್.ಎಚ್. ಗೌಡ, ಹೊನ್ನಾವರ, ಪ್ರಮೋದ ನಾಯ್ಕ, ಕುಮಟಾ, ಚಂದ್ರಶೇಖರ ಕುಂಬ್ರಿಗದ್ದೆ ಸಿದ್ದಾಪುರ ಮುಂತಾದವರಿದ್ದರೆಂದು ವಾಸರೆ ತಿಳಿಸಿದರು.ರೋಹಿದಾಸ ನಾಯ್ಕರ ಪರಿಚಯ:ಆಡಳಿತ, ಸಂಘಟನೆ, ಸಾಹಿತ್ಯ ಕೃಷಿಯ ಮೂಲಕ ಜಿಲ್ಲೆಗೆ ಚಿರ ಪರಿಚಿತರಾಗಿರುವ ರೋಹಿದಾಸ ನಾಯಕರು ನಾಡು ಕಂಡ ಪ್ರಬುದ್ಧ ಬರಹಗಾರರಲ್ಲೊಬ್ಬರು. ನಿವೃತ್ತ ಪೊಲೀಸ್ ನೌಕರ ದಿ.ಶಿವರಾಮ ನಾಯಕ ಹಾಗೂ ಸಾವಿತ್ರಿ ನಾಯಕರ ಮಗನಾಗಿ ಕುಮಟಾದ ಬಾಡ-ಗುಡೆಅಂಗಡಿ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಭಟ್ಕಳ ಮತ್ತು ಕಾರವಾರದಲ್ಲಿ, ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ಪಡೆದಿದ್ದಾರೆ. ಕುಮಟಾದ ಕೆನರಾ ಕಾಲೇಜಿನಲ್ಲಿ ಬಿಎ, ಧಾರವಾಡದ ಕರ್ನಾಟಕ ವಿವಿಯಲ್ಲಿ ಎಂಎಯನ್ನು ಪಡೆದ ಇವರು ಹಳಿಯಾಳದ ಪಪೂ ಕಾಲೇಜಿನಲ್ಲಿ ಒಂದು ವರ್ಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಹಾಸನದ ಕಾಲೇಜಿನಲ್ಲಿ ಎಲ್.ಎಲ್. ಬಿ. ಪದವಿ ಪಡೆದರು. ೧೯೭೦ರಲ್ಲಿ ಲೋಕಸೇವಾ ಆಯೋಗದಿಂದ ಅಬಕಾರಿ ನಿರೀಕ್ಷಕರಾಗಿ ಆಯ್ಕೆಗೊಂಡು, ಪದೋನತ್ತಿಗೊಳ್ಳುತ್ತ ಅಬಕಾರಿ ಇಲಾಖೆಯಲ್ಲಿ ಹಿರಿಯ ಉಪ ಆಯುಕ್ತರಾಗಿ ಸೇವೆ ಸಲ್ಲಿಸಿ ೨೦೦೩ ರಲ್ಲಿ ನಿವೃತ್ತಿ ಹೊಂದಿದರು.ಶಾಲಾ ಕಾಲೇಜು ದಿನಗಳಲ್ಲಿ ಸಣ್ಣ ಕಥೆಗಾರರಾಗಿ ನಾಡಿನ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ಸುಧಾ, ಮಯೂರ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ ಕರಾವಳಿ ಮುಂಜಾವು ಮುಂತಾದ ಪತ್ರಿಕೆಗಳಲ್ಲಿ ಅನೇಕ ಲೇಖನ ಹಾಗೂ ಸಣ್ಣ ಕಥೆಗಳು ಪ್ರಕಟಗೊಂಡಿವೆ.
ಮಾಸ್ತಣ್ಣ ಹಾಗೂ ಇತರ ಕಥೆಗಳು, ಕರೆಯದೆ ಬರುವವರು, ಕತ್ತಲೆ ದಾರಿ ದೂರ ಎನ್ನುವ ಕಥಾ ಸಂಕಲನಗಳನ್ನು, ಪ್ರೇಮದ ಕನಸುಗಳು ಎನ್ನುವ ಕವನ ಸಂಕಲನವನ್ನು, ನೀರ ನೆರಳು ಎಂಬ ಕಾದಂಬರಿ, ನಿರಂತರ, ಭಾಷಣ ಕಲೆ, ಕನ್ನಡ ಭಾಷಾ ಶಾಸ್ತ್ರಸಾರ, ಸಂಪದ, ವೈಚಾರಿಕ ಲೇಖನಗಳು ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.ಕಸಾಪಕ್ಕೆ ಸತತ ಮೂರು ಬಾರಿ ಆಯ್ಕೆಯಾದ ರೋಹಿದಾಸ ನಾಯಕರು ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ೯ ಜಿಲ್ಲಾ ಸಾಹಿತ್ಯ ಸಮ್ಮೇಳನ, ೩೭ ತಾಲೂಕಾ ಸಾಹಿತ್ಯ ಸಮ್ಮೇಳನ ಸಂಘಟಿಸಿದ್ದಲ್ಲದೆ, ಸಾಹಿತ್ಯಿಕ ಮೌಲ್ಯದ ಅನೇಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಜಿಲ್ಲಾ ಹಾಗೂ ತಾಲೂಕಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಭಾಷಣಗಳ ಗ್ರಂಥಗಳು ಪ್ರತ್ಯೇಕವಾಗಿ ಬಂದಿವೆ.ದೂರದರ್ಶನ ಕಾರ್ಯಕ್ರಮಗಳಲ್ಲಿ ಇವರ ಕಥೆಗಳು ಧಾರಾವಾಹಿಯಾಗಿ ಭಿತ್ತರಗೊಂಡಿವೆ. ದೂರದರ್ಶನದ ಕಾರ್ಯಕ್ರಮದಲ್ಲಿ ಸಾಹಿತ್ಯ ರಚನಾಕಾರರಾಗಿ, ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಕೆಲವು ಚಲನಚಿತ್ರಗಳಿಗೆ ಸಾಹಿತ್ಯ ರಚನೆಯಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಇವರ ಸುರಂಗ ಚಕ್ರ ಎಂಬ ಕತೆ ಚಲನಚಿತ್ರವಾಗಿದೆ.
ಇವರ ಕುರಿತಾಗಿ ''''ಪ್ರತಿಭಾ ಸಂಪನ್ನ'''' ಎಂಬ ಅಭಿನಂದನಾ ಗ್ರಂಥ ಹೊರಬಂದಿದ್ದು, ನಾಡಿನ ಹಲವಾರು ಗೌರವಗಳಿಗೆ ಪಾತ್ರರಾದವರಾಗಿದ್ದಾರೆ ಎಂದು ಬಿ.ಎನ್. ವಾಸರೆ ತಿಳಿಸಿದರು.ಬೆಳ್ಳಿ ಹಬ್ಬದ ಸಂಭ್ರಮ:
25ನೇ ವರ್ಷದ ಸಮ್ಮೇಳನವನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, 25 ಪುಸ್ತಕಗಳ ಬಿಡುಗಡೆ, 25 ಸಾಧಕರಿಗೆ ರಜತ ಮಹೋತ್ಸವದ ಗೌರವ ಸೇರಿದಂತೆ ಈ ಹಿಂದಿನ ಎಲ್ಲಾ ಸಮ್ಮೇಳನಾಧ್ಯಕ್ಷರನ್ನು ಸನ್ಮಾನಿಸಲಾಗುತ್ತಿದೆ. ಸ್ವಾಗತ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಆರ್.ವಿ. ದೇಶಪಾಂಡೆಯವರ ಸಾರಥ್ಯದಲ್ಲಿ ಈ ಸಮ್ಮೇಳನವನ್ನು ಒಂದು ಐತಿಹಾಸಿಕ ಸಮ್ಮೇಳನವನ್ನಾಗಿ ರೂಪಿಸುವ ಸಿದ್ದತೆ ನಡೆಯುತ್ತಿದೆ. ಸಮ್ಮೇಳನದ ಯಶಸ್ಸಿಗೆ ಎಲ್ಲರ ಸಹಕಾರದ ಅಗತ್ಯವಿದೆ ಎಂದು ಬಿ.ಎನ್. ವಾಸರೆ ಮನವಿ ಮಾಡಿದರು.