ಮನೆಗಳು ಬಿದ್ದು ಲಕ್ಷಾಂತರ ರು. ನಷ್ಟ : 42.08 ಎಂಎಂ ಮಳೆ ದಾಖಲೆ
ತಾಲೂಕಿನಾದ್ಯಂತ ರೋಹಿಣಿ ಮಳೆ ನಿರಂತರವಾಗಿ ಮುಂದುವರೆದಿದ್ದು, ಮಳೆಯಿಂದ ಗುಡುಗು, ಸಿಡಿಲ ಜೊತೆಗೆ ಮನೆ, ಬೆಳೆ ಹಾನಿಯಾದ ಘಟನೆಗಳು ನಡೆದಿವೆ.
ತಾಲೂಕಿನಾದ್ಯಂತ ಮಂಗಳವಾರ ರಾತ್ರಿ 42.08 ಎಂ.ಎಂ ಮಳೆಯಾಗಿದ್ದು, ಇಲ್ಲಿಯವರೆಗೆ ಸುಮಾರು 800 ಎಂ.ಎಂ ಮಳೆ ದಾಖಲಾಗಿದೆ.ಚಳ್ಳಕೆರೆ-20 ಎಂ.ಎಂ, ತಳಕು-18.08, ನಾಯಕನಹಟ್ಟಿ-1.02, ದೇವರಮರಿಕುಂಟೆಯಲ್ಲಿ-4.02 ಮಳೆ ದಾಖಲಾಗಿದೆ.
ಚಳ್ಳಕೆರೆ-ನನ್ನಿವಾಳ ಸಂಪರ್ಕ ಕಲ್ಪಿಸುವ ಗರ‍್ಲಕಟ್ಟೆ ಬಳಿ ಮಳೆಯಿಂದ ನದಿಯಂತೆ ಹಳ್ಳದ ನೀರು ರಭಸದಿಂದ ಹರಿದ ಪರಿಣಾಮ ಕೆಲಹೊತ್ತು ವಾಹನ ಸಂಚಾರ ಸ್ಥಗಿತವಾಗಿತ್ತು. ನಗರದ ಚಿತ್ರದುರ್ಗ ರಸ್ತೆಯ ಬಿಇಒ ಕಚೇರಿ ಎದುರಿನಲ್ಲಿ ಬಿಎಂಜಿಎಚ್‌ಎಸ್ ಹಾಗೂ ಎಚ್‌ಟಿಟಿ ಶಾಲೆಯ ಮೂಲಕ ಹರಿದ ನೀರು ನದಿಯೋಪಾದಿಯಲ್ಲಿ ರಸ್ತೆಯಲ್ಲೇ ನಿಂತು ಸಣ್ಣವ್ಯಾಪಾರಿಗಳಿಗೆ ಸಮಸ್ಯೆ ಉಂಟಾಗಿದ್ದು, ನಿಂತ ನೀರಲ್ಲೇ ವ್ಯಾಪಾರ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು.