ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ತನ್ನದೇ ಆದ ಸೇವೆ ಸಲ್ಲಿಸಿ ದೇಶವನ್ನು ಬಂಧಮುಕ್ತಗೊಳಿಸುವಲ್ಲಿ ಭಾರತ ಸೇವಾದಳದ ಪಾತ್ರ ಅಮೋಘವಾಗಿದೆ ಎಂದು ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಹೇಳಿದರು.ಪಟ್ಟಣದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಬೆಳಗಾವಿ, ತಾಲೂಕು ಸಮಿತಿ, ತಾಪಂ, ಕ್ಷೇತ್ರಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ವತಿಯಿಂದ ಸೇವಾದಳ ಶತಮಾನೋತ್ಸವ ಅಂಗವಾಗಿ ಗುರುವಾರ ನಡೆದ ಜಿಲ್ಲಾಮಟ್ಟದ ರಾಷ್ಟ್ರೀಯ ಭಾವೈಕ್ಯತೆ ಮಕ್ಕಳ ಮೇಳ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹರ್ಡೀಕರ ಅವರಿಂದ ಸ್ಥಾಪಿತವಾದ ಭಾರತ ಸೇವಾದಳ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಸೇವಾ ಮನೋಭಾವನೆ, ಸ್ವಯಂಶಿಸ್ತು, ದೇಶಪ್ರೇಮ, ರಾಷ್ಟ್ರೀಯ ಭಾವೈಕ್ಯತೆಯನ್ನು ಜಾಗೃತಗೊಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಮಹಾಂತೇಶ ತುರಮರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಸೇವೆಗಾಗಿ ಹುಟ್ಟಿಕೊಂಡಿರುವ ಸೇವಾದಳ ಶಿಸ್ತು, ತಾಳ್ಮೆ, ಸೇವಾ ಮನೋಭಾವದಿಂದ ಬಲಿಷ್ಠ ಸಂಸ್ಥೆಯಾಗಿ ಬೆಳೆದಿದೆ. ಇಂದಿನ ಮಕ್ಕಳು ಅತ್ಯುತ್ತಮ ಕಲಿಕೆ ಮೂಲಕ ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದಾರೆ. ಸೇವಾದಳದ ಮೂಲಕ ದೇಶಪ್ರೇಮ, ಭಕ್ತಿ ಸೇವೆ ಮನೋಭಾವ ಮೂಡಿಸಿದರೆ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದರು.ಶಾಖಾ ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಸಾನ್ನಿಧ್ಯ ವಹಿಸಿದ್ದರು.
ನಟ ಶಿವರಂಜನ ಬೋಳನ್ನವರ, ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ಕ್ಷೇತ್ರಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ, ಬಸವರಾಜ ಹಟ್ಟಿಗೌಡರ, ಎಂ.ಎಂ.ಕೋಲಕಾರ, ಸುಭಾಸ ತುರಮರಿ, ಬಿ.ಬಿ.ಬಸಕ್ರಿ, ಅನಿಲ ಪತ್ತಾರ, ಪಿ.ಡಿ.ಕಾಲವಾಡ, ಎಸ್.ಬಿ.ಮಲಗೌಡರ, ವಿ.ಬಿ.ಕಂಬಾರ ವೇದಿಕೆಯಲ್ಲಿ ಇದ್ದರು. ವಿ.ಸಿ.ಅಡಕಿ ನಿರೂಪಿಸಿದರು. ಬಿ.ಎಸ್.ಜಕಾತಿ ಸ್ವಾಗತಿಸಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಹಾಗೂ ನೃತ್ಯ ಪ್ರದರ್ಶನ ಜರುಗಿದವು. ಇದಕ್ಕೂ ಮೊದಲು ವೀರ ರಾಣಿ ಚನ್ನಮ್ಮ ಸಮಾಧಿಯಿಂದ ಬಿಇಒ ಎ.ಎನ್.ಪ್ಯಾಟಿ, ಜಿಲ್ಲಾಧ್ಯಕ್ಷ ಮಹಾಂತೇಶ ತುರಮರಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮಾರಂಭ ನಡೆಯುವ ಸ್ಥಳಕ್ಕೆ ತಲುಪಿತು.