ಭಟ್ಕಳ: ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸನಿಹದ ಕಮಲಾವತಿ ಶಾನಭಾಗ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ವತಿಯಿಂದ ಏರ್ಪಡಿಸಿದ್ದ ರೆಫ್ರಿ ತರಬೇತಿಯನ್ನು ರಾಜ್ಯ 7 ಡನ್ ಬ್ಲ್ಯಾಕ್ ಬೆಲ್ಟ್ ಡಬ್ಲ್ಯುಕೆಎಫ್‌ಸಿ ರೆಫ್ರಿ ಕೆ.ಪಿ. ಜೋಸ್ ಉದ್ಘಾಟಿಸಿದರು.
ಪತ್ರಕರ್ತ ಮೋಹನ ನಾಯ್ಕ ಮಾತನಾಡಿ, ಭಟ್ಕಳದಲ್ಲಿ ತರಬೇತಿ ಪಡೆದ ಕರಾಟೆ ಪಟುಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿ ಬಂದಿದ್ದಾರೆ. ಇದಕ್ಕೆ ಕಾರಣ ಇಲ್ಲಿನ ವ್ಯವಸ್ಥಿತ ತರಬೇತಿ ಕಾರಣವಾಗಿದೆ. ಕಾಲಕಾಲಕ್ಕೆ ಬದಲಾಗುವ ಸ್ಪರ್ಧಾ ನಿಯಮಗಳನ್ನು ತರಬೇತುದಾರರು ಅರಿತು ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಿದರೆ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾಭಾರತಿ ಶಾಲೆಯ ಪ್ರಾಂಶುಪಾಲೆ ರೂಪಾ ಖಾರ್ವಿ ಮಾತನಾಡಿ, ಕರಾಟೆ ಕಲಿತ ನಂತರ ರೆಫ್ರಿ ಆಗಿ ನೇಮಕವಾಗಲು ಸ್ಪರ್ಧೆಯ ನಿಯಮಗಳ ಬಗ್ಗೆ ಸತತ ಅಧ್ಯಯನ ಮುಖ್ಯವಾಗಿರುತ್ತದೆ. ಏಕಾಗ್ರತೆ ಮತ್ತು ಕಲಿಕೆಯ ಮನಸ್ಸು ಇದ್ದರೆ ಯಶಸ್ಸು ಸಾಧ್ಯ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಅಧ್ಯಕ್ಷ ಅರವಿಂದ ನಾಯ್ಕ, ಬಹಳ ವರ್ಷದ ನಂತರ ಭಟ್ಕಳದಲ್ಲಿ ಈಶ್ವರ ನಾಯ್ಕ ಅವರು ಈ ತರಬೇತಿಯನ್ನು ಆಯೋಜಿಸಿದ್ದು, ಇದರ ಸದುಪಯೋಗವನ್ನು ಎಲ್ಲ ತರಬೇತುದಾರರು ಪಡೆದುಕೊಳ್ಳುವಂತೆ ತಿಳಿಸಿದರು.