- ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕರು ಹಾಗೂ ಶಿಕ್ಷಕರ ಮಹಾಸಭಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ದಾವಣಗೆರೆ
ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ಅವುಗಳನ್ನು ಮಾದರಿ ಶಿಕ್ಷಣ ಕೇಂದ್ರಗಳನ್ನಾಗಿ ಪರಿವರ್ತಿಸಲು ಬದ್ಧವಿದ್ದೇವೆ. ಗ್ರಾಮೀಣ ಮಕ್ಕಳ ಶಿಕ್ಷಣದ ಪ್ರಗತಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಆದ್ಯತೆ ಮೇರೆಗೆ ಒದಗಿಸಲಾಗುವುದು ಎಂದು ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ ಸಮರ್ಥ್ ಮಲ್ಲಿಕಾರ್ಜುನ್ ಶಾಮನೂರು ತಿಳಿಸಿದರು.ಸೋಮವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಬಸಾಪುರದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ, 2026-27ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕರು ಹಾಗೂ ಶಿಕ್ಷಕರ ಮಹಾಸಭಾ ಕಾರ್ಯಕ್ರಮ ಉದ್ಪಾಟಿಸಿ ಅವರು ಮಾತನಾಡಿದರು.
ಸ್ಥಳೀಯ ಗ್ರಾಮಸ್ಥರು ಹಾಗೂ ಶಾಲಾ ಮಂಡಳಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖಂಡರು, ಮುಂಬರುವ ದಿನಗಳಲ್ಲಿ ಶಾಲೆಗೆ ಅಗತ್ಯವಿರುವ ಇನ್ನೂ 2 ಹೆಚ್ಚುವರಿ ತರಗತಿ ಕೊಠಡಿಗಳನ್ನು ಮಂಜೂರು ಮಾಡಲಾಗುವುದು. ಇದರೊಂದಿಗೆ ಸಣ್ಣ ಮಕ್ಕಳ ದೈಹಿಕ ವಿಕಾಸಕ್ಕಾಗಿ ಶಾಲಾ ಆವರಣದಲ್ಲಿ ಸುಸಜ್ಜಿತ ಆಟದ ಮೈದಾನ ನಿರ್ಮಿಸಿಕೊಡಲಾಗುವುದು. ಬಸಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಶೀಘ್ರದಲ್ಲೇ ದುರಸ್ತಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಪೋಷಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅವಲೋಕಿಸಿದಾಗ, ಅಲ್ಲಿ ಕಲಿಯುವ ಮಕ್ಕಳಿಗೆ ಹೆಚ್ಚಿನ ಉತ್ತೇಜನ, ಪ್ರೋತ್ಸಾಹ ಹಾಗೂ ಉತ್ಸಾಹ ತುಂಬುವಂತಹ ಕಾರ್ಯಕ್ರಮಗಳ ಅಗತ್ಯತೆ ಹೆಚ್ಚಾಗಿದೆ. ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕಾಗಿ ಪೋಷಕರು ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸಲು ಸರ್ಕಾರಿ ಶಾಲೆಗಳು ಉತ್ತಮಪಡಿಸುವುದು ಇದಕ್ಕೆ ಪರ್ಯಾಯವಾಗಿವೆ ಎಂದರು.
ದೇಶದ ಅತ್ಯುನ್ನತ ಸೇವೆಗಳಾದ ಐ.ಎ.ಎಸ್., ಐ.ಪಿ.ಎಸ್, ಕಂದಾಯ ಸೇವೆಗಳು, ನಾಸಾ ಮತ್ತು ಇಸ್ರೋದಂತಹ ಸಂಸ್ಥೆಗಳಲ್ಲಿರುವ ವಿಜ್ಞಾನಿಗಳು, ಪ್ರಖ್ಯಾತ ವೈದ್ಯರು ಮತ್ತು ಎಂಜಿನಿಯರ್‌ಗಳು ಸರ್ಕಾರಿ ಶಾಲೆಗಳಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದವರಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಪರಿಣಿತ, ತರಬೇತಿ ಪಡೆದ ಮತ್ತು ಅರ್ಹತೆಯುಳ್ಳ ಶಿಕ್ಷಕರಿರುತ್ತಾರೆ. ಇದು ಗುಣಮಟ್ಟದ ಶಿಕ್ಷಣಕ್ಕೆ ದೊಡ್ಡ ಬುನಾದಿಯಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಬಸಾಪುರ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದರು. ಮತ್ತು ಪ್ರಸಕ್ತ ಸಾಲಿನ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದರು.
ಡಿಡಿಪಿಐ ಕೃಷ್ಣ ಪ್ರಸಾದ, ಡಯಟ್ ಪ್ರಾಚಾರ್ಯೆ ಗೀತಾ, ಬಿಇಒ ವಿಶಾಲಾಕ್ಷಿ, ಬಸಾಪುರ ಗ್ರಾಮದ ಶಾಲೆಗಳ ಶಿಕ್ಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
-1ಕೆಡಿವಿಜಿ35:
ದಾವಣಗೆರೆಯ ಬಸಾಪುರದಲ್ಲಿ ಶಾಲಾ ಶಿಕ್ಷಣ ಇಲಾಖಾ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕರು, ಶಿಕ್ಷಕರ ಮಹಾಸಭಾ ಕಾರ್ಯಕ್ರಮವನ್ನು ಶಾಸಕ ಸಮರ್ಥ ಶಾಮನೂರು ಮಲ್ಲಿಕಾರ್ಜುನ ಉದ್ಘಾಟಿಸಿದರು.