ಹಾವೇರಿ ಜಿಲ್ಲೆಯ ನದಿ ಪಾತ್ರದ ಜಮೀನಿನಲ್ಲಿ ಕೊಳೆಯುತ್ತಿರುವ ಬೆಳೆ

KannadaprabhaNewsNetwork | Published : Jul 28, 2024 2:07 AM

ಸಾರಾಂಶ

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದು ವರದಾ, ತುಂಗಭದ್ರಾ ನದಿಗಳಲ್ಲಿ ನೀರಿನ ಹರಿವು ಕೂಡ ಇಳಿಕೆಯಾಗುತ್ತಿದೆ. ಆದರೆ ನದಿ ತೀರದ ಜಮೀನುಗಳಲ್ಲಿ ಬೆಳೆಗಳು ಕೊಳೆಯುತ್ತಿದ್ದು, ರೈತರು ಅಪಾರ ಹಾನಿ ಅನುಭವಿಸುವಂತಾಗಿದೆ.

ಹಾವೇರಿ: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದು ವರದಾ, ತುಂಗಭದ್ರಾ ನದಿಗಳಲ್ಲಿ ನೀರಿನ ಹರಿವು ಕೂಡ ಇಳಿಕೆಯಾಗುತ್ತಿದೆ. ಆದರೆ ನದಿ ತೀರದ ಜಮೀನುಗಳಲ್ಲಿ ಬೆಳೆಗಳು ಕೊಳೆಯುತ್ತಿದ್ದು, ರೈತರು ಅಪಾರ ಹಾನಿ ಅನುಭವಿಸುವಂತಾಗಿದೆ.ಜಿಲ್ಲೆಯಲ್ಲಿ ನದಿಗಳ ಪ್ರವಾಹ ಪರಿಸ್ಥಿತಿಯಿಂದ ೩೩೦೪ ಹೆಕ್ಟೇರ್ ಕೃಷಿ ಬೆಳೆ ಹಾಗೂ ೨೨೩ ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿದೆ. ತುಂಗಭದ್ರಾ, ವರದಾ, ಕುಮದ್ವತಿ, ಧರ್ಮಾ ನದಿಗಳಲ್ಲಿ ನೀರಿನ ಹರಿವು ಇಳಿಕೆಯಾಗಿದ್ದು, ಕೆಲವು ಭಾಗದಲ್ಲಿ ಜಲಾವೃತಗೊಂಡಿದ್ದ ಬೆಳೆಗಳು ಕೊಳೆಯತೊಡಗಿವೆ. ೧೭೮೧ ಹೆಕ್ಟೇರ್ ಮೆಕ್ಕೆಜೋಳ, ೩೩೪ ಹೆಕ್ಟೇರ್ ಶೇಂಗಾ, ೫೬೯ ಹೆಕ್ಟೇರ್ ಸೋಯಾಬಿನ್, ೪೬೫ ಹೆಕ್ಟೇರ್ ಹತ್ತಿ, ೩೫ ಹೆಕ್ಟೇರ್ ಹೆಸರು, ೧೨೦ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಹುರುಳಿ, ಅವರೆ ಸೇರಿದಂತೆ ೩೩೦೪ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇನ್ನೂ ಹಲವು ಗ್ರಾಮಗಳ ಹೊಲದಲ್ಲಿ ನದಿ ನೀರು ತುಂಬಿ ನಿಂತಿದೆ. ಇನ್ನೂ ಹೆಚ್ಚಿನ ಬೆಳೆ ಹಾನಿಯಾಗುವ ಸಾಧ್ಯತೆಯಿದೆ. ತೋಟಗಾರಿಕೆ ಬೆಳೆಗಳಿಗೂ ಹಾನಿಯಾಗಿದ್ದು ೯.೧೮ ಹೆಕ್ಟೇರ್ ಬಾಳೆ, ೨ ಹೆಕ್ಟೇರ್ ಬೆಳ್ಳುಳ್ಳಿ, ೨.೬೦ ಹೆಕ್ಟೇರ್ ಹಾಗಲಕಾಯಿ, ೧೧೬ ಹೆಕ್ಟೇರ್ ಮೆಣಸಿನಕಾಯಿ, ೧೭.೩೦ ಹೆಕ್ಟೇರ್ ಕ್ಯಾಬೀಜ್, ೭.೬೦ ಹೆಕ್ಟೇರ್ ಎಲೆಬಳ್ಳಿ ತೋಟ, ೧೨.೨೮ ಹೆಕ್ಟೇರ್ ಟೋಮೆಟೋ, ೧೭.೯೬ ಹೆಕ್ಟೇರ್ ತರಕಾರಿ ಬೆಳೆಗಳು ಸೇರಿ ಒಟ್ಟು ೫೨೬ ರೈತರ ೨೨೩.೭೯ ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.೧೧೩೭ ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ಮುಂಗಾರು ಮಳೆಗೆ ೧೧೩೭ ಮನೆಗಳು ಧರೆಗುರುಳಿವೆ. ಮಳೆಯಿಂದ ತೇವಗೊಂಡ ಗೋಡೆ, ಚಾವಣಿಗಳು ಬೀಳುತ್ತಲೇ ಇವೆ. ಶನಿವಾರ ೧೭೫ ಮನೆ ಭಾಗಶಃ ಹಾನಿಯಾದ ಬಗ್ಗೆ ವರದಿಯಾಗಿದೆ. ಮುಂಗಾರು ಹಂಗಾಮಿನಲ್ಲಿ ಇದುವರೆಗೆ ೧೧೩೭ ಮನೆಗಳಿಗೆ ಹಾನಿಯಾಗಿದ್ದು, ೧೦ ದನದ ಕೊಟ್ಟಿಗೆಗಳು ಹಾನಿಗೀಡಾಗಿವೆ.

Share this article