ಕೈದಿಗಳಿಗೆ ರಾಜಾತಿಥ್ಯ, ಗೃಹ ಸಚಿವ ಜವಾಬ್ದಾರಿ ಹೊರಲಿ: ಜನಾರ್ದನ ರೆಡ್ಡಿ

KannadaprabhaNewsNetwork |  
Published : Nov 11, 2025, 02:45 AM IST
10ಉಳಉ10 | Kannada Prabha

ಸಾರಾಂಶ

ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ಮಾಹಿತಿ ಬಹಿರಂಗವಾಗಿದ್ದು, ಸರ್ಕಾರ ನಗೆಪಾಟಿಲಿಗೆ ಈಡಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಗಂಗಾವತಿ: ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ಮಾಹಿತಿ ಬಹಿರಂಗವಾಗಿದ್ದು, ಸರ್ಕಾರ ನಗೆಪಾಟಿಲಿಗೆ ಈಡಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ತಾಲೂಕಿನ ಅಂಜನಾದ್ರಿ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರದಲ್ಲಿ ಇಂತಹ ಘಟನೆಗಳು ಹೊಸದೇನಲ್ಲ, ಅಲ್ಲಿ ಪದೇ ಪದೇ ನಡೆಯುತ್ತದೆ. ಸರ್ಕಾರ ಕಟ್ಟುನಿಟ್ಟಿನ ಕ್ರಮ ಇಲ್ಲ. ಇಷ್ಟೆಲ್ಲ ಮಾಹಿತಿ ಬಹಿರಂಗವಾಗಿದ್ದರೂ ಗೃಹಸಚಿವರಿಗೆ ನಾಚಿಕೆ ಬರುತ್ತದೆಯೋ ಇಲ್ಲವೋ ಎನ್ನುವಂತಾಗಿದೆ ಎಂದರು.

ಈ ಹಿಂದೆ ನಾನು ಕೂಡಾ ಜೈಲಲ್ಲಿದ್ದ ಸಂದರ್ಭದಲ್ಲಿ ಅಲ್ಲಿ ಯಾವ ರೀತಿ ಇರಬೇಕು, ನಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ಗೊತ್ತಿತ್ತು. ನಾನು ಬಂಧನಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ದಿನ ನಿತ್ಯ ರಾಮಾಯಣ, ಮಹಾಭಾರತ ಗ್ರಂಥ ಓದುತ್ತಿದ್ದೆ. ನನ್ನ ಕುಟುಂಬಸ್ಥರನ್ನು ಮಾತ್ರ ಭೇಟಿಯಾಗುತ್ತಿದೆ ಎಂದರು.

ಚಿತ್ರನಟ ದರ್ಶನ ವಿಚಾರದಲ್ಲಿ 13 ಅಧಿಕಾರಿಗಳು ಸಸ್ಪೆಂಡ್ ಆಗಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಇಂತಹ ಪ್ರಕರಣವನ್ನು ಸರ್ಕಾರ ಗಮನಿಸುತ್ತಿಲ್ಲ. ಪರಪ್ಪನ ಅಗ್ರಹಾರ ಪ್ರಕರಣದ ಜವಾಬ್ದಾರಿಯನ್ನು ಗೃಹಸಚಿವರು ಹೊರಬೇಕು ಎಂದರು.

ಪೊಲೀಸ್‌ ಠಾಣೆ ನಿರ್ಲಕ್ಷ್ಯ: ತಾಲೂಕಿನ ಆನೆಗೊಂದಿಯಲ್ಲಿ ಪೊಲೀಸ್ ಠಾಣೆ ನಿರ್ಮಿಸುವಂತೆ ಕೋರಿದರೆ ಸರ್ಕಾರ ನಿರ್ಲಕ್ಷ್ಯವಹಿಸಿದೆ. ಈ ಪ್ರದೇಶದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ಇದೆ ಎಂದು ಸರ್ಕಾರ ಹಿಂಬರಹ ನೀಡಿದೆ. ಈ ಕಾರಣಕ್ಕೆ ರದ್ದು ಮಾಡಿದೆ ಎಂದರು.

ಕೆಲವು ತಿಂಗಳ ಹಿಂದೆ ಆನೆಗೊಂದಿ, ಅಂಜನಾದ್ರಿ ಪ್ರದೇಶದಲ್ಲಿ ವಿದೇಶಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ಆಗಿದೆ. ವಿದೇಶಿ ಪ್ರಜೆಯನ್ನು ಕೊಲೆ ಮಾಡಿ ತುಂಗಭದ್ರಾ ಕಾಲುವೆಗೆ ತಳ್ಳಿದಂತಹ ಅಪರಾಧ ಈ ಪ್ರದೇಶದಲ್ಲಿ ನಡೆದಿದೆ. ದೇಶ, ವಿದೇಶಿ ಪ್ರವಾಸಿಗರು ಬರುವ ಈ ಪ್ರದೇಶದಲ್ಲಿ ದೌರ್ಜನ್ಯ, ಅತ್ಯಾಚಾರ, ಕಳ್ಳತನದಂತಹ ಅಪರಾಧಗಳು ನಿರಂತರವಾಗಿ ನಡೆದು ವಿದೇಶ ಮಟ್ಟದಲ್ಲಿ ಹರಾಜು ಆಗುತ್ತಿದ್ದರೂ ಸರ್ಕಾರ ಮೌನ ವಹಿಸಿದೆ ಎಂದರು.

ಸಿಎಂ- ಡಿಸಿಎಂಗೆ 50-50 ಅಧಿಕಾರ ಹಂಚಿಕೆ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನವೆಂಬರ್‌ ತಿಂಗಳಲ್ಲಿ ಕ್ರಾಂತಿ ನಡೆಯುತ್ತದೆ ಎಂದು ಹೇಳಿದ್ದೆ. ಅದರಂತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಅವರ ಅಧಿಕಾರ 50-50 ಅನುಪಾತದಲ್ಲಿ ಹಂಚಿಕೆಯಾಗಿದೆ ಎಂದು ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದರು.

ಏರ್ಪೋರ್ಟ್‌ನಲ್ಲಿ ನಮಾಜ್ ಮಾಡಿರುವುದು ದುರದೃಷ್ಟಕರ. ಇಂಟರ್ ನ್ಯಾಷನಲ್ ಏರ್ಪೋರ್ಟ್‌ನಲ್ಲಿ ಬಹಿರಂಗವಾಗಿ ನಮಾಜ್ ಮಾಡಿದ್ದಾರೆ. ಇದು ಇಡೀ ಕರ್ನಾಟಕ ಸರ್ಕಾರ ತಲೆ ತಗ್ಗಿಸುವ ವಿಚಾರವಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಅಕ್ರೋಶ ವ್ಯಕ್ತ ಪಡಿಸಿದರು.

ಆರ್‌ಎಸ್‌ಎಸ್‌ ಎಂದರೆ ದೇಶಭಕ್ತಿ, ಸಂಸ್ಕಾರ ಕಲಿಸುವ ಸಂಘಟನೆಯಾಗಿದೆ. ಈ ಸಂಘಟನೆ ಕುರಿತು ಯಾರಿಗೂ ಮಾತನಾಡುವ ಹಕ್ಕಿಲ್ಲ. ತೆಲಂಗಾಣ ಮುಖ್ಯಮಂತ್ರಿ ಕಾಂಗ್ರೆಸ್ ಅಂದ್ರೆ ಮುಸ್ಲಿಂ, ಮುಸ್ಲಿಂ ಅಂದ್ರೆ ಕಾಂಗ್ರೆಸ್ ಎಂದಿರುವುದು ಕಾಂಗ್ರೆಸ್ ಸಂಸ್ಕೃತಿಯೇ ಎಂದು ಜನಾರ್ದನ ರೆಡ್ಡಿ ಕಿಡಿ ಕಾರಿದರು.

PREV

Recommended Stories

ಎಸ್ಸಿಎಸ್ಪಿ, ಟಿಎಸ್ಪಿ ಅನುದಾನ ಪೂರ್ಣಪ್ರಮಾಣದಲ್ಲಿ ವ್ಯಯಿಸಿ: ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ
ಕನಕಗಿರಿ ತಾಲೂಕಿನ 13 ಕೆರೆ ಭರ್ತಿ ಮಾಡಲು ಒತ್ತಾಯ, ರೈತರ ಪ್ರತಿಭಟನೆ