ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ ಮಾರ್ಚ್-16 ರಿಂದ ಮೇ-15 ರವರೆಗೆ ಪ್ರತಿ ಲೀಟರ್ ಹಾಲಿಗೆ ಒಂದು ರೂ ಪ್ರೋತ್ಸಾಹ ದನ ನೀಡುತ್ತಿದ್ದು ರಾಜ್ಯದಲ್ಲೇ ಅತಿ ಹೆಚ್ಚಿನ ಬೆಲೆಗೆ ಹಾಲು ಉತ್ಪಾದಕರಿಂದ ಖರೀದಿ ಮಾಡುತ್ತಿರುವ ಎರಡನೇ ಹಾಲು ಒಕ್ಕೂಟವಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ತಾಲೂಕಿನ ನಂದಿ ಕ್ರಾಸ್ ಬಳಿಯ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, , ಬೇಸಿಗೆ ಕಾಲವನ್ನು ಗಮನದಲ್ಲಿರಿಸಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು, ಹೈನೋದ್ಯಮದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಸಲುವಾಗಿ ಉತ್ಪಾದಕರಿಂದ ಖರೀದಿಸುವ ಹಾಲಿನ ಖರೀದಿ ಧರ ಒಂದು ರು.ಗಳನ್ನು ಹೆಚ್ಚಿಸಿ ಎರಡು ತಿಂಗಳ ಅವಧಿಗೆ ಧರ ಪರಿಷ್ಕರಿಸಿ ತೀರ್ಮಾನಿಸಲಾಗಿದೆ ಎಂದರು.
ರಿಯಾಯಿತಿ ಧರದಲ್ಲಿ ಮೇವಿನ ಬೀಜ
ನೀರಾವರಿ ಸೌಲಭ್ಯವುಳ್ಳ ರೈತರಿಗೆ ರಿಯಾಯಿತಿ ಧರದಲ್ಲಿ ಮೇವಿನ ಬೀಜಗಳನ್ನು ವಿತರಿಸಿ ಸುಮಾರು 1500 ಎಕರೆ ಪ್ರದೇಶದಲ್ಲಿ ಹಸಿರು ಮೇವು ಬೆಳೆಸಲು ಪ್ರತೀ ಎಕರೆಗೆ ರೂ.3500ರಂತೆ ಅಂದಾಜು ರೂ.52.50 ಲಕ್ಷಗಳ ಪ್ರೋತ್ಸಾಹ ಧನ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಶೇ.50 ಧರದಲ್ಲಿ ಉತ್ಪಾದಕರಿಗೆ 1000 ಕ್ವಿಂಟಾಲ್ ಎಟಿಎಂ ಜೋಳ, 1000 ಕ್ವಿಂಟಾಲ್ ಎಸ್‌ಎಸ್‌ಜಿ, 100 ಕ್ವಿಂಟಾಲ್ ಅಲಸಂಧಿ ಬೀಜಗಳ ವಿತರಣೆಗೆ ಕ್ರಮ ಮಾಡಲಾಗುತ್ತಿದೆ ಎಂದರು.
ಒಕ್ಕೂಟದ ವಿಭಜನೆಯ ನಂತರ ಹಾಲು ಉತ್ಪಾದಕರಿಗೆ ವಿಳಂಭವಾಗದೆ ಸಕಾಲಕ್ಕೆ ಬಟವಾಡೆಯನ್ನು ಪಾವತಿಮಾಡಲಾಗುತ್ತಿದೆ. ಒಕ್ಕೂಟ ವ್ಯಾಪ್ತಿಯ 985 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪ್ರಸ್ತುತ 687 ಸಂಘಗಳಿಗೆ ಎ.ಎಂ.ಸಿ.ಯು ಇದ್ದು, ಉಳಿದ 300 ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಎ.ಎಂ.ಸಿ.ಯುಗಳನ್ನು ಅಳವಡಿಸಿ ಎನ್ ಡಿಡಿಬಿ ರವರು ಅಭಿವೃದ್ಧಿಪಡಿಸಿರುವ ತಂತ್ರಾಂಶವನ್ನು ಅಳವಡಿಸಲು ಅಂದಾಜು ವೆಚ್ಚ ರೂ.6.0 ಕೋಟಿಗಳಲ್ಲಿ ಕ್ರಮ ವಹಿಸಲಾಗುವುದು ಎಂದರು.
ತಿಂಗಳಿಗೆ ₹10 ಲಕ್ಷ ಉಳಿತಾಯ
ಚಿಂತಾಮಣಿ ಶೀತಲ ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ನೂತನ ಐಸ್‌ಕ್ರೀಂ ಘಟಕದ ರೆಫ್ರಿಜಿರೇಷನ್ ಇ-ಟೆಂಡರ್‌ನಲ್ಲಿ ಎಲ್-1 ಗುತ್ತಿಗೆದಾರರೊಂದಿಗೆ ಧರ ಸಂಧಾನ ನಡೆಸಿ ರೂ.36.0 ಲಕ್ಷಗಳ ಉಳಿತಾಯ ಸೇರಿದಂತೆ ಅಂದಾಜು ರೂ.10.0 ಲಕ್ಷಗಳು ಉಳಿತಾಯ ಮಾಡುತ್ತಿದ್ದೆವೆ ಎಂದರು
₹141 ಕೋಟಿ ಹಗರಣ:
ಡಿಸಿಸಿ ಬ್ಯಾಂಕ್ ಭ್ರಷ್ಟಾಚಾರ ಕುರಿತು ಪ್ರಸ್ತಾಪಿಸಿದ ಸಚಿವರು, ಜಿಲ್ಲೆಯಲ್ಲಿ ಬೇನಾಮಿ ಸಂಘಗಳ ಹೆಸರಿನಲ್ಲಿ ಹಣ ಡ್ರಾ ಆಗಿದೆ. ಎನ್.ಆರ್.ಎಲ್.ಎಂ. ನಲ್ಲಿ ಮಹಿಳಾ ಸಂಘಗಳ ಪಟ್ಟಿ ಇರತ್ತೆ. ಇದ್ಯಾವುದನ್ನೂ ಪರಿಶೀಲನೆ ಮಾಡಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು, ಹಣ ಎಲ್ಲಿಗೆ ಹೋಯ್ತು ಯಾರಿಗೆ ಹೋಯ್ತು. ಅದಕ್ಕೆ ಕೆಲವರು ಸಾಲ ಮನ್ನಾ ಮಾಡಿಸಬೇಕು ಅಂತ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ರು. ನಮ್ಮ ಚಿಂತಾಮಣಿ ತಾಲೂಕಿನಲ್ಲೇ 140 ಕೋಟಿ ಹಗರಣ ಆಗಿದೆ ಎಂದರು.
ಈ ವೇಳೆ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿ.ಪಂ.ಸಿಇಓ ಪ್ರಕಾಶ್.ಜಿ.ಟಿ.ನಿಟ್ಟಾಲಿ, ಉಪವಿಭಾಘಾಧಿಖಾರಿ ಹಾಗೂ ಚಿಮುಲ್ ಆಡಳಿತಾಧಿಕಾರಿ ಡಿ.ಹೆಚ್.ಅಶ್ವಿನ್,ಚಿಮೂಲ್ ಎಂಡಿ ಶ್ರೀನಿವಾಸರೆಡ್ಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ,ಚಿಮೂಲ್ ಸಿಬ್ಬಂಧಿ ಮತ್ತಿತರರು ಇದ್ದರು.