ಕನ್ನಡಪ್ರಭ ವಾರ್ತೆ ಪಾವಗಡ
ರಾಜ್ಯದ ಗಡಿ ಗ್ರಾಮಗಳ ಕನ್ನಡ ಭಾಷೆ ಶಾಲೆಗಳ ಪ್ರಗತಿ ಹಾಗೂ ಮೂಲಭೂತ ಸೌಲಭ್ಯಕ್ಕಾಗಿ 200 ಕೋಟಿ ರು. ಅನುದಾನದ ಪ್ರಸ್ತಾವನೆಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ ತಿಳಿಸಿದರು.ಶನಿವಾರ ತಾಲೂಕಿನ ಕನ್ನಮೇಡಿ ಗ್ರಾಮದ ಪಂಚವಟಿ ಗ್ರಾಮಾಂತರ ಪ್ರೌಢಶಾಲೆಗೆ ಭೇಟಿ ನೀಡಿ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 30 ಲಕ್ಷ ರು. ವೆಚ್ಚದ ನೂತನ ಶಾಲಾ ಕಟ್ಟಡಗಳ ಕಾಮಗಾರಿಯ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಗಡಿ ಪ್ರದೇಶದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಹೆಚ್ಚು ಒತ್ತು ನೀಡಿದ್ದು, ಇಲ್ಲಿನ ಕನ್ನಡ ಶಾಲೆಗಳ ಪ್ರಗತಿಗೆ ವಿಶೇಷ ಕಾಳಜಿ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿನ ಅಭಿವೃದ್ಧಿ ಮತ್ತು ಮೂಲ ಸೌಕರ್ಯಕ್ಕಾಗಿ ಈಗಾಗಲೇ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ 200 ಕೋಟಿ ರು. ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.ಗಡಿ ಪ್ರದೇಶದ ಕನ್ನಡ ಶಾಲೆಗಳ ನೂತನ ಕಟ್ಟಡ ನಿರ್ಮಾಣಕ್ಕೆ ತಲಾ 30 ಲಕ್ಷ ರು.ದಂತೆ ಎರಡು ಗ್ರಾಮಗಳ ಶಾಲೆಗಳಿಗೆ 60 ಲಕ್ಷ ರು.ಗಳ ಅನುದಾನ ಕಲ್ಪಿಸಿದ್ದ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಗತಿ ಕುರಿತು ತಾಲೂಕಿನ ಕನ್ನಮೇಡಿ ಮತ್ತು ಕ್ಯಾತಗಾನಹಳ್ಳಿ ಶ್ರೀ ಮಂಜುನಾಥ ಗ್ರಾಮಾಂತರ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಶಾಲಾ ಕಟ್ಟಡ ಕಾಮಗಾರಿ ತೃಪ್ತಿದಾಯಕವಾಗಿರುವುದಾಗಿ ಹೇಳಿದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಗಿರಿಜಾ ಮಾತನಾಡಿ, ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರಾಥಮಿಕ ಪ್ರೌಢಶಾಲಾ ಹಂತದ ಶಾಲೆಗಳು ಅಭಿವೃದ್ಧಿ ಕಾಣಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಅಸಕ್ತಿ ವಹಿಸಿ ಆದ್ಯತೆ ನೀಡುತ್ತಿದೆ ಎಂದರು.ಮುಖ್ಯ ಶಿಕ್ಷಕ ವೀರ್ಲಗೊಂದಿ ಗಂಗಯ್ಯ ಮಾತನಾಡಿ, ಗ್ರಾಮೀಣ ಪ್ರೌಢಶಾಲೆಗಳಲ್ಲಿ ಕನಿಷ್ಠ 25 ಮಂದಿ ಮಕ್ಕಳಿರಬೇಕೆಂಬ ನಿಯಮ ಜಾರಿಯಿಂದ ಸಮಸ್ಯೆ ಆಗುತ್ತಿದೆ. ಕೆಲವೊಮ್ಮೆ ಮೇಲಾಧಿಕಾರಿಗಳು ದಿಢೀರ್ ಭೇಟಿ ನೀಡಿದಾಗ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುತ್ತದೆ. ಅದನ್ನೇ ನೆಪ ಮಾಡಿ ನೋಟಿಸ್ ನೀಡುತ್ತಾರೆ. ಇದರಿಂದ ತೀವ್ರ ಆತಂಕ ಎದುರಾಗಿದೆ. ಮಕ್ಕಳ ಹಾಜರಾತಿ ಕುರಿತು ಸಡಿಲ ಕ್ರಮವಹಿಸುವಂತೆ ಸರ್ಕಾರದ ಗಮನ ಸೆಳೆಯಲು ಅಧ್ಯಕ್ಷರಿಗೆ ಮನವಿ ಮಾಡಿದರು.
ಪ್ರತಿವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಶೇ,100ರಷ್ಟು ಫಲಿತಾಂಶ ಹೊರಬರುತ್ತಿರುವ ಹಾಗೂ ಕಾಂಪೌಂಡ್‌ನಲ್ಲಿ ಮರಗಿಡಗಳ ಸಂರಕ್ಷಣೆ ಹಾಗೂ ಸುಸಜ್ಜಿತವಾದ ಮಾದರಿ ಶಾಲೆಯಾಗಿ ಪ್ರಗತಿ ಕಾಣುತ್ತಿದ್ದ ಹಿನ್ನೆಲೆಯಲ್ಲಿ ಕನ್ನಮೇಡಿ ಪಂಚವಟಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಂಗಯ್ಯರ ಸೇವೆ ಕುರಿತು ಪ್ರಾಧಿಕಾರದ ಅಧ್ಯಕ್ಷರು ಪ್ರಶಂಸಿಸಿ ಸನ್ಮಾನ ಮಾಡಿದರು.ತಹಸೀಲ್ದಾರ್ ಡಿ.ಎನ್ ವರದರಾಜು,ಸಿಪಿಐ ಸುರೇಶ್ ಹಾಗೂ ಪಂಚವಟಿ ಪ್ರೌಢಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.