ಮಿಮ್ಸ್ ಆಸ್ಪತ್ರೆ ಅಭಿವೃದ್ಧಿಗೆ ಕೈತಪ್ಪಿದ ೩೦ ಕೋಟಿ ರು...!

KannadaprabhaNewsNetwork |  
Published : Jun 28, 2025, 12:28 AM IST
ಮಿಮ್ಸ್ ಆಸ್ಪತ್ರೆ | Kannada Prabha

ಸಾರಾಂಶ

ಆಸ್ಪತ್ರೆ ಜಾಗದಲ್ಲಿರುವ ತಮಿಳು ನಿವಾಸಿಗಳ ಸ್ಥಳಾಂತರಗೊಳಿಸುವ ವಿಚಾರ ಮುನ್ನೆಲೆಗೆ ಬಂದಿರುವ ಸಮಯದಲ್ಲೇ ಎಂಟು ವರ್ಷಗಳ ಹಿಂದೆ ಮಿಮ್ಸ್ ಆಸ್ಪತ್ರೆ ಅಭಿವೃದ್ಧಿಗೆ ಸರ್ಕಾರದಿಂದ ಬಿಡುಗಡೆಯಾಗಬೇಕಿದ್ದ ೩೦ ಕೋಟಿ ರು. ಹಣ ಕೈತಪ್ಪಿ ಹೋದ ಸಂಗತಿ ಮಹತ್ವ ಪಡೆದುಕೊಂಡಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಆಸ್ಪತ್ರೆ ಜಾಗದಲ್ಲಿರುವ ತಮಿಳು ನಿವಾಸಿಗಳ ಸ್ಥಳಾಂತರಗೊಳಿಸುವ ವಿಚಾರ ಮುನ್ನೆಲೆಗೆ ಬಂದಿರುವ ಸಮಯದಲ್ಲೇ ಎಂಟು ವರ್ಷಗಳ ಹಿಂದೆ ಮಿಮ್ಸ್ ಆಸ್ಪತ್ರೆ ಅಭಿವೃದ್ಧಿಗೆ ಸರ್ಕಾರದಿಂದ ಬಿಡುಗಡೆಯಾಗಬೇಕಿದ್ದ ೩೦ ಕೋಟಿ ರು. ಹಣ ಕೈತಪ್ಪಿ ಹೋದ ಸಂಗತಿ ಮಹತ್ವ ಪಡೆದುಕೊಂಡಿದೆ.

ತಮಿಳು ನಿವಾಸಿಗಳು ಈಗಿರುವ ಸ್ಥಳದಲ್ಲೇ ಉಳಿಯಲು ಅವಕಾಶ ನೀಡುವಂತೆ ಒತ್ತಾಯಿಸುತ್ತಿದ್ದರೆ, ಇನ್ನೊಂದೆಡೆ ಅವರಿಗಾಗಿ ನಿರ್ಮಿಸಿರುವ ಮನೆಗಳಿಗೆ ಅನ್ಯಧರ್ಮೀಯರು ಅತಿಕ್ರಮ ಪ್ರವೇಶ ಮಾಡಿದ್ದರು. ಇದರ ನಡುವೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಎಲ್ಲರೂ ನ್ಯಾಯಾಲಯದತ್ತ ಚಿತ್ತ ಹರಿಸುವಂತೆ ಮಾಡಿದೆ.

ಈಗಾಗಲೇ ಸ್ಥಳಾವಕಾಶದ ಕೊರತೆಯಿಂದ ತಾಯಿ-ಮಗುವಿನ ಆಸ್ಪತ್ರೆ ೮ ಕಿ.ಮೀ. ದೂರದಲ್ಲಿರುವ ಬಿ.ಹೊಸೂರು ಕಾಲೋನಿಯಲ್ಲಿ ನಿರ್ಮಿಸಲಾಗಿದೆ. ತಮಿಳು ನಿವಾಸಿಗಳು ಸ್ಥಳಾಂತರಗೊಳ್ಳುವುದರಿಂದ ಆಸ್ಪತ್ರೆಗೆ ವಿಶಾಲವಾದ ಜಾಗ ದೊರೆಯುವುದರ ಜೊತೆಗೆ ಆಸ್ಪತ್ರೆ ಮೇಲ್ದರ್ಜೆಗೇರಿಸುವುದಕ್ಕೆ ಅನುಕೂಲವಾಗಲಿದೆ. ಇದರಿಂದ ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿ ನಿವಾಸಿಗಳ ಸ್ಥಳಾಂತರ ಮಾಡುವುದು ಅನಿವಾರ್ಯ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ.

೨೦೧೮-೧೯ನೇ ಸಾಲಿನ ಆಯವ್ಯಯದಲ್ಲಿ ಮಿಮ್ಸ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ೨೦ ಕೋಟಿ ರು.ಗಳ ಸಿವಿಲ್ ಕಾಮಗಾರಿ, ೧೦ ಕೋಟಿ ರು. ಮೊತ್ತದ ಪೀಠೋಪಕರಣ, ಉಪಕರಣ ಖರೀದಿಯ ಮೊತ್ತದೊಂದಿಗೆ ೩೦ ಕೋಟಿ ರು. ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯವನ್ನು ೫೫೦ ರಿಂದ ೮೦೦ ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸುವುದು, ಮೈನರ್ ಓಟಿ, ಮೊಬೈಲ್ ಸಿ.ಟಿ ಸ್ಕ್ಯಾನ್, ಎಕ್ಸ್‌ರೇ, ತಲಾ ೩೦ ಹಾಸಿಗೆ ಸಾಮರ್ಥ್ಯವಿರುವ ಪುರುಷ-ಮಹಿಳೆಯರ ವಾರ್ಡ್, ೧೦ ಐಸಿಯು, ೧೫ ಸರ್ಜಿಕಲ್ ಐಸಿಯು, ಒಟಿ ಕಾಂಪ್ಲೆಕ್ಸ್ ಮುಂತಾದ ಸೌಲಭ್ಯಗಳೊಂದಿಗೆ ಟ್ರಾಮಾ ಕೇರ್ ಕೇಂದ್ರ ಆರಂಭಿಸಲು ಯೋಜನೆ ರೂಪುಗೊಂಡಿತ್ತು.

ಈ ಪ್ರಸ್ತಾವನೆಯನ್ನು ಪುರಸ್ಕರಿಸಿದ ಅಂದಿನ ರಾಜ್ಯ ಸರ್ಕಾರ ಬೋಧಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಸಂಬಂಧ ಸಿವಿಲ್ ಕಾಮಗಾರಿಗಳನ್ನು ಕೈಗೊಳ್ಳಲು ೧೦ ಕೋಟಿ ರು.ಗಳನ್ನು ಮೊದಲ ಹಂತದಲ್ಲಿ ಬಿಡುಗಡೆಗೊಳಿಸಿತ್ತು.

ಆದರೆ, ಮಿಮ್ಸ್ ಆಸ್ಪತ್ರೆ ಆವರಣದಲ್ಲಿ ಜಾಗದ ಕೊರತೆಯಿಂದ ಸಿವಿಲ್ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ಆಗ ಹೈಕೋರ್ಟ್ ನೀಡಿದ್ದ ಆದೇಶದಂತೆ ಕೊಳಚೆ ನಿರ್ಮೂಲನಾ ಮಂಡಳಿಯವರು ಆಸ್ಪತ್ರೆ ಜಾಗದಲ್ಲಿ ವಾಸವಿದ್ದ ತಮಿಳು ನಿವಾಸಿಗಳನ್ನು ತೆರವುಗೊಳಿಸಲು ಮುಂದಾಗಲಿಲ್ಲ. ಇದರಿಂದ ಹೊಸ ಯೋಜನೆ, ಕಾಮಗಾರಿಗಳ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಬಿಡುಗಡೆ ಮಾಡಲಾದ ೧೦ ಕೋಟಿ ರು. ಹಣವನ್ನು ಇದುವರೆಗೂ ವೆಚ್ಚ ಮಾಡಲು ಸಾಧ್ಯವಾಗಿಲ್ಲ ಎಂದು ಮಿಮ್ಸ್ ಆಸ್ಪತ್ರೆ ನಿರ್ದೇಶಕರು ತಿಳಿಸಿದ್ದರು.

ಈ ವರ್ಷದ ಆರಂಭದಲ್ಲಿ ಆಸ್ಪತ್ರೆಯಲ್ಲಿ ಸಿಎಸ್‌ಎಸ್‌ಡಿ ಘಟಕ ಸ್ಥಾಪಿಸುವ ಕುರಿತು ಸಿವಿಲ್ ಕಾಮಗಾರಿ ಮತ್ತು ಉಪಕರಣಗಳನ್ನೊಳಗೊಂಡಂತೆ ಟರ್ನ್ ಕೀ ಆಧಾರದಲ್ಲಿ ೧೦ ಕೋಟಿ ರು.ನಲ್ಲಿ ನಿರ್ವಹಿಸುವ ಪ್ರಸ್ತಾವನೆಗೆ ಆರ್ಥಿಕ ಮಿತಿ ಸಭೆಯಲ್ಲಿ ಅನುಮೋದನೆ ನೀಡಿದ ಮೇರೆಗೆ ಮೈಸೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್ ವಿಭಾಗ ನೀಡಿರುವ ಅಂದಾಜು ಪಟ್ಟಿಯಂತೆ ಸಿವಿಲ್ ಕಾಮಗಾರಿಗೆ ೧.೩೦ ಕೋಟಿ ರು., ಉಪಕರಣ-ಪೀಠೋಪಕರಣಗಳಿಗೆ ೮.೬೬ ಕೋಟಿ ರು. ಸೇರಿ ೯.೯೬ ಕೋಟಿ ರು.ಗಳಲ್ಲಿ ಸಿಎಸ್‌ಡಿ ಘಟಕವನ್ನು ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆಗೆ ೧೫ ಜನವರಿ ೨೦೨೫ರಲ್ಲಿ ಕಳುಹಿಸಲಾಗಿದೆ.

ಎಂಸಿಐ ನಿಯಮಗಳನ್ವಯ ೧೫೦ ಎಂಬಿಬಿಎಸ್ ಪ್ರವೇಶಮಿತಿಗೆ ಅನುಗುಣವಾಗಿ ಈ ವೈದ್ಯಕೀಯ ಕಾಲೇಜು ೭೫೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಹೊಂದಬೇಕಿದೆ. ರೋಗಿಗಳಿಗೆ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಚಿಕಿತ್ಸೆಗಳನ್ನು ಒದಗಿಸಲು ಅಗತ್ಯವಿರುವ ಸೌಲಭ್ಯ ಅಳವಡಿಸಿಕೊಳ್ಳಬೇಕಿದೆ. ಈಗಿರುವ ಸ್ಥಿತಿಯಲ್ಲಿ ರೋಗಿಗಳಿಗೆ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಚಿಕಿತ್ಸೆ ಒದಗಿಸುವುದು ಕಷ್ಟಕರವಾಗಿದ್ದು, ಆಸ್ಪತ್ರೆಯನ್ನು ೫೫೦ ಹಾಸಿಗೆಗಳ ಸಾಮರ್ಥ್ಯದಿಂದ ೮೦೦ ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸುವುದು ಅವಶ್ಯಕವಾಗಿದೆ.

ಮಿಮ್ಸ್ ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡು ಮೇಲ್ದರ್ಜೆಗೇರಬೇಕಾದರೆ ಆಸ್ಪತ್ರೆ ಜಾಗದ ಅವಶ್ಯಕತೆ ಇದೆ. ಅದಕ್ಕಾಗಿ ತಮಿಳು ನಿವಾಸಿಗಳ ಸ್ಥಳಾಂತರ ಅತ್ಯವಶ್ಯವಾಗಿದ್ದು, ಇದಕ್ಕಾಗಿ ಹಲವರು ಕಾನೂನಾತ್ಮಕ ಹೋರಾಟ ನಡೆಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆಗೆ ಬರಲಿದ್ದು, ತೀರ್ಪಿನ ಕಡೆ ಎಲ್ಲರ ಚಿತ್ತ ಹರಿದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ