ಜಿಲ್ಲೆಯ ಮಂದಿರಗಳ ಜೀರ್ಣೋದ್ಧಾರಕ್ಕೆ 80 ಲಕ್ಷ‌ ರು. ನೆರವು: ಜಿಲ್ಲಾಧ್ಯಕ್ಷ ಗಾದಗಿ

KannadaprabhaNewsNetwork |  
Published : Nov 05, 2026, 01:30 AM IST
ಚಿತ್ರ 4ಬಿಡಿಆರ್‌1ವಿರುಪಾಕ್ಷ ಗಾದಗಿ | Kannada Prabha

ಸಾರಾಂಶ

ಧರ್ಮಸ್ಥಳ ಸಂಸ್ಥೆಯು ಯಾವುದೇ ಕ್ಷೇತ್ರ ಬಿಡದಂತೆ ಸರ್ವರ ಹಿತ, ಸಮಗ್ರ ವಿಕಾಸದ ಗುರಿಯೊಂದಿಗೆ ಈ ಸಂಸ್ಥೆ ಸರ್ಕಾರ ಮಾಡದಂಥ ಕೆಲಸಗಳನ್ನು ಮಾಡುತ್ತಿದೆ ಎಂದು ಗಾದಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದು, ಜಿಲ್ಲೆಯ ಧಾರ್ಮಿಕ ಸ್ಥಳಗಳ ಅಭಿವೃದ್ಧಿ, ಜೀರ್ಣೋದ್ಧಾರಕ್ಕಾಗಿ ಸುಮಾರು 80 ಲಕ್ಷ ರು.ಗಳ ನೆರವು ಒದಗಿಸಿದೆ ಎಂದು ಧರ್ಮಸ್ಥಳ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವಿರೂಪಾಕ್ಷ ಗಾದಗಿ‌ ಹೇಳಿದರು.

ಧರ್ಮಸ್ಥಳ ಸಂಸ್ಥೆಯಿಂದ ತಾಲೂಕಿನ ಶಮಶೀರನಗರ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮಂಜೂರಾದ 1.5 ಲಕ್ಷ ರು. ಚೆಕ್‌ ಬುಧವಾರ ಮಂದಿರ ಪ್ರಮುಖರಿಗೆ ವಿತರಿಸಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಸಮಾಜದ ಉನ್ನತಿಗೆ ಶ್ರಮಿಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ಸಂಸ್ಥೆ ಮಾಡುತ್ತಿರುವ ಕೆಲಸಕಾರ್ಯ ಮಾದರಿಯಾಗಿವೆ. ಗಡಿ ಜಿಲ್ಲೆಯ 121 ಮಂದಿರಗಳ ಜೀರ್ಣೋದ್ಧಾರಕ್ಕೆ ಸಂಸ್ಥೆ ಧನ ಸಹಾಯ ನೀಡಿ, ನಮ್ಮ ಸಂಸ್ಕೃತಿ, ಧಾರ್ಮಿಕ ಪರಂಪರೆ ಪುನರುತ್ಥಾನಕ್ಕೆ ಕೈಜೋಡಿಸಿದೆ ಎಂದು ಹೇಳಿದರು.

ಯಾವುದೇ ಕ್ಷೇತ್ರ ಬಿಡದಂತೆ ಸರ್ವರ ಹಿತ, ಸಮಗ್ರ ವಿಕಾಸದ ಗುರಿಯೊಂದಿಗೆ ಈ ಸಂಸ್ಥೆ ಸರ್ಕಾರ ಮಾಡದಂಥ ಕೆಲಸಗಳನ್ನು ಮಾಡುತ್ತಿದೆ. ಲಕ್ಷಾಂತರ ಜನರ ಬದುಕಿಗೆ ಹೊಸ ದಿಕ್ಕು ಕೊಟ್ಟ ಶ್ರೇಯ ಈ ಸಂಸ್ಥೆಗೆ ಸಲ್ಲುತ್ತದೆ. ಮಂದಿರಗಳ ಜೀರ್ಣೋದ್ಧಾರ ಜೊತೆಗೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಸಮುದಾಯ ಭವನಗಳಿಗೆ ಸುಮಾರು 70 ಲಕ್ಷ ರುಗಳ. ಅನುದಾನ ಕಲ್ಪಿಸಿದೆ ಹೀಗೆಯೇ ಹಗ್ಗಡೆ ಅವರ ಸಮಾಜೋಧಾರ್ಮಿಕ ಸೇವೆ ಅವಿಸ್ಮರಣೀಯ ಎಂದು ಬಣ್ಣಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಜಿಲ್ಲಾ ನಿರ್ದೇಶಕ ಮುರಳೀಧರ್‌ ಮಾತನಾಡಿ, ಮಹಿಳಾ ಸಬಲೀಕರಣಕ್ಕಾಗಿ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. 6 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ರಚನೆ ಹಾಗೂ ಇವುಗಳಿಗೆ ಸಾಲ ವಿತರಣೆ, ಒಟ್ಟು ವಹಿವಾಟಿನಲ್ಲಿ ಸಂಸ್ಥೆ ವಿಶ್ವ ದಾಖಲೆ ಮಾಡಿದೆ. ಕಡಿಮೆ‌ ಬಡ್ಡಿ ದರದಲ್ಲಿ ಸಾಲ ನೀಡಿ, ಲಕ್ಷಾಂತರ ಬಡ ಕುಟುಂಬಕ್ಕೆ ಆರ್ಥಿಕವಾಗಿ ಮೇಲೆತ್ತಲಾಗಿದೆ. ಡಾ. ವೀರೇಂದ್ರ ಹೆಗ್ಗಡೆ ಅವರು ಆರ್ಥಿಕ ಮೌನಕ್ರಾಂತಿ ಮಾಡುತ್ತಿದ್ದಾರೆ ಎಂದು ಹೇಳಿದರು.

ರೈತರ ಕೃಷಿ ಉತ್ಪಾದನೆ ಹೆಚ್ಚಿಸಲು ಅನೇಕ ಕಾರ್ಯಗಳನ್ನು ಧರ್ಮಸ್ಥಳ ಸಂಸ್ಥೆ ಹಮ್ಮಿಕೊಂಡಿದೆ. ಇದರಿಂದಾಗಿ ಬರಡು ಭೂಮಿಗಳಲ್ಲಿ ಸಹ ಈಗ ಬಂಗಾರದಂಥ ಬೆಳೆ ತೆಗೆಯಲಾಗುತ್ತಿದೆ. ಈ ವರ್ಷ ಬೀದರ್‌ ಜಿಲ್ಲೆಯಲ್ಲಿ ಐವತ್ತಕ್ಕೂ ಹೆಚ್ಚು ಕೆರೆಗಳ ಹೂಳೆತ್ತುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡ ಲಾಗುವುದು. ಇದರಲ್ಲಿ ಶಮಶೀರನಗರದ ನಂದಿ ಬಸವೇಶ್ವರ ದೇವಸ್ಥಾನ ಹತ್ತಿರ ಇರುವ 100 ಎಕರೆ ವಿಸ್ತೀರ್ಣದ ಕೆರೆ ಹೂಳೆತ್ತುವ ಕಾಮಗಾರಿ ಮಾಡಲಾಗುತ್ತದೆ ಎಂದು ಹೇಳಿದರು.

ಧರ್ಮಸ್ಥಳ ಜನಜಾಗೃತಿ ವೇದಿಕೆ ಸದಸ್ಯರಾದ ಯುವ ಮುಖಂಡ ರಾಜು ಪಸಾರ ಮಾತನಾಡಿ, ಜಿಲ್ಲೆಯಲ್ಲಿ ಡಾ.ಹೆಗ್ಗಡೆ ಅವರು ಕ್ಷೀರಕ್ರಾಂತಿಯೇ ಮಾಡಿದ್ದಾರೆ. ಅವರ ರಾಜ್ಯಸಭೆಯ ಸುಮಾರು 7 ಕೋಟಿ ರು.ಗಳ ಅನುದಾನ ಬೀದರ್‌ ಜಿಲ್ಲೆಯಲ್ಲಿ ಹೈನೋದ್ಯಮ ಅಭಿವೃದ್ಧಿಗೆ ನೀಡಿದ್ದಾರೆ. ಈ ಕಾರ್ಯ ಅನೇಕ ಬಡ ರೈತರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದೆ ಎಂದರು.

ಇನ್ನು, ಯಾವುದೇ ಫಲಾಪೇಕ್ಷೆಯಿಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜನ ಸೇವಾ ಕಾರ್ಯದಲ್ಲಿ ತೊಡಗಿದೆ. ಸಂಸ್ಥೆಯ 42 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಅವಿರತವಾಗಿ ದುಡಿಯುತ್ತಿದ್ದು, 12 ಸಾವಿರ ಸೇವಾ ಕೇಂದ್ರಗಳು ಗ್ರಾಮೀಣರಿಗೆ ಸೇವೆ ನೀಡುತ್ತಿವೆ ಎನ್ನುತ್ತಾರೆ ಧರ್ಮಸ್ಥಳ ಜನಜಾಗೃತಿ ವೇದಿಕೆ ಅಧ್ಯಕ್ಷ ವಿರೂಪಾಕ್ಷ ಗಾದಗಿ.

ಸಂಸ್ಥೆ ಯೋಜನಾಧಿಕಾರಿ ಮಯೂರ್‌ , ಗ್ರಾಮದ ಮುಖಂಡರಾದ ಶಿವರಾಜ ಪಾಟೀಲ್‌, ವೀರಶೆಟ್ಟಿ ಪಾಟೀಲ್‌, ಸೋಮನಾಥ ಮೈಲೂರೆ, ದಶರಥ ಕೋಳಿ, ಮಲ್ಲಿಕಾರ್ಜುನ, ಚನ್ನಮಲಯ್ಯ ಸ್ವಾಮಿ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ